ಸರ್ಕಾರಿ ಆಸ್ಪತ್ರೆಗಳಲ್ಲಿ ನಿರಂತರ ಉಚಿತ, ಗುಣಮಟ್ಟದ ಔಷಧಿ ನೀಡಿ

KannadaprabhaNewsNetwork |  
Published : Jun 11, 2025, 11:56 AM IST
10ಕೆಡಿವಿಜಿ1-ದಾವಣಗೆರೆಯಲ್ಲಿ ಮಂಗಳವಾರ ಡ್ರಗ್ ಆಕ್ಷನ್ ಫೋರಂ-ಕರ್ನಾಟಕದ ಅಧ್ಯಕ್ಷ ಡಾ.ಗೋಪಾಲ ದಾಬಡೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ರಾಜ್ಯಾದ್ಯಂತ ಎಲ್ಲ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಎಲ್ಲರಿಗೂ ಉಚಿತ ಹಾಗೂ ನಿರಂತರವಾಗಿ ಗುಣಮಟ್ಟದ ಔಷಧ ಸಿಗುವಂತೆ ಖಾತ್ರಿಪಡಿಸಬೇಕು. ಜೊತೆಗೆ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಕ್ಕೆ ಸ್ವಾಯತ್ತತೆ ಮತ್ತು ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವಂತೆ ಸುಧಾರಣೆ ತರಬೇಕು ಎಂದು ಧಾರವಾಡದ ಡ್ರಗ್ ಆಕ್ಷನ್ ಫೋರಂ-ಕರ್ನಾಟಕ ಹಾಗೂ ದಾವಣಗೆರೆಯ ನೆರಳು ಬೀಡಿ ಕಾರ್ಮಿಕರ ಯೂನಿಯನ್ ಒತ್ತಾಯಿಸಿದೆ.

- ಧಾರವಾಡದ ಡ್ರಗ್ ಆಕ್ಷನ್ ಫೋರಂ ಅಧ್ಯಕ್ಷ ಡಾ.ಗೋಪಾಲ ದಾಬಡೆ ಆಗ್ರಹ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ ರಾಜ್ಯಾದ್ಯಂತ ಎಲ್ಲ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಎಲ್ಲರಿಗೂ ಉಚಿತ ಹಾಗೂ ನಿರಂತರವಾಗಿ ಗುಣಮಟ್ಟದ ಔಷಧ ಸಿಗುವಂತೆ ಖಾತ್ರಿಪಡಿಸಬೇಕು. ಜೊತೆಗೆ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಕ್ಕೆ ಸ್ವಾಯತ್ತತೆ ಮತ್ತು ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವಂತೆ ಸುಧಾರಣೆ ತರಬೇಕು ಎಂದು ಧಾರವಾಡದ ಡ್ರಗ್ ಆಕ್ಷನ್ ಫೋರಂ-ಕರ್ನಾಟಕ ಹಾಗೂ ದಾವಣಗೆರೆಯ ನೆರಳು ಬೀಡಿ ಕಾರ್ಮಿಕರ ಯೂನಿಯನ್ ಒತ್ತಾಯಿಸಿದೆ.

ನಗರದಲ್ಲಿ ಮಂಗಳವಾರ ಉಭಯ ಸಂಸ್ಥೆಗಳ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಫೋರಂನ ಕರ್ನಾಟಕದ ಅಧ್ಯಕ್ಷ ಡಾ.ಗೋಪಾಲ ದಾಬಡೆ ಅವರು, ಸರ್ಕಾರಿ ಆಸ್ಪತ್ರೆಗಳಿಗೆ ಬಂದ ಯಾವುದೇ ರೋಗಿಯೂ ಖಾಸಗಿ ಫಾರ್ಮಸಿಗಳು, ಔಷಧಿ ಅಂಗಡಿಗಳು ಅಥವಾ ಜನೌಷಧಿ ಕೇಂದ್ರಗಳಿಂದ ಔಷಧಿಗಳನ್ನು ಖರೀದಿಸುವಂತಹ ಪರಿಸ್ಥಿತಿ ಇರಬಾರದು. ರಾಜ್ಯದಲ್ಲಿ ಸರ್ಕಾರಿ ಆಸ್ಪತ್ರೆಗಳ ಹೊರಗಡೆ 1400 ಜನೌಷಧಿ ಕೇಂದ್ರಗಳು ಕೆಲಸ ಮಾಡುತ್ತಿವೆ. ಅಗತ್ಯ ಇದ್ದವರಿಗೆ ಅಗ್ಗದ ಜನರಿಕ್ ಔಷಧಿಗಳು ಜನರ ಕೈಗೆಟುಕುವ ದರಕ್ಕೆ ಲಭ್ಯವಿದ್ದೇ ಇದೆ ಎಂದು ತಿಳಿಸಿದರು.

ರೋಗಿಗಳಿಗೆ ನೀಡುವ ಎಲ್ಲ ಔಷಧಿಗಳ ಗುಣಮಟ್ಟ ಪರೀಕ್ಷೆಗಳಾಗಿರಬೇಕು. ಈ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಕಳಪೆ ಗುಣಮಟ್ಟದ ಔಷಧಿಗಳಿಂದ ಅಮಾಯಕ ಜನರ ಜೀವಕ್ಕೂ ಕುತ್ತು ಬರಬಹುದು. ಅಕ್ಟೋಬರ್ 2024ರಲ್ಲಿ ಬಳ್ಳಾರಿ ಜಿಲ್ಲೆ ಹಾಗೂ ಇತರೆ ಜಿಲ್ಲಾ ಆಸ್ಪತ್ರೆಗಳಲ್ಲಿ ಸಂಭವಿಸಿದ ತಾಯಂದಿರ ಸಾವುಗಳೇ ಇದಕ್ಕೆ ನಿದರ್ಶನ. ಈ ಹಿನ್ನೆಲೆಯಲ್ಲಿ ಸರ್ಕಾರ ಔಷಧಿಗಳ ಪರೀಕ್ಷೆ ಮಾಡಿ, ಗುಣಮಟ್ಟವನ್ನೂ ಖಾತ್ರಿಪಡಿಸಬೇಕು ಎಂದು ಹೇಳಿದರು.

ನೆರಳು ಬೀಡಿ ಕಾರ್ಮಿಕರ ಯೂನಿಯನ್‌ ಅಧ್ಯಕ್ಷೆ ಜಬೀನಾ ಖಾನಂ, ಪ್ರಧಾನ ಕಾರ್ಯದರ್ಶಿ ಎಂ.ಕರಿಬಸಪ್ಪ, ಶಿರೀನ್ ಬಾನು, ನೂರ್ ಫಾತಿಮಾ, ಹಸೀನಾ, ಶಾಹೀನಾ, ನಾಯಿರಾ, ಫಜ್ಲುನ್‌ ಬೀ, ರೇಷಾ ಬಾನು ಇತರರು ಇದ್ದರು.

- - -

(ಬಾಕ್ಸ್‌) * ಸರ್ಕಾರವೇ ಔಷಧಿಗಳ ಮಾರಾಟಕ್ಕೆ ನಿಲ್ಲೋದು ಸಲ್ಲರಾಜ್ಯದ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಜನೌಷಧಿ ಕೇಂದ್ರಗಳನ್ನು ತೆಗೆದು ಹಾಕುತ್ತಿರುವುದು ಸರ್ಕಾರದ ದ್ವಂದ್ವ ನೀತಿಗೆ ಸಾಕ್ಷಿ. ಸಾರ್ವಜನಿಕ ಆಸ್ಪತ್ರೆಗಳ ಆವರಣದಲ್ಲಿ ಔಷಧಿಗಳು ಉಚಿತವಾಗಿ ಜನರಿಗೆ ಸಿಗುವಂತಾಗಬೇಕು. ಆದರೆ, ಅದೇ ಆವರಣದಲ್ಲಿ ಸರ್ಕಾರದಿಂದಲೇ ಔಷಧಿಗಳ ಮಾರಾಟಕ್ಕೆ ನಿಲ್ಲುವುದು ಸರಿಯಲ್ಲ ಎಂದು ಡಾ.ಗೋಪಾಲ ದಾಬಡೆ ಹೇಳಿದರು.

ಸರ್ಕಾರವು ತಾನೇ ಸ್ಥಾಪಿಸಿರುವ ಕೆಎಸ್‌ಎಂಎಸ್‌ಸಿಎಲ್‌ ಮೂಲಕ ಉಚಿತವಾಗಿ ಔಷಧಿಗಳನ್ನು ಆಸ್ಪತ್ರೆಗಳಿಗೆ, ಅಲ್ಲಿಗೆ ಬರುವ ರೋಗಿಗಳಿಗೆ ಪೂರ್ಣ ಪ್ರಮಾಣದಲ್ಲಿ ಸಿಗುವಂತೆ ಮಾಡಬೇಕು. ಈಗಾಗಲೇ ಡಿಎಎಫ್‌-ಕೆ, ಎಸ್ಎಎ-ಕೆ ಸದಸ್ಯರು ಸಮೇತ ಅನೇಕ ಸಂಘಟನೆಗಳು ಉಚಿತ ಮತ್ತು ಗುಣಮಟ್ಟದ ಔಷಧಿಗಳನ್ನು ರಾಜ್ಯಾದ್ಯಂತ ಎಲ್ಲ ಆಸ್ಪತ್ರೆಗಳಿಗೆ ಒದಗಿಸಬೇಕು ಎಂಬುದಾಗಿ ಒತ್ತಾಯಿಸಿ ಆರೋಗ್ಯ ಹಕ್ಕು ಜಾಥಾವನ್ನು 15 ಜಿಲ್ಲೆಗಳಲ್ಲಿ ನಡೆಸಿವೆ ಎಂದು ವಿವರಿಸಿದರು.

- - -

-10ಕೆಡಿವಿಜಿ1.ಜೆಪಿಜಿ:

ದಾವಣಗೆರೆಯಲ್ಲಿ ಮಂಗಳವಾರ ಡ್ರಗ್ ಆಕ್ಷನ್ ಫೋರಂ- ಕರ್ನಾಟಕದ ಅಧ್ಯಕ್ಷ ಡಾ.ಗೋಪಾಲ ದಾಬಡೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''