ಕನ್ನಡಪ್ರಭ ವಾರ್ತೆ ಬೆಳಗಾವಿ
ಕರ್ನಾಟಕ ಸ್ಟೇಟ್ ಸೀನಿಯರ್ ಸಿಟಿಜನ್ ಅಸೋಸಿಯೇಶನ್ ಬೆಳಗಾವಿ ಘಟಕದ ಪದಾಧಿಕಾರಿಗಳು ಜಿಲ್ಲಾ ಆಸ್ಪತ್ರೆಗೆ ಅನಿರೀಕ್ಷಿತ ಭೇಟಿ ನೀಡಿ, ಹಿರಿಯ ನಾಗರಿಕರಿಗೆ ಲಭ್ಯವಿರುವ ಸೌಲಭ್ಯಗಳನ್ನು ಪರಿಶೀಲಿಸಿದರು.
ಆಸ್ಪತ್ರೆಯಲ್ಲಿ ಹಿರಿಯ ನಾಗರಿಕರಿಗೆ ಲಭ್ಯವಿರುವ ಸೌಲಭ್ಯಗಳ ಕುರಿತು ಮಾಹಿತಿ ನೀಡಲು ಸಹಾಯವಾಣಿ ಕೇಂದ್ರ ಸ್ಥಾಪಿಸುವುದು ಹಾಗೂ ಜಾಹೀರಾತು ಫಲಕ ಅಳವಡಿಸುವುದು, ಹೊರರೋಗಿಗಳ ನೋಂದಣಿ ವಿಭಾಗ ಮತ್ತು ಔಷಧ ವಿತರಣಾ ಕೇಂದ್ರಗಳಲ್ಲಿ ಹಿರಿಯ ನಾಗರಿಕರಿಗೆ ಪ್ರತ್ಯೇಕ ಸರದಿ ಸಾಲಿನ ವ್ಯವಸ್ಥೆ ಕಲ್ಪಿಸಿ ಸೂಚನಾ ಫಲಕ ಹಾಕುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟರು.ಅಲ್ಲದೆ, ಆಸ್ಪತ್ರೆಯ ಪ್ರವೇಶದ್ವಾರದ ಬಳಿ ಗಾಲಿಕುರ್ಚಿ ವ್ಯವಸ್ಥೆ ಕಲ್ಪಿಸಿ, ಹಿರಿಯ ನಾಗರಿಕರಿಗೆ ಮಾರ್ಗದರ್ಶನ ನೀಡಲು ಸಿಬ್ಬಂದಿ ನೇಮಿಸಬೇಕು. ಹಿರಿಯ ನಾಗರಿಕರ ಒಳರೋಗಿ ವಿಭಾಗದ ಕಟ್ಟಡದ ಮುಂಭಾಗದಲ್ಲಿ ಪ್ರತ್ಯೇಕ ನಾಮಫಲಕ ಅಳವಡಿಸುವುದರ ಜತೆಗೆ, ಅದೇ ವಿಭಾಗದಲ್ಲಿ ಔಷಧ ವಿತರಣೆ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಸಂಘದ ಅಧ್ಯಕ್ಷ ಎ.ವೈ.ಬೆಂಡಿಗೇರಿ, ಹಿರಿಯ ಉಪಾಧ್ಯಕ್ಷ ಎಂ.ವಿ.ಹಿರೇಮಠ, ವಿ.ಜಿ.ನೀರಲಗಿಮಠ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.