ಕಾರ್ಮಿಕರಿಗೆ ಸರ್ಕಾರದ ಸೌಲಭ್ಯ ಕಲ್ಪಿಸಿ ಕೊಡಿ: ಸಹಕಾರ ಸಚಿವ ಕೆ.ಎನ್‌. ರಾಜಣ್ಣ

KannadaprabhaNewsNetwork | Published : Feb 12, 2025 12:33 AM

ಸಾರಾಂಶ

ಕಾರ್ಮಿಕರು ತಮಗೆ ದೊರೆಯುವ ಸೌಲಭ್ಯಗಳನ್ನು ಇತರೆ ಕಾರ್ಮಿಕರಿಗೂ ದೊರಕಿಸಿ ಕೊಡಲು ಮುಂದಾಗಿ ಎಂದ ಅವರು, ನಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಶೇ.100ರಷ್ಠು ಕಾರ್ಮಿಕರ ನೋಂದಣಿಗೆ ಅಧಿಕಾರಿಗಳು ಮುಂದಾಗಿ ಗುರಿ ಮುಟ್ಟಬೇಕು.

ಕನ್ನಡಪ್ರಭ ವಾರ್ತೆ ಮಧುಗಿರಿ

ಕೂಲಿ ಕಾರ್ಮಿಕರಿಗೆ ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ಚಾಚೂತಪ್ಪದೆ ದೊರಕಿಸಿ ಕೊಡುವ ಜವಾಬ್ದಾರಿ ಕಾರ್ಮಿಕ ಇಲಾಖೆಯ ಆದ್ಯ ಕರ್ತವ್ಯ ಎಂದು ಸಹಕಾರ ಸಚಿವ ಕೆ.ಎನ್‌. ರಾಜಣ್ಣ ತಿಳಿಸಿದರು.

ಇಲ್ಲಿನ ಶಿರಾ ಗೇಟ್‌ ಬಳಿ ಇರುವ ಕಾರ್ಮಿಕ ಇಲಾಖೆಯಿಂದ ಆಯೋಜಿಸಿದ್ದ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಮತ್ತು ಇತರೆ ಸುಮಾರು 300 ಜನ ಕಾರ್ಮಿಕ ಅರ್ಹ ಫಲಾನುಭವಿಗಳಿಗೆ ಟೂಲ್‌ ಕಿಟ್‌ ವಿತರಿಸಿ ಮಾತನಾಡಿದರು.

ಅಂದಾಜು 23 ವಿವಿಧ ಕಾರ್ಮಿಕ ವಲಯಗಳನ್ನು ಸರ್ಕಾರ ಪತ್ತೆ ಹಚ್ಚಿದೆ. ಸಾಮಾಜಿಕ ಭದ್ರತಾ ನಿರ್ವಹಣಾ ಮಂಡಳಿಯಲ್ಲಿ 10 ಸಾವಿರ ಕೋಟಿ ರು. ಹಣವಿದ್ದು, ಈ ಹಣವನ್ನು ಕಾರ್ಮಿಕ ಇಲಾಖೆಗೆ ಬಳಸಿಕೊಳ್ಳಲು ಅವಕಾಶವಿದೆ. ಈಗ್ಗೆ 10 ವರ್ಷಗಳ ಹಿಂದೆ ನಮ್ಮ ಸ್ನೇಹಿತರ ತಂಡ ತಾಲೂಕಿನಲ್ಲಿನರುವ ಕಟ್ಟಡ, ಕೂಲಿ ಕಾರ್ಮಿಕರನ್ನು ಗುರುತಿಸಿದೆ. ಸದಸ್ಯರ ನೋಂದಣಿಗೆ ಅಗತ್ಯವಿದ್ದ ಹಣವನ್ನು ನಾನೇ ಭರಿಸಿದ್ದೆ. ಆದರೆ ಅಂದು ಸೌಲಭ್ಯಗಳ ಕೊರತೆಯಿತ್ತು.

ಪ್ರಸ್ತತ ಕಾರ್ಮಿಕ ವರ್ಗಕ್ಕೆ ಸೌಲಭ್ಯಗಳು ಹರಿದು ಬರುತ್ತಿರುವ ಕಾರಣ ಸಕಾಲಕ್ಕೆ ತಮ್ಮ ಸದಸ್ಯತ್ವವನ್ನು ನವೀಕರಿಸಿ ಇಲಾಖೆಯಿಂದ ದೊರೆಯುವ ಎಲ್ಲ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಂಡು ತಮ್ಮ ಜೀವನ ಮಟ್ಟ ಸುಧಾರಿಸಿಕೊಳ್ಳಿ, ಅಲ್ಲದೆ ಕಾರ್ಮಿಕರು ತಮಗೆ ದೊರೆಯುವ ಸೌಲಭ್ಯಗಳನ್ನು ಇತರೆ ಕಾರ್ಮಿಕರಿಗೂ ದೊರಕಿಸಿ ಕೊಡಲು ಮುಂದಾಗಿ ಎಂದ ಅವರು, ನಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಶೇ.100ರಷ್ಠು ಕಾರ್ಮಿಕರ ನೋಂದಣಿಗೆ ಅಧಿಕಾರಿಗಳು ಮುಂದಾಗಿ ಗುರಿ ಮುಟ್ಟಬೇಕು. ತಾವು ಜೀವನ ನಿರ್ವಹಣೆಗೆ ಕಷ್ಟಪಡುವುದು ನಿಮ್ಮ ತಲೆ ಮಾರಿಗೆ ಅಂತ್ಯ‍ವಾಗಬೇಕು ಎಂದರು.

ಪೋಷಕರು ತಮ್ಮ ಮಕ್ಕಳನ್ನು ಕೂಲಿ ಕಳಿಸದೇ ವಿದ್ಯಾವಂತರನ್ನಾಗಿ ಮಾಡಿ, ಆ ಮಕ್ಕಳು ಸಮಾಜದಲ್ಲಿ ಸಂಸ್ಕಾರವಂತರಾಗಿ ಆಸ್ತಿಯಾದಾಗ ನಿಮ್ಮ ಕಷ್ಟ ಕಾರ್ಪಣ್ಯಗಳು ಅಂತ್ಯವಾಗಲಿವೆ. ಮಕ್ಕಳನ್ನು ಯಾವುದೇ ಕಾರಣಕ್ಕೂ ಶಿಕ್ಷಣದಿಂದ ದೂರ ಮಾಡಬೇಡಿ ಎಂದರು.

ಕಾರ್ಯಕ್ರಮದಲ್ಲಿ ಅಪಾರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಜಿಪಂ ಸಿಇಒ ಜಿ. ಪ್ರಭು, ಇಒ ಲಕ್ಷ್ಮಣ್‌, ತಹಸೀಲ್ದಾರ್‌ ಶಿರಿನ್‌ ತಾಜ್‌, ಕಾಂಗ್ರೆಸ್‌ ಅಧ್ಯಕ್ಷ ಗೋಪಾಲಯ್ಯ, ತುಮುಲ್‌ ನಿರ್ದೇಶಕ ಬಿ.ನಾಗೇಶ್‌ ಬಾಬು, ಪುರಸಭೆ ಸದಸ್ಯ ಎಂ.ವಿ.ಗೋವಿಂದರಾಜು, ಆಲೀಮ್‌, ಮಾಜಿ ಅಧ್ಯಕ್ಷ ಎಂ.ಕೆ.ನಂಜುಂಡರಾಜು, ಕಾರ್ಮಿಕ ಇಲಾಖೆ ಸಹಾಯಕ ನಿರ್ದೇಶಕ ಶ್ರೀಕಾಂತ್, ಅಬ್ದುಲ್‌, ಕಾರ್ಮಿಕ ಇಲಾಖೆ ರವಿಕುಮಾರ್‌, ಎಇಇ ರಾಜ್ ಗೋಪಾಲ್‌, ಕೆಪಿಸಿಸಿ ಕಾರ್ಮಿಕ ವಿಭಾಗದ ಪಾಂಡುರಂಗಯ್ಯ, ಡಿವೈಎಸ್‌ಪಿ ಮಂಜುನಾಥ್‌ ಮತ್ತಿತರರು ಇದ್ದರು.

Share this article