ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ನೋಂದಾಯಿಸಿದ ನಿರುದ್ಯೋಗಿ ಅಭ್ಯರ್ಥಿಗಳ ಪಟ್ಟಿ ಪಡೆದು ಅಭ್ಯರ್ಥಿಗಳನ್ನು ಸಂಪರ್ಕಿಸಿ ಅವರಿಗೆ ಆಸಕ್ತಿ ಇರುವ ಕ್ಷೇತ್ರದಲ್ಲಿ ತರಬೇತಿ ನೀಡಿ
ಕೊಪ್ಪಳ: ಎಸ್‌ಬಿಐ ಆರ್‌ಸೆಟ್‌ಇ ಸಂಸ್ಥೆಯಲ್ಲಿ ತರಬೇತಿ ಪೂರ್ಣಗೊಳಿಸಿದ ಅರ್ಹ ಫಲಾನುಭವಿಗಳಿಗೆ ಸ್ವ-ಉದ್ಯೋಗ ಪ್ರಾರಂಭಿಸಲು ಅಗತ್ಯ ಸಾಲ ಸೌಲಭ್ಯ ಕಲ್ಪಿಸಿಕೊಡಬೇಕೆಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಪಂ ಸಮಿತಿ ಸಭಾಂಗಣದಲ್ಲಿ ಬುಧವಾರ ಎಸ್‌ಬಿಐ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಿಂದ ಜರುಗಿದ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿವಿಧ ಇಲಾಖೆಗಳ ಬೇರೆ-ಬೇರೆ ಯೋಜನೆಗಳಡಿ ಹೊಸ ತರಬೇತಿ ಕಾರ್ಯಾಗಾರ ಆರ್‌ಸೆಟ್‌ಇ ಸಂಸ್ಥೆಯ ಸಹಯೋಗದೊಂದಿಗೆ ಹಮ್ಮಿಕೊಳ್ಳಲು ಕ್ರಮ ವಹಿಸಿ ನಮ್ಮ ಜಿಲ್ಲೆಯ ಅವಶ್ಯಕತೆ ಹಾಗೂ ಸಾರ್ವಜನಿಕರ ಆಸಕ್ತಿಗೆ ಅನುಗುಣವಾಗಿ ತರಬೇತಿ ವಿಷಯ ಆಯ್ಕೆ ಮಾಡಿಕೊಂಡು ತರಬೇತಿ ನೀಡಬೇಕು. ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ನೋಂದಾಯಿಸಿದ ನಿರುದ್ಯೋಗಿ ಅಭ್ಯರ್ಥಿಗಳ ಪಟ್ಟಿ ಪಡೆದು ಅಭ್ಯರ್ಥಿಗಳನ್ನು ಸಂಪರ್ಕಿಸಿ ಅವರಿಗೆ ಆಸಕ್ತಿ ಇರುವ ಕ್ಷೇತ್ರದಲ್ಲಿ ತರಬೇತಿ ನೀಡಿ, ಸ್ವಯಂ ಉದ್ಯೋಗ ಕೈಗೊಳ್ಳಲು ಸಂಸ್ಥೆ ಹಾಗೂ ಲೀಡ್ ಬ್ಯಾಂಕ್ ನಿಂದ ಅಗತ್ಯ ಅನುಕೂಲ ಮಾಡಿಕೊಡಬೇಕು. ಇದರ ಜತೆ ವಿವಿಧ ಇಲಾಖೆಗಳ ಮೂಲಕ ದೊರೆಯುವ ಸಹಾಯಧನ, ಸಾಲ ಸೌಲಭ್ಯಗಳ ಬಗ್ಗೆಯೂ ಮಾಹಿತಿ ನೀಡಬೇಕು ಎಂದರು.
ತರಬೇತಿ ಸಂಸ್ಥೆಯಲ್ಲಿ ಕೌಶಲ್ಯಾಧಾರಿತ ವೃತ್ತಿ ಮಾತ್ರವಲ್ಲದೆ, ಯುವಕರಿಗೆ ಹೆಚ್ಚಿನ ಆಸಕ್ತಿ ಇರುವಂತಹ ಎಲೆಕ್ಟ್ರೀಕಲ್, ಟೆಕ್ಸ್ಟೈಲ್ಸ್, ಜೇನು ಸಾಕಾಣಿಕೆ, ಕುರಿ ಸಾಕಾಣಿಕೆ, ತೋಟಗಾರಿಕೆ ಬೆಳೆಗಳ ಪದ್ಧತಿ, ಮೀನುಗಾರಿಕೆ, ಹೈನುಗಾರಿಕೆ, ಕಂಪ್ಯೂಟರ್ ತರಬೇತಿ ಹೀಗೆ ಹೊಸ, ಹೊಸ ವಿಷಯಗಳ ಬಗ್ಗೆ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಬೇಕು. ತರಬೇತಿ ಕೇಂದ್ರದಲ್ಲಿ ಅಗತ್ಯ ಮೂಲಭೂತ ಸೌಕರ್ಯ ಒದಗಿಸುವುದರ ಜತೆಗೆ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ ಅಭ್ಯರ್ಥಿಗಳಿಗೆ ಉತ್ತಮ ಗುಣಮಟ್ಟದ ಆಹಾರ ನೀಡಬೇಕು ಎಂದು ಹೇಳಿದರು.
ಕೊಪ್ಪಳ ಲೀಡ್ ಬ್ಯಾಂಕ್‌ನ ವ್ಯವಸ್ಥಾಪಕ ಮಾರುತಿ ಕೆ.,ಆರ್‌ಸೆಟಿ ನಿರ್ದೇಶಕ ರಾಯೇಶ್ವರ ಪೈ,ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ತಾರಕೇಶ್ವರ, ಜಿಲ್ಲಾ ಖಾದಿ ಮತ್ತು ಗ್ರಾಮೋದ್ಯೋಗಾಧಿಕಾರಿ ವಿರೇಶ್, ನಬಾರ್ಡ್ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ಮಹಾದೇವ ಕೀರ್ತಿ, ಎಸ್‌ಬಿಐ ಆರ್‌ಸೆಟ್‌ಇ ಜಿಲ್ಲಾ ಮಟ್ಟದ ಸಲಹಾ ಸಮಿತಿಯ ಸದಸ್ಯರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.