ಕಾಡಂಚಿನ ಗ್ರಾಮಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಿ

KannadaprabhaNewsNetwork | Published : Jul 18, 2024 1:35 AM

ಸಾರಾಂಶ

ಮೂಲಭೂತ ವಂಚಿತ ತಾಲೂಕಿನ ಕಾಡಂಚಿನ ಗ್ರಾಮಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಿ ಎಂದು ಭ್ರಷ್ಟಾಚಾರ ನಿರ್ಮೂಲನೆ ಮತ್ತು ಮಾನವ ಹಕ್ಕುಗಳ ರಕ್ಷಣಾ ಫ್ರಂಟ್ ಜಿಲ್ಲಾಧ್ಯಕ್ಷ ಎಸ್.ಎಂ. ಮಹದೇವಸ್ವಾಮಿ ಹೇಳಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಮೂಲಭೂತ ವಂಚಿತ ತಾಲೂಕಿನ ಕಾಡಂಚಿನ ಗ್ರಾಮಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಿ ಎಂದು ಭ್ರಷ್ಟಾಚಾರ ನಿರ್ಮೂಲನೆ ಮತ್ತು ಮಾನವ ಹಕ್ಕುಗಳ ರಕ್ಷಣಾ ಫ್ರಂಟ್ ಜಿಲ್ಲಾಧ್ಯಕ್ಷ ಎಸ್.ಎಂ. ಮಹದೇವಸ್ವಾಮಿ ಹೇಳಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಭಾಂಗಣದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕರ ದೂರಿನ ಮೇರೆಗೆ ಭ್ರಷ್ಟಾಚಾರ ನಿರ್ಮೂಲನೆ ಮತ್ತು ಮಾನವ ಹಕ್ಕುಗಳು ರಕ್ಷಣಾ ಫ್ರಂಟ್ ಕರ್ನಾಟಕ ಸಂಸ್ಥಾಪಕ, ರಾಜ್ಯಾಧ್ಯಕ್ಷ ಬಿ. ಕುಮಾರ್ ಅವರ ಸಲಹೆಯಂತೆ ತಾಲೂಕಿನ ಪುಣಜನೂರು ಗ್ರಾಪಂ ವ್ಯಾಪ್ತಿಗೆ ಒಳಪಡುವ ಕಾಡಂಚಿನ ಗ್ರಾಮಗಳಾದ ಬೇಡಗುಳಿ, ಅತ್ತಿಖಾಣೆ, ಹೊನ್ನಮೇಟಿ, ಕಾಡಿಗೆರೆ ಗ್ರಾಮಗಳಿಗೆ ಭೇಟಿ ನೀಡಿದಾಗ ಅಲ್ಲಿನ ಜನರು ಮೂಲ ಸೌಕರ್ಯಗಳಿಂದ ವಂಚಿತರಾಗಿ ಬದುಕುತ್ತಿರುವುದು ಕಂಡು ಬಂದಿದೆ ಎಂದರು.ಬುಡಕಟ್ಟು ಸಮುದಾಯದ ಜನರು ವಾಸಿಸುವ ಈ ಗ್ರಾಮಗಳಲ್ಲಿ ರಸ್ತೆ, ಚರಂಡಿ ಇಲ್ಲದಿರುವುದು, ಕುಡಿಯುವ ನೀರಿನ ಸಮಸ್ಯೆ, ಶೌಚಾಲಯದ ಸಮಸ್ಯೆ, ಬೀದಿ ದೀಪಗಳು, ಮತ್ತು ಪೌಷ್ಟಿಕ ಆಹಾರ ಸಿಗದಿರುವುದು ಇತ್ಯಾದಿ ಮೂಲಭೂತ ಸಮಸ್ಯೆಗಳು ತಾಂಡವವಾಡುತ್ತಿವೆ, ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಂಡಿರುತ್ತಾರೆ ಎಂದರು.ರಾಜ್ಯ ಸರ್ಕಾರವು ಶಕ್ತಿ ಯೋಜನೆ ಜಾರಿಗೊಳಿಸಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಕಲ್ಪಿಸಿದೆ. ಆದರೆ ಈ ಗ್ರಾಮಗಳಿಗೆ ಇದುವರೆಗೂ ಯಾವುದೇ ಸರ್ಕಾರಿ ಬಸ್‌ಗಳು ಹೋಗುತ್ತಿಲ್ಲ. ಹೀಗಾಗಿ ರಾಜ್ಯ ಸರ್ಕಾರದ ಶಕ್ತಿ ಯೋಜನೆಯು ಈ ಗ್ರಾಮದ ಜನರಿಗೆ ಕನಸಿನ ಮಾತಾಗಿದೆ. ಸರ್ಕಾರದ ಗ್ಯಾರಂಟಿಗಳಾದ ಗೃಹಲಕ್ಷ್ಮಿ ಯೋಜನೆ, ಶಕ್ತಿ ಯೋಜನೆ, ಗೃಹಜ್ಯೋತಿಯಂತಹ ಯೋಜನೆ ಕೂಡಾ ಇಲ್ಲಿ ಅಷ್ಟಾಗಿ ತಲುಪದಿರುವುದು ಅಧಿಕಾರಿಗಳ ಬೇಜಾವಾಬ್ದಾರಿ ಎದ್ದು ಕಾಣುತ್ತಿದೆ ಎಂದರು.ಬುಡಕಟ್ಟು ಸಮುದಾಯದ ಜನರು ವಾಸಿಸುವ ಈ ಗ್ರಾಮಗಳಲ್ಲಿ. ಗ್ರಾಪಂಯಿಂದ ನಿರ್ಮಿಸಿ ಕೊಡುವ ವಸತಿಗಳು ಕಳಪೆ ಕಾಮಗಾರಿಯಿಂದ ನಿರ್ಮಾಣಗೊಂಡಿವೆ. ಹಾಗೂ ಫಲಾನುಭಾವಿಗಳಿಗೆ ಪಂಚಾಯಿತಿಯ ಅನುದಾನ ನೀಡದೆ ಅಲ್ಲಿನ ಪಂಚಾಯಿತಿ ಅಧಿಕಾರಿಗಳು ಸರ್ಕಾರದ ಸವಲತ್ತುಗಳನ್ನು ಜನರಿಗೆ ಸಂಪೂರ್ಣವಾಗಿ ನೀಡದಿರುವುದು ಎದ್ದು ಕಾಣುತ್ತಿದೆ. ಇವರು ಮಾಡಿರುವ ಕಾಮಗಾರಿಗಳೆಲ್ಲವೂ ಕಳಪೆ ಗುಣಮಟ್ಟದಿಂದ ಇರುವುದು ಅಧಿಕಾರಿಗಳ ಕರ್ತವ್ಯದ ನಿರ್ಲಕ್ಷ್ಯವನ್ನು ತೋರುತ್ತದೆ ಎಂದರು.ಈ ಗ್ರಾಮಗಳಿಗೆ ಒಂದು ಪ್ರಾಥಮಿಕ ಚಿಕಿತ್ಸಾ ಕೇಂದ್ರವಿದ್ದು ವೈದ್ಯರು ಮೂರು ದಿನಕ್ಕೊಮ್ಮೆ ಬಂದು ಹೋಗುತ್ತಿರುತ್ತಾರೆ. ಈ ಗ್ರಾಮಗಳು ಪುಣಜನೂರಿನಿಂದ ೧೮ ಕಿಮೀ ಅರಣ್ಯ ಪ್ರದೇಶದ ಒಳಗೆ ಇರುವುದರಿಂದ ಜಿಲ್ಲಾಸ್ಪತ್ರೆ ಹಾಗೂ ಯಾವುದೇ ಪಟ್ಟಣ ಪ್ರದೇಶಕ್ಕೆ ತಲುಪಬೇಕೆಂದರೆ ಸೂಕ್ತ ಸಾರಿಗೆ ವ್ಯವಸ್ಥೆ ಕೂಡ ಇರುವುದಿಲ್ಲ. ದಿನದಲ್ಲಿ ಕೇವಲ ಎರಡು ಖಾಸಗಿ ಬಸ್ ಗಳು ಮಾತ್ರ ಲಭ್ಯವಿರುತ್ತದೆ. ಇಲ್ಲಿ ವಾಸಿಸುವ ಬಹುತೇಕ ಜನರಿಗೆ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಬ್ಯಾಂಕ್ ಖಾತೆಗಳಂತಹ ಮೂಲ ದಾಖಲೆಗಳು ಇಲ್ಲ. ಇಷ್ಟೆಲ್ಲಾ ಮೂಲಭೂತ ಸಮಸ್ಯೆಗಳಿಂದ ಈ ಗ್ರಾಮಗಳ ಜನರು ವಂಚನೆಗೆ ಒಳಗಾಗಿದ್ದರೂ ಸರ್ಕಾರ ಇತ್ತ ತಿರುಗಿ ನೋಡದೆ ಇರುವುದು ಶೋಚನಿಯ ಎಂದರು.ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಮನವಿ ಮಾಡುತ್ತೇವೆ, ಜಿಲ್ಲಾ ಆಡಳಿತವು ಇನ್ನಾದರೂ ಇಂತಹ ಕಾಡಂಚಿನ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿ ಮೂಲ ಸಮಸ್ಯೆಗಳನ್ನು ಬಗೆಹರಿಸಲು ಕ್ರಮಕೈಗೊಳ್ಳಬೇಕು ಇಲ್ಲದಿದ್ದರೆ ಗ್ರಾಮಸ್ಥರೊಂದಿಗೆ ಹೋರಾಟ ಮಾಡುವುದಾಗಿ ಎಚ್ಚರಿಸಿದರು.ಪತ್ರಿಕಾಗೋಷ್ಠಿಯಲ್ಲಿ ಫ್ರಂಟ್‌ನ ಪ್ರಧಾನ ಕಾರ್ಯದರ್ಶಿ ಬಿ.ಮಂಜು, ಉಪಾಧ್ಯಕ್ಷ ಬಿ.ರಂಗಪ್ಪ, ಕಾರ್ಯದರ್ಶಿಗಳಾದ ಮಹೇಂದ್ರ, ಸಂತೋಷ್ ಕುಮಾರ್ ಇದ್ದರು.

Share this article