ಅಧಿಕಾರಿಗಳಿಗೆ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸೂಚನೆ
ತಾಲೂಕು ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದ್ದು, ಕೃಷಿ ಚಟುವಟಿಕೆ ಆರಂಭಗೊಂಡಿವೆ. ಕೃಷಿ ಇಲಾಖೆಯಿಂದ ರೈತರಿಗೆ ದೊರೆಯುವ ಸೌಲಭ್ಯಗಳ ಕುರಿತು ಪ್ರಚಾರ ನಡೆಸಬೇಕು ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ವಾಗೀಶ ಶಿವಾಚಾರ್ಯ ಸೂಚಿಸಿದರು.
ಇಲ್ಲಿನ ಪಟ್ಟಣದ ತಾಪಂ ಕಚೇರಿಯಲ್ಲಿ ಆಯೋಜಿಸಿದ್ದ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು.ಈ ಕುರಿತು ಪ್ರತಿಕ್ರಿಯಿಸಿದ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ದಯಾನಂದ್, ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದ ಭೂಮಿ ನೀರಾವರಿ ವ್ಯಾಪ್ತಿಗೆ ಒಳಪಟ್ಟಿದೆ. ಕಡಿಮೆ ಪ್ರಮಾಣದಲ್ಲಿರುವ ಮಳೆಯಾಶ್ರಿತ ಭೂಮಿಯಲ್ಲಿ ಬಿತ್ತನೆ ಮಾಡಲು ಸಜ್ಜೆ, ತೊಗರಿ, ಹತ್ತಿ, ನವಣೆ, ಬೀಜ ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನಿದೆ ಎಂದು ಮಾಹಿತಿ ನೀಡಿದರು.
ಆರೋಗ್ಯ ಇಲಾಖೆಯ ಮಾಹಿತಿ ಪಡೆದ ಉಪ ಕಾರ್ಯದರ್ಶಿ ವಾಗೀಶ ಶಿವಾಚಾರ್ಯ, ಮಳೆಗಾಲ ಪ್ರಾರಂಭವಾಗಿದೆ. ವಾಂತಿ-ಬೇಧಿ, ಮಲೇರಿಯಾ, ಡೆಂಘೀ, ಚಿಕುನ್ ಗುನ್ಯಾ ಹರಡದಂತೆ ಮುಂಜಾಗ್ರತೆ ವಹಿಸಬೇಕು. ಜನರಲ್ಲಿ ರೋಗ ನಿಯಂತ್ರಣ ಕುರಿತು ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು. ತಾಲೂಕಿನ ಎಲ್ಲ ಗ್ರಾಮಗಳಲ್ಲಿ ನೀರಿನ ಮೂಲಗಳ ಮಾದರಿ ಸಂಗ್ರಹಿಸಿ ಪರೀಕ್ಷೆ ನಡೆಸಿ ಕುಡಿಯಲು ಯೋಗ್ಯವಿದ್ದರೆ ಮಾತ್ರ ಸರಬರಾಜು ಮಾಡಲು ಗ್ರಾಮ ಪಂಚಾಯಿತಿಗಳಿಗೆ ಸೂಚಿಸಬೇಕು ಎಂದರು.
ಕೆಲವು ಗ್ರಾಮಗಳಲ್ಲಿ ಜೆಎಂಎಂ ಕಾಮಗಾರಿ ಪೂರ್ಣಗೊಳ್ಳದ ಬಗ್ಗೆ ಚರ್ಚೆ ಜರುಗಿತು.
ಇಒ ಕೆ.ವಿ. ನಿರ್ಮಲಾ, ನರೇಗಾ ಎಡಿ ಶಿವರಾಮ ರೆಡ್ಡಿ, ಯೋಜನಾಧಿಕಾರಿ ರಾಧಿಕಾ ಮತ್ತು ಕಚೇರಿ ಪ್ರಭಾರ ವ್ಯವಸ್ಥಾಪಕ ಅನಿಲ್ ಇದ್ದರು.