ಕನ್ನಡಪ್ರಭ ವಾರ್ತೆ ಮಧುಗಿರಿ
ಇಲ್ಲಿನ ತಾ.ಪಂ. ಸಭಾಂಗಣದಲ್ಲಿ ಮಂಗಳವಾರ ನಡೆದ ತಾಲೂಕು ಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಂದುಕೊರತೆ ಸಭೆಯಲ್ಲಿ ನಿವೇಶನ ಹಂಚಿಕೆ, ಮೂಲಭೂತ ಸೌಕರ್ಯ, ಸ್ಮಶಾನ ಜಮೀನು, ಪೌರಕಾರ್ಮಿಕರ ಕೆಲಸದ ಅವಧಿ, ವೇತನ, ಸುರಕ್ಷತಾ ಪರಿಕರಗಳು, ದಲಿತರ ಜಮೀನುಗಳ ದಾಖಲೆ ದುರಸ್ತಿ ಸೇರಿದಂತೆ ಹಲವು ಗಂಭೀರ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದು ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ತಹಸೀಲ್ದಾರ್ ನಂದಿನಿ, ಸರ್ಕಾರಿ ಜಾಗ ಗುರುತಿಸುವುದು, ಭೂ ಪರಿವರ್ತನೆ ಪ್ರಕ್ರಿಯೆ ನಡೆಸಿ ಗೋಮಾಳ ಜಮೀನನ್ನು ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸುವುದು ಕಂದಾಯ ಇಲಾಖೆಯ ಜವಾಬ್ದಾರಿ. ನಂತರ ಬಡಾವಣೆಯ ಅಭಿವೃದ್ಧಿ ಹಾಗೂ ಮೂಲಸೌಕರ್ಯ ಕಲ್ಪಿಸುವುದು ಗ್ರಾಪಂಗಳ ಹೊಣೆಗಾರಿಕೆ ಎಂದು ತಿಳಿಸಿ, ತಮ್ಮ ಅಧಿಕಾರಾವಧಿಯಲ್ಲಿ ಸುಮಾರು 23 ನಿವೇಶನ ಬಡಾವಣೆಗಳ ಅಭಿವೃದ್ಧಿಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಕುರಿತು ಕೆಡಿಪಿ ಸಭೆಯಲ್ಲಿ ಶಾಸಕರ ಗಮನಕ್ಕೆ ತಂದು ಅಗತ್ಯ ಅನುದಾನ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.ದೊಡ್ಡೇರಿ ಗ್ರಾಮಗಳಲ್ಲಿ ರುದ್ರಭೂಮಿಗಾಗಿ ಮೀಸಲಿಟ್ಟಿರುವ ಜಮೀನುಗಳು ಅಂತ್ಯಸಂಸ್ಕಾರಕ್ಕೆ ಯೋಗ್ಯವಾಗಿಲ್ಲ. ಬಂಡೆಗಳಿಂದ ಕೂಡಿರುವ ಜಾಗದಲ್ಲಿ ಗುಂಡಿ ತೆಗೆಯುವುದಕ್ಕೂ ಸಾಧ್ಯವಾಗುತ್ತಿಲ್ಲ. ಮೃತದೇಹಗಳ ಅಂತ್ಯಸಂಸ್ಕಾರ ನಡೆಸಲು ಸೂಕ್ತ ಸ್ಥಳಾವಕಾಶವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು. ಸ್ಮಶಾನದಂತಹ ಮೂಲಭೂತ ಅಗತ್ಯಕ್ಕೂ ರಾಜಕೀಯ ಮಾಡದೆ, ಸಮತಟ್ಟಾದ ಸೂಕ್ತ ಜಮೀನು ಗುರುತಿಸಿ ಒದಗಿಸಬೇಕು ಎಂದು ಒತ್ತಾಯಿಸಿದರು.
ಆದರೆ, ಉಪ ವಿಭಾಗ ಹಾಗೂ ತಾಲೂಕು ಕೇಂದ್ರವಾದ ಮಧುಗಿರಿಯಲ್ಲಿ ಬಡವರು ಮತ್ತು ದಲಿತರಿಗೆ ಅನುಕೂಲವಾಗುವಂತೆ ಸುಸಜ್ಜಿತವಾದ ಕಟ್ಟಡವಿಲ್ಲ. ಹಾಗಾಗಿ ಪಟ್ಟಣದ ಹೊರಭಾಗದಲ್ಲಿ ಐದು ಎಕರೆ ಜಾಗ ಗುರುತಿಸಿ ಅಂಬೇಡ್ಕರ್ ಭವನ ನಿರ್ಮಾಣ ಮಾಡಿದರೆ ಬಡವರು ಹಾಗೂ ದಲಿತರಿಗೆ ಅನುಕೂಲವಾಗುತ್ತದೆ ಎಂದು ದೊಡ್ಡೇರಿ ಕಣಿಮಯ್ಯ ಆಗ್ರಹಿಸಿದರು.