ರೈತರು ಉತ್ತಮ ಬೀಜ ಬಿತ್ತಬೇಕಲ್ಲದೆ ಸಾವಯವ ಮತ್ತು ನೈಸರ್ಗಿಕ ಕೃಷಿಯತ್ತ ಗಮನಹರಿಸಬೇಕು.
ಕೊಪ್ಪಳ: ರೈತರು ಸಾವಯವ ಮತ್ತು ನೈಸರ್ಗಿಕ ಕೃಷಿಯತ್ತ ಚಿತ್ತ ಹರಿಸಬೇಕು ಎಂದು ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಶೇಖರಗೌಡ ಮಾಲಿ ಪಾಟೀಲ್ ಹೇಳಿದರು.
ನಗರದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಲ್ಲಿ ಬುಧವಾರ ವಿಸ್ತರಣಾ ನಿರ್ದೇಶನಾಲಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರು, ವಿಸ್ತರಣಾ ನಿರ್ದೇಶಕರು, ಡಾ.ಎ.ಆರ್.ಕುರುಬರ ನಿರ್ದೇಶನದಂತೆ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಆತ್ಮಯೋಜನೆ ಕೃಷಿ ಇಲಾಖೆ, ಕೃಷಿಕ್ ಸಮಾಜ ಸಹಯೋಗದಲ್ಲಿ ಜರುಗಿದ ಮುಂಗಾರು ಆಂದೋಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಬದಲಾದ ಪರಿಸ್ಥಿತಿಯಲ್ಲಿ ಗೊಬ್ಬರಗಳ ಒಂದು ಕೊರತೆಯ ಸಂದರ್ಭದಲ್ಲಿ ರೈತರು ಸಾವಯವ ಕೃಷಿ ಮತ್ತು ನೈಸರ್ಗಿಕ ಕೃಷಿಯತ್ತ ಹಂತ ಹಂತವಾಗಿ ಹೆಜ್ಜೆ ಇಡುತ್ತ ಕೃಷಿ ಮುಂದುವರಿಸಿಕೊಂಡು ಹೋಗಬೇಕಾಗಿದೆ. ಕೃಷಿಯಲ್ಲಿ ಇತ್ತಿಚೇಗೆ ರಾಸಾಯನಿಕಗಳ ಮೊರೆ ಹೋಗಿ ರೈತ ಹೆಚ್ಚು ಕೈ ಸುಟ್ಟುಕೊಳ್ಳುತ್ತಿದ್ದಾನೆ. ಕೃಷಿ ರೈತರಿಗೆ ಖುಷಿ ನೀಡುತ್ತಿಲ್ಲ. ರೈತ ವರ್ಗದವರು ಸಹ ಕೃಷಿಯಲ್ಲಿ ನಾನಾ ಸುಧಾರಣಾ ಕ್ರಮ ತೆಗೆದುಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣಮೂರ್ತಿ ಮಾತನಾಡಿ, ರೈತರು ಉತ್ತಮ ಬೀಜ ಬಿತ್ತಬೇಕಲ್ಲದೆ ಸಾವಯವ ಮತ್ತು ನೈಸರ್ಗಿಕ ಕೃಷಿಯತ್ತ ಗಮನಹರಿಸಬೇಕು. ಹಂತ ಹಂತವಾಗಿ ತಮ್ಮ ಕುಟುಂಬಗೋಸ್ಕರವಾಗಿಯಾದರೂ ನೈಸರ್ಗಿಕ ಕೃಷಿ ಅನುಸರಿಸಬೇಕಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಇಲಾಖೆಯಲ್ಲಿ ಲಭ್ಯವಿರುವ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಯಿತು. ಬೆಂಬಲ ಬೆಲೆ ಎನ್ನುವುದು ಬೇಡಿಕೆ ಮೇಲೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ನಿರ್ಧರಿಸುತ್ತವೆ ಎಂದು ಹೇಳಿದರು.
ತಿಮ್ಮಣ್ಣಚವಡಿ ವ್ಯವಸ್ಥಾಪನ ಮಂಡಳಿಯ ಸದಸ್ಯರು ರಾಯಚೂರ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ವ್ಯವಸ್ಥಾಪನ ಮಂಡಳಿಯ ತಿಮ್ಮಣ್ಣ ಚವಡಿ ಮಾತನಾಡಿ, ರೈತರು ವಿಜ್ಞಾನಿಗಳ ಮಾರ್ಗದರ್ಶನದಲ್ಲಿ ಸಾವಯವ ಕೃಷಿ ಮತ್ತು ನೈಸರ್ಗಿಕ ಕೃಷಿ ಕೈಗೊಳ್ಳಬೇಕು ಎಂದರು.
ಮಹಿಳೆಯರು ಒಣ ಹಾಕಿದ ಬಟ್ಟೆ ಹಾರಿ ಹೋದಾಗ ತಮ್ಮ ಮನೆಗೆ ಮರಳಿ ತೆಗೆದುಕೊಂಡು ಬರುತ್ತಾರೋ ಹಾಗೆಯೇ ರೈತರು ತಮ್ಮ ಹೊಲದಿಂದ ಕೊಚ್ಚಿ ಹೋಗುವ ಮಣ್ಣನ್ನು ಮರಳಿ ತಂದು ಭೂಮಿಯ ಫಲವತ್ತತೆ ಹಾಳಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಸ್ತರಣಾ ಮುಂದಾಳು ಡಾ.ಬದರಿ ಪ್ರಸಾದ, ಮುಂಗಾರು ಆಂದೋಲನ ಆರಂಭಿಸಲಾಗಿದ್ದು, ರೈತರು ನಿರಂತರವಾಗಿ ಇಲ್ಲಿ ನಡೆಯುವ ತರಬೇತಿಗಳ ಮೂಲಕ ಕೃಷಿಯಲ್ಲಿ ಹೆಚ್ಚಿನ ತಾಂತ್ರಿಕತೆ ಅಳವಡಿಸಿಕೊಂಡು ಲಾಭ ಪಡೆದುಕೊಳ್ಳಬೇಕು. ರೈತರು ಯಾವುದೇ ವಿಷಯದ ಬಗ್ಗೆ ಇಲ್ಲಿ ತರಬೇತಿ ಪಡೆದುಕೊಳ್ಳಬಹುದು ಎಂದರು.
ಜೂ.೨೦ರಂದು ಸಾವಯವ ಕೃಷಿ ಕುರಿತು ಧಾರವಾಡದ ಆಡಿ. ಶಿವಶಂಕರ್ ಕುರೇಶಿ, ತಿಮ್ಮಾಪೂರ ಹೊಲದಲ್ಲಿ ಶ್ರೀಪಾದ ಮುರುಡಿ ಉಪನ್ಯಾಸಕರಾಗಿ ಆಗಮಿಸುತ್ತಿದ್ದು, ರೈತರು ಇದರ ಸದ್ವಿನಿಯೋಗ ಮಾಡಿಕೊಳ್ಳಬೇಕು. ಅಲ್ಲದೇ ಜು. ೫ರಂದು ಶ್ರೀನಿವಾಸ್ ಜಾಲಿಹಾಳ್ ನೆರೆಗಲ್ ಗ್ರಾಮರವರ ತೋಟದಲ್ಲಿ ಮಣ್ಣಿನೊಂದಿಗೆ ಮಾತುಕತೆ ಎಂಬ ವಿಶೇಷ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಾಂತ್ರಿಕತೆ ತಿಳಿದುಕೊಳ್ಳಬೇಕು ಎಂದು ಹೇಳಿದರು.
ಪ್ರಗತಿಪರ ರೈತ ಲಿಂಗಪ್ಪ, ಶ್ರೀನಿವಾಸ ಜಾಲಿಹಾಳ್, ಜಡೆ ಸ್ವಾಮಿ, ಬಸವರಾಜ ಗೊಂಡಬಾಳ ಸಾವಯವ ಕೃಷಿ ಕುರಿತು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಕೃಷಿಕ ಸಮಾಜದ ಉಪಾಧ್ಯಕ್ಷ ವಿರೂಪಣ್ಣ ನವೋದಯ, ರಾಜ್ಯ ನಿರ್ದೇಶಕ ಶಿವರಾಮ ಮಾತನಾಡಿದರು. ತಾಂತ್ರಿಕ ಗೋಷ್ಠಿಯಲ್ಲಿ ಡಾ.ರಾಘವೇಂದ್ರ, ಡಾ. ಅವಿನಾಶ, ಕೃಷಿಕ ಸಮಾಜದ ಎಲ್ಲ ತಾಲೂಕಾಧ್ಯಕ್ಷರು, ಎಲ್ಲ ಇಲಾಖೆಯ ಅಧಿಕಾರಿಗಳು ಮತ್ತು ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಇತರರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.