ಬಂಗಾರಪೇಟೆ: ಸಮುದಾಯದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರ ಭವಿಷ್ಯ ರೂಪಿಸುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸಬೇಕೆಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ. ವಿ. ಮಹೇಶ್ ಹೇಳಿದರು.
ಸಮುದಾಯದಲ್ಲಿ ಮಕ್ಕಳ ಶಿಕ್ಷಣಕ್ಕೆ ಸರಕಾರದಿಂದ ಅನೇಕ ಶೈಕ್ಷಣಿಕ ಸೌಲಭ್ಯಗಳಿದ್ದು, ಅವುಗಳನ್ನುಸದುಪಯೋಗಪಡಿಸಿಕೊಂಡು ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದುಕೊಳ್ಳುವ ಮೂಲಕ ಸಮಾಜದಲ್ಲಿ ಒಳ್ಳೆಯ ಸಂಸ್ಕಾರ, ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದರು.
ರಾಜಕೀಯವಾಗಿ ಅಸ್ತಿತ್ವವನ್ನು ಉಳಿಸಿಕೊಳ್ಳಲು ಸಮುದಾಯದ ಪ್ರತಿಯೊಬ್ಬರೂ ತಮ್ಮ ಶಕ್ತಿ ಮೀರಿ ಶ್ರಮಿಸಬೇಕು. ನಮ್ಮ ಸಮಾಜದ ಅಭಿವೃದ್ಧಿಗಾಗಿ ಯೋಜನೆಗಳನ್ನು ರೂಪಿಸುವ ಮೂಲಕ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಪ್ರಗತಿ ಸಾಧಿಸಬೇಕೆಂದರಲ್ಲದೆ, ಸಮುದಾಯದ ಅಭಿವೃದ್ಧಿಗಾಗಿ ಒಂದು ಎಕರೆ ಜಮೀನನ್ನು ದಾನ ನೀಡುವುದಾಗಿ ಭರವಸೆ ನೀಡಿದರು.ಜಿಪಂ ಮಾಜಿ ಸದಸ್ಯ ರಾಮಚಂದ್ರಪ್ಪ ಮಾತನಾಡಿ, ಮುಂದಿನ ದಿನಗಳಲ್ಲಿ ರಾಜಕೀಯ ಸ್ಥಾನಮಾನ ಪಡೆಯಲು ನಮ್ಮಲ್ಲಿರುವಂಥ ಭಿನ್ನಾಭಿಪ್ರಾಯಗಳನ್ನು ಬಿಟ್ಟು ಒಮ್ಮತದಿಂದ ಶ್ರಮಿಸಬೇಕು, ಮುಂದೆ ಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಮ್ಮ ಸಮಾಜದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಮಾಜಿ ಶಾಸಕ ವೆಂಕಟಮುನಿಯಪ್ಪ, ಮಾಜಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಗೋವಿಂದರಾಜು, ಪುರಸಭೆ ಸದಸ್ಯ ಕಪಾಲಿಶಂಕರ್, ಎಚ್.ಆರ್.ಶ್ರೀನಿವಾಸ್, ವೆಂಕಟರಾಮ್, ಹೂವರಸನಹಳ್ಳಿ ರಾಜಪ್ಪ, ಸೂಲಿಕುಂಟೆ ರಮೇಶ್ ಇತರರು ಇದ್ದರು.--------