- ಬೆಳೆ ಹಾನಿ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ, ಡಿಸಿ ಭೇಟಿ ನೀಡಲಿ: ಸತೀಶ ಕೊಳೇನಹಳ್ಳಿ ಆಗ್ರಹ - - -
ಕಳೆದೊಂದು ತಿಂಗಳಿನಿಂದ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಹೊಲಗಳಲ್ಲಿ ನೀರು ನಿಂತು, ಬೆಳೆದ ಪೈರುಗಳು ಕೊಳೆಯುತ್ತಿವೆ. ಈ ಹಿನ್ನೆಲೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಬೆಳೆಹಾನಿ ಪ್ರದೇಶಕ್ಕೆ ಶೀಘ್ರ ಭೇಟಿ ನೀಡಬೇಕು. ಸಂಕಷ್ಟಕ್ಕೆ ತುತ್ತಾದ ರೈತರ ನೆರವಿಗೆ ಧಾವಿಸಬೇಕು ಎಂದು ಜಿಲ್ಲಾ ರೈತರ ಒಕ್ಕೂಟ ಅಧ್ಯಕ್ಷ ಬಿ.ಎಂ.ಸತೀಶ ಕೊಳೇನಹಳ್ಳಿ ಒತ್ತಾಯಿಸಿದ್ದಾರೆ.
ಜಿಲ್ಲೆಯಲ್ಲಿ ಈರುಳ್ಳಿ, ಮೆಕ್ಕೆಜೋಳ, ಕಬ್ಬು, ಬತ್ತ ಸೇರಿದಂತೆ ತೋಟಗಾರಿಕೆ ಬೆಳೆಗಳೂ ಸಂಪೂರ್ಣ ಹಾನಿಗೀಡಾಗಿವೆ. ಇದರಿಂದ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಕ್ಕಳಿಗಿಂತ ಅಕ್ಕರೆಯಿಂದ ಬೆಳೆದ ಬೆಳೆಗಳ ಪರಿಸ್ಥಿತಿ ಕಂಡು ದಿಕ್ಕು ತೋಚದಂತಾಗಿದ್ದಾರೆ. ತಕ್ಷಣವೇ ಸರ್ಕಾರ ಸಂತ್ರಸ್ಥ ರೈತರಿಗೆ ನೆರವಾಗಬೇಕು ಎಂದಿದ್ದಾರೆ.ಹಾನಿ ತಡೆಯಲು ಜಿಲ್ಲಾಡಳಿತ ಇಚ್ಛಾಶಕ್ತಿ ತೋರಬೇಕಿದೆ. ಅಧಿಕಾರಿಗಳು ಜಡತ್ವ ತೊರೆದು, ಜನರ ಸಂಕಷ್ಟ ಅರಿಯುವ ಮತ್ತು ಸಂವೇದನೆಗೆ ಮಿಡಿದು ಕೆಲಸ ಮಾಡಬೇಕು. ಅತಿವೃಷ್ಟಿ ಅನಾಹುತಗಳ ನಿರ್ವಹಣೆಗೆ ದಾವಣಗೆರೆ ಜಿಲ್ಲೆಯಲ್ಲಿ ರೈತರಿಗಾಗಿ ತಕ್ಷಣವೇ ಸಹಾಯವಾಣಿ ಸ್ಥಾಪಿಸಿ, ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದ್ದಾರೆ.
- - -