ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ಕೆಇಬಿ ಕಚೇರಿ ಮುಂದೆ ವಿದ್ಯುತ್ ಸಂಪರ್ಕ ತೊಂದರೆ ಬಗೆಹರಿಸಲು ಆಗ್ರಹಿಸಿ ರೈತ ಭಾರತ ಪಕ್ಷದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಕೆಂಗನಾಳ ನೇತೃತ್ವದಲ್ಲಿ ಹಮ್ಮಿಕೊಂಡ ಅನಿರ್ದಿಷ್ಟ ಧರಣಿ ಸತ್ಯಾಗ್ರಹಕ್ಕೆ ಬೆಂಬಲಿಸಿ ಮಾತನಾಡಿದರು. ರೈತ ಭಾರತ ಪಕ್ಷದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಕೆಂಗನಾಳ ಮಾತನಾಡಿ, ಹುಬ್ಬಳ್ಳಿ ವಿದ್ಯುತ್ ಸರಬರಾಜು ನಿಗಮಕ್ಕೆ ಹಲವಾರು ಬಾರಿ ವಿನಂತಿಸಿಕೊಂಡರೂ ವಿದ್ಯುತ್ ಸಮಸ್ಯೆಗಳಿಗೆ ಸ್ಪಂದಿಸದೇ ಇರುವುದು ತುಂಬಾ ಖೇದಕರ ಸಂಗತಿಯಾಗಿದೆ. ಸಾರ್ವಜನಿಕರ ಹೊಸ ನಿವೇಶನಗಳಿಗೆ ಸರ್ಕಾರ ವಿದ್ಯುತ್ ಸಂಪರ್ಕ ನೀಡದೇ ಕತ್ತಲೆ ಭಾಗ್ಯವನ್ನು ಕರಣಿಸುವ ಮೂಲಕ ಜನವಿರೋಧಿ ನೀತಿ ಅನುಸರಿಸುತ್ತಿದೆ. ಕೂಡಲೇ ಸರ್ಕಾರ ಹಾಗೂ ಅಧಿಕಾರಿಗಳು ಎಚ್ಚೆತ್ತುಕೊಂಡು ಸಮಸ್ಯೆ ಬಗೆ ಹರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ರೈತ ಭಾರತ ಪಕ್ಷದ ಜಿಲ್ಲಾಧ್ಯಕ್ಷ ವಿನೋದ ಖೇಡ ಮಾತನಾಡಿ, ಒಸಿ ಹಾಗೂ ಸಿಸಿ ಸಲುವಾಗಿ ಕರ್ನಾಟಕ ರಾಜ್ಯದ ಸಾರ್ವಜನಿಕರಿಗೆ ಎಲ್ಲಾ ಮಾದರಿ ವಿದ್ಯುತ್ ಸಂಪರ್ಕವನ್ನು ನೀಡದೇ ಇರುವ ಸರ್ಕಾರದ ನಡೆಯನ್ನು ಖಂಡನೀಯ. ರೈತರ ಪಂಪ್‌ಸೆಟ್‌ಗಳಿಗೆ ಸರ್ವಿಸ್ ಮೇನ್‌ಗಳಲ್ಲಿ ಬರುವ ಸ್ಥಾವರಗಳಿಗೆ ದಂಡವನ್ನು ತುಂಬಿಸಿಕೊಳ್ಳದೇ ಡಿಪೋಸಿಟ್ ಹಣ ತುಂಬಿಸಿಕೊಂಡು ರೈತರಿಗೆ ವಿದ್ಯುತ್ ಸಂಪರ್ಕ ನೀಡಬೇಕು. ಸ್ಮಾರ್ಟ್ ಮೀಟರ್ ದರವನ್ನು ಪುನರ್ಪರಿಶೀಲಿಸಿ ಕಡಿಮೆ ಮಾಡಬೇಕು ಎಂದು ಆಗ್ರಹಿಸಿದರು.ಸಾಹಿತಿ ಹಾಗೂ ಹೋರಾಟಗಾರ ಲಾಯಪ್ಪ ಇಂಗಳೆ ಮಾತನಾಡಿ, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾತು ಮಾತಿಗೆ ನಮ್ಮದು ನುಡಿದಂತೆ ನಡೆದ ಸರ್ಕಾರ ಎಂದು ಹೇಳಿಕೊಳ್ಳುತ್ತಾರೆ. ಜನರಿಗೆ ಬೇಕಾದ ಮೂಲಭೂತ ಸೌಲಭ್ಯಗಳಾದ ವಿದ್ಯುತ್ ಸಂಪರ್ಕ, ಕುಡಿಯುವ ನೀರು, ಸುರಕ್ಷಿತ ರಸ್ತೆ ಸಂಪರ್ಕ ಒದಗಿಸಲು ವಿಫಲವಾಗಿದೆ. ಸರ್ಕಾರ ಕೇವಲ ವಿಶ್ವಗುರು ಬಸವಣ್ಣನವರ ಭಾವಚಿತ್ರವನ್ನು ವಿಧಾನಸೌಧ ಹಾಗೂ ಸರ್ಕಾರಿ ಕಚೇರಿಗಳಲ್ಲಿ ಅಳವಡಿಸಿದರೇ ಸಾಲದು ಬಸವಣ್ಣನವರ ಕಲ್ಯಾಣ ರಾಜ್ಯ ನಿರ್ಮಾಣವಾಗಬೇಕಾದರೇ ಸಮಾಜದ ಎಲ್ಲ ವರ್ಗದ ಜನರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಮುಖಂಡರಾದ ಸಂಜುಕುಮಾರ ಶೆಟಗಾರ, ಪ್ರಕಾಶ ಸಬರದ, ಅಶೋಕ ವಾಲಿಕಾರ, ಜಗದೇಶ ಸೂರ್ಯವಂಶಿ, ಸಂಜೀವಕುಮಾರ ಶಿಂಧೆ, ಅಂಬಣ್ಣ ಗುನ್ನಾಪೂರ, ರಾಜು ಕುಮಟಗಿ, ಸೋಮಶೇಕರ ಮೆಂಡೇಗಾರ, ಸಂತೋಷ ಕಲಗುಡಿ, ಮಲ್ಲಿಕಾರ್ಜುನ ಲಂಗೋಟಿ, ಭಜರಂಗ ಶಿಂಧೆ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.