ಮಂಗಳೂರು: ದಕ್ಷಿಣ ಕನ್ನಡ ಫ್ಲವರ್‌ ಡೆಕೋರೇಟರ್ಸ್‌ ಮಾಲಕರ ಸಂಘ ಮಂಗಳೂರು ವತಿಯಿಂದ ಮಂಗಳೂರಿನ ಮರೋಳಿ ಸೂರ್ಯ ವುಡ್ಸ್‌ನಲ್ಲಿ ನಡೆದ ನಾಲ್ಕನೇ ವರ್ಷದ ‘ಪುರ್ಪದ ಗೆಲ್ಮೆನ ಆಟಿದ ಕಮ್ಮೆನ’ ಕಾರ್ಯಕ್ರಮ ತುಳುನಾಡಿನ ಹಿಂದಿನ ಕಾಲದ ಸೊಬಗನ್ನು ತೆರೆದಿಡುವಲ್ಲಿ ಯಶಸ್ವಿಯಾಗಿದೆ.ಮಂಗಳೂರಿನ ಮರೋಳಿ ಸೂರ್ಯವುಡ್ಸ್‌ನಲ್ಲಿ ಕಾರ್ಯಕ್ರಮ ನಡೆಯಿತು. ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಮತ್ತು ಸಂಘದ ಗೌರವಾಧ್ಯಕ್ಷ ಡಾ.ಮೋಹನ್‌ ಆಳ್ವ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಸುಲಕ್ಷಣ್‌ ಬಿ.ರೈ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ಎಕ್ಸ್ಪೋ ಆಯೋಜಕ ಎಸ್‌.ಕೆ.ಪ್ರಭುದೇವಾ, ಅಧೃತ್‌ ಪೈಬರ್‌ ಮಾಲೀಕ ವಿನಾಯಕ ಕುಡುವ, ತುಳು ಅಕಾಡೆಮಿ ಮಾಜಿ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್‌ ಮತ್ತಿತರರು ಇದ್ದರು. ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತ ಅಕ್ಷರ ಸಂತ ಹರೇಕಳ ಹಾಜಬ್ಬ ಹಾಗೂ ನಿವೃತ್ತ ಶಿಕ್ಷಕ ಹಾಗೂ ವಿದ್ಯಾರ್ಥಿ ವೇತನದ ಮಾಹಿತಿ ನೀಡುವ ಸೇವೆ ನೀಡುತ್ತಿರುವ ನಾರಾಯಣ್‌ ನಾಯಕ್‌ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿ ಸಾಧಕರಿಗೆ ಪ್ರತಿಭಾ ಪುರಸ್ಕಾರ, ಹಿರಿಯ ಡೆಕೋರೇಟರ್‌ಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಅನಿಲ್‌ ಕೊಟ್ಟಾರಿ ಸ್ವಾಗತಿಸಿದರು. ಡಿಕ್ಸನ್‌ ಜೆ.ಡಿಸೋಜ ವಂದಿಸಿದರು. ಸೌಜನ್ಯ ಹೆಗಡೆ, ಸಾಯಿಲ್‌ ರೈ, ಸತೀಶ್ ಪೂಜಾರಿ, ಸೀತಾರಾಮ ಬೆಳ್ತಂಗಡಿ ನಿರೂಪಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ತುಳುನಾಡ ಸೊಬಗಿನ ಕಾರ್ಯಕ್ರಮ: ಕಾರ್ಯಕ್ರಮಕ್ಕಾಗಿ ತುಳುನಾಡಿನ ಪಾರಂಪರಿಕ ಮನೆಯ ಶೈಲಿಯನ್ನು ಹೋಲುವಂತಹ ಸೂರ್ಯ ಚಾವಡಿ ಆಕರ್ಷನೀಯವಾಗಿತ್ತು. ಈ ಚಾವಡಿ ತುಳುನಾಡಿನ ಗುತ್ತಿನ ಮನೆಯನ್ನು ಕಣ್ಣ ಮುಂದೆ ತಂದಿತ್ತು, ಚಾವಡಿಯಲ್ಲಿ ಮರದ ಚಯರ್‌, ಕುಳಿತುಕೊಳ್ಳುವ ಉಯ್ಯಾಲೆ, ಕೃಷಿ ಸಾಮಾಗ್ರಿಗಳು, ಸಾಂಪ್ರದಾಯಿಕ ವಸ್ತುಗಳು ಆಕರ್ಷನೀಯವಾಗಿತ್ತು. 100ಕ್ಕೂ ಅಧಿಕ ಬಗೆಯ ತಿನಿಸು: ಕಾರ್ಯಕ್ರಮದಲ್ಲಿ ಸುಮಾರು 100 ಹೆಚ್ಚು ಬಗೆಯ ತಿಂಡಿ ತಿನುಸುಗಳಿದ್ದವು. ಸದಸ್ಯರೇ ತಯಾರಿಸಿದ ತಿಂಡಿಗಳಾಳಾಗಿದ್ದು, ಪ್ರದರ್ಶನ ಮತ್ತು ವಿತರಿಸಲಾಯಿತು. ಗೋಲಿಸೋಡ, ಕಲ್ಪ ರಸ, ಪುನರ್‌ಪುಳಿ ಜ್ಯೂಸ್‌, ಜೀರಿಗೆ ಕಷಾಯ, ಬೊಂಡ, ಲಿಂಬೆ ಶರಬತ್‌, ಪಾನಕ, ಕಲಿ, ಚರ್‌ಮುರಿ, ತಿಮರೆ ಚಟ್ನಿ, ಕುಡು ಚಟ್ನಿ, ರಾಗಿ ಚಟ್ನಿ, ಪತ್ರಡ್ಡೆ, ಗಾರಿಗೆ, ಕಡ್ಲೆಮನೊಳಿ ಪಲ್ಯ, ಕಂಚಲ ಅಂಬಡೆ, ತಜಂಕು ಪೆಲತ್ತರಿ ಸುಕ್ಕ, ತೇಟ್ಲ ಗಸಿ, ಇಡ್ಲಿ, ಸೇಮಿಗೆ, ಅಕ್ಕಿ ಪತ್ರಿ, ಹಲಸಿನ ಹಣ್ಣು ಶೀರ, ಗುಜ್ಜೆ ಕಡ್ಲೆ ಗಸಿ, ನೀರ್‌ ದೋಸೆ, ಉಪ್ಪಡ್‌ ಪಚ್ಚಿರ್‌, ನುಗ್ಗೆ ಸೊಪ್ಪು ಉಪ್ಪುಕರಿ, ಮೆಂತ್ಯೆ ಗಂಜಿ, ಬಾಳೆ ಎಲೆ ಗಟ್ಟಿ, ಹಳದಿ ಎಲೆ ಗಟ್ಟಿ, ಹಲಸಿನ ಗಟ್ಟಿ, ಗೋಳಿಬಜೆ, ಸೌತೆ ಪದೆಂಗಿ ಗಸಿ, ಬಸಳೆ ಕುಡು ಸಾರು, ಅಪ್ಪ, ಮೂಡೆ, ಉಪ್ಪಿನಕಾಯಿ, ಪುಂಡಿ ಗಸಿ, ಬೆಲ್ಲ ನೀರ್‌, ಮೊಸರು, ಪಾಯಸ, ಬಾಳೆಹಣ್ಣು ರಸಾಯನ, ಕಣಿಲೆ ಉಪ್ಪಡು, ಕೋರಿ ರೊಟ್ಟಿ, ಅನ್ನ ರಸಂ, ಉಪ್ಪುದ ನೆಲ್ಲಿ, ಉಪ್ಪುದ ತೆಕ್ಕರೆ, ಉಪ್ಪುದ ಕುಕ್ಕು... ಹೀಗೆ 100ಕ್ಕೂ ಹೆಚ್ಚು ಬಗೆಯ ಆಟಿಯ ವಿಶೇಷ ತಿನಿಸುಗಳಿದ್ದವು.

ಬಾಲ್ಯ ನೆನಪಿಸಿದ ಗೂಡು ಅಂಗಡಿ: ಕಾರ್ಯಕ್ರಮದಲ್ಲಿ ಬಾಲ್ಯವನ್ನು ನೆನಪಿಸುವಂತಹ ಗೂಡು ಅಂಗಡಿಯನ್ನೂ ಇಲ್ಲಿ ಮಾಡಲಾಗಿತ್ತು. 50ಕ್ಕಿಂತ ಹೆಚ್ಚಿನ ಮಿಠಾಯಿಗಳು ಹಾಗೂ ತಿಂಡಿ ತಿನಿಸುಗಳಿದ್ದರು. ಮಕ್ಕಳು ಸೇರಿದಂತೆ ದೊಡ್ಡವರು ಇಲ್ಲಿ ಭೇಟಿ ನೀಡಿ ಖರೀದಿ ಮಾಡಿದರು.