ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯಿಂದ ಬೂತಮಟ್ಟದಿಂದ ರಾಜ್ಯಮಟ್ಟದವರೆಗೆ ಪಕ್ಷದ ಬಲಪಡಿಸಲು ಸಂಘಟನ ಸೃಜನ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಎಸ್.ಆರ್.ಪಾಟೀಲ ಹೇಳಿದರು.ಪಟ್ಟಣದ ಸೈನಿಕ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಕರ್ನಾಟಕ ಕಾಂಗ್ರೆಸ್ ಸಮಿತಿ ಹಮ್ಮಿಕೊಂಡಿದ್ದ ಸಂಘಟನ ಸೃಜನ ಅಭಿಯಾನದಲ್ಲಿ ಮಾತನಾಡಿದ ಅವರು, ಪಕ್ಷದ ವೀಕ್ಷಕರು ಮತಕ್ಷೇತ್ರದಲ್ಲಿ ಸುತ್ತಾಡಿ ಸಮಾಲೋಚಿಸಿ ತಮ್ಮೆಲ್ಲರ ವಿಶ್ವಾಸ ಹಾಗೂ ಅಭಿಪ್ರಾಯ ಸಂಗ್ರಹಿಸಿ ಯೋಗ್ಯ ಜಿಲ್ಲಾಧ್ಯಕ್ಷರ ಆಯ್ಕೆ ಮಾಡಿ ಕೇಂದ್ರ ಸಮಿತಿಗೆ ಕಳುಹಿಸುವುದು ಅಭಿಯಾನದ ಉದ್ದೇಶವಾಗಿದೆ ಎಂದರು.
ಪ್ರದೇಶ ಸಮಿತಿಯ ವೀಕ್ಷಕ ಸಚಿನ್ ಯಾದವ ಮಾತನಾಡಿ, ಯುವಕರು, ಮಹಿಳೆಯರು, ಪರಿಶಿಷ್ಟರು, ಅಲ್ಪಸಂಖ್ಯಾತರು ಹಾಗೂ ಎಲ್ಲಾ ಸಮುದಾಯದವರಿಗೆ ಪಕ್ಷದಲ್ಲಿ ಸಮಾನ ಅವಕಾಶ ಮತ್ತು ಪ್ರಾತಿನಿಧ್ಯ ನೀಡುವುದೇ ಅಭಿಯಾನದ ಮೂಲ ಸಂದೇಶವಾಗಿದೆ. ಸರ್ಕಾರದ ಜನಪರ ಯೋಜನೆಗಳು, ಗ್ಯಾರಂಟಿ ಯೋಜನೆಗಳನ್ನು ಮನೆ, ಮನೆಗೆ ತಲುಪಿಸಿ ಜನರೊಂದಿಗೆ ನೇರ ಸಂಪರ್ಕ ಬೆಳೆಸಬೇಕಿದೆ. ಪಕ್ಷದ ವಿಚಾರಧಾರೆ, ಇತಿಹಾಸ ಮತ್ತು ಸಂವಿಧಾನದ ಮೌಲ್ಯಗಳನ್ನು ಹೊಸ ಪೀಳಿಗೆಗೆ ತಲುಪಿಸುವ ಕಾರ್ಯಾಗಾರಗಳನ್ನು ಪ್ರತಿ ಜಿಲ್ಲೆಯಲ್ಲಿಯೂ ನಡೆಸಲಾಗುತ್ತಿದೆ. ಹಳೆಯ ಹಾಗೂ ಹೊಸ ಕಾರ್ಯಕರ್ತರನ್ನು ಒಗ್ಗೂಡಿಸಿ ಒಂದು ಕುಟುಂಬ-ಒಂದು ಧ್ಯೇಯ ಎಂಬಂತೆ ಪಕ್ಷ ಬಲಿಷ್ಠಗೊಳಿಸುವುದೇ ಸೃಜನ ಅಭಿಯಾನದ ಗುರಿ ಎಂದು ತಿಳಿಸಿದರು.ಕೆಪಿಸಿಸಿ ಸದಸ್ಯರಾದ ಭೀಮಣ್ಣ ಮೇಟಿ, ರಾಘವೇಂದ್ರ, ಸಮಿತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈರಣ್ಣ ಪಟ್ಟಣಶೆಟ್ಟಿ, ಭಾಗ್ಯರಾಜ ಸೊನ್ನದ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಚಂದ್ರಶೇಖರಗೌಡ ಪಾಟೀಲ, ಬಸವನಬಾಗೇವಾಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ಕೊಲ್ಹಾರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಫೀಕ್ ಪಕಾಲಿ, ಮಹಿಳಾ ಘಟಕದ ಅಧ್ಯಕ್ಷೆ ರುಕ್ಮಿಣಿ ರಾಠೋಡ, ಮುಸ್ಕಾನ್ ಶಿರಬೂರ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಮೈಬೂಬ್ ನಾಯ್ಕೋಡಿ, ಸಂತೋಷ ಗಣಾಚಾರಿ, ರಮೇಶ ಮಾಗಿ, ಪಿಂಟುಗೌಡ ಪಾಟೀಲ, ಸಂಗಮೇಶ ಓಲೇಕಾರ, ಶೇಖರ ಗೊಳಸಂಗಿ, ದ್ಯಾವನಗೌಡ ಪಾಟೀಲ, ದಾದಾಗೌಡ ಪಾಟೀಲ,ಪರಶುರಾಮ ಜಮಖಂಡಿ, ಕಮಾಲಸಾಬ ಕೊರಬು, ಶಬ್ಬೀರ್ ನದಾಫ್, ಅಜೀಜ್ ಬಾಗವಾನ ಇತರರು ಇದ್ದರು. ಸುರೇಶಗೌಡ ಪಾಟೀಲ ಸ್ವಾಗತಿಸಿದರು. ಮೈಬೂಬ್ ನಾಯ್ಕೋಡಿ ನಿರೂಪಿಸಿದರು. ರಂಜಾನ್ ಹೆಬ್ಬಾಳ ವಂದಿಸಿದರು.