ಕಿರ್ಲೋಸ್ಕರ್ ಕಾರ್ಮಿಕರಿಗೆ ನ್ಯಾಯ ಒದಗಿಸಿ: ವಿ.ಸ್ಯಾಮ್‌ಸನ್‌ ಮೇಸ್ತ್ರಿ

KannadaprabhaNewsNetwork |  
Published : Jun 16, 2025, 12:55 AM ISTUpdated : Jun 16, 2025, 12:56 AM IST
15ಕೆಡಿವಿಜಿ1-ದಾವಣಗೆರೆಯಲ್ಲಿ ಭಾನುವಾರ ಅಖಿಲ ಭಾರತ ರಾಹುಲ್ ಗಾಂಧಿ ಅಭಿಮಾನಿಗಳ ಸಂಘದ ಅಧ್ಯಕ್ಷ ವಿ.ಸ್ಯಾಮ್‌ಸನ್‌ ಮೇಸ್ತ್ರಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಎರಡೂವರೆ ದಶಕದ ಹಿಂದೆ ಮುಚ್ಚಿದ ಹರಿಹರ ನಗರದ ದಿ ಮೈಸೂರು ಕಿರ್ಲೋಸ್ಕರ್‌ ಕಂಪನಿಯ ಸಮಾಪನೆ ಕಾಲದಲ್ಲಿ 2800 ಕಾಯಂ ಕಾರ್ಮಿಕರಿದ್ದು, ನ್ಯಾಯಯುತವಾಗಿ ಬರಬೇಕಾದ ಪಿಎಫ್‌, ಗ್ರಾಚ್ಯುಟಿ, ಬೋನಸ್ ಸೇರಿದಂತೆ ವಿವಿಧ ರೀತಿಯ ಪರಿಹಾರ ಕೊಡಿಸುವಂತೆ ಅಖಿಲ ಭಾರತ ರಾಹುಲ್ ಗಾಂಧಿ ಅಭಿಮಾನಿಗಳ ಸಂಘದ ಅಧ್ಯಕ್ಷ ವಿ.ಸ್ಯಾಮ್‌ಸನ್‌ ಮೇಸ್ತ್ರಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಎರಡೂವರೆ ದಶಕದ ಹಿಂದೆ ಮುಚ್ಚಿದ ಹರಿಹರ ನಗರದ ದಿ ಮೈಸೂರು ಕಿರ್ಲೋಸ್ಕರ್‌ ಕಂಪನಿಯ ಸಮಾಪನೆ ಕಾಲದಲ್ಲಿ 2800 ಕಾಯಂ ಕಾರ್ಮಿಕರಿದ್ದು, ನ್ಯಾಯಯುತವಾಗಿ ಬರಬೇಕಾದ ಪಿಎಫ್‌, ಗ್ರಾಚ್ಯುಟಿ, ಬೋನಸ್ ಸೇರಿದಂತೆ ವಿವಿಧ ರೀತಿಯ ಪರಿಹಾರ ಕೊಡಿಸುವಂತೆ ಅಖಿಲ ಭಾರತ ರಾಹುಲ್ ಗಾಂಧಿ ಅಭಿಮಾನಿಗಳ ಸಂಘದ ಅಧ್ಯಕ್ಷ ವಿ.ಸ್ಯಾಮ್‌ಸನ್‌ ಮೇಸ್ತ್ರಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹರಿಹರದಲ್ಲಿ 1941ರಲ್ಲಿ ಸ್ಥಾಪನೆಯಾದ ದಿ ಮೈಸೂರು ಕಿರ್ಲೋಸ್ಕರ್ 2001ರಲ್ಲಿ ಮುಚ್ಚಿದ್ದು, ಕಾರ್ಖಾನೆ ಮುಚ್ಚುವ ವೇಳೆಯಲ್ಲಿ ದುಡಿಯುತ್ತಿದ್ದಂತಹ 2 ಸಾವಿರಕ್ಕೂ ಅಧಿಕ ಕಾರ್ಮಿಕರಿಗೆ ನ್ಯಾಯಯುತವಾಗಿ ಬರಬೇಕಾದ 5ರಿಂದ 6 ಲಕ್ಷ ರು.ಗಳಷ್ಟು ಪಿಎಫ್‌, ಗ್ರಾಚ್ಯುಟಿ, ಬೋನಸ್ ಇಂದಿಗೂ ಸಿಕ್ಕಿಲ್ಲ. ಕಾರ್ಮಿಕರಿಗೆ ಸಿಗಬೇಕಾದ ನ್ಯಾಯ, ಪರಿಹಾರದ ಬಗ್ಗೆ ಸಾಕಷ್ಟು ಅಂಶಗಳ ಸಮೇತ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ, ಯಾವುದೇ ಪ್ರಯೋಜನ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದಿ ಮೈಸೂರು ಕಿರ್ಲೋಸ್ಕರ್ ಕಾರ್ಖಾನೆಯ 210 ಎಕರೆ ಜಾಗ ಸರ್ಕಾರಕ್ಕೆ ಸೇರಿದ್ದು, ಆ ಭೂಮಿಯನ್ನು ಸರ್ಕಾರ ವಶಪಡಿಸಿಕೊಂಡು 25 ವರ್ಷದಿಂದ ಹಾಳು ಬಿದ್ದ ಭೂಮಿಯಲ್ಲಿ ಯೋಜನೆ ರೂಪಿಸಿ, ಭೂಮಿಯ ಸದುಪಯೋಗಪಡಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.

ಕಾರ್ಖಾನೆ ಜಾಗವನ್ನು ಖಾಸಗಿ ಕಂಪನಿಯೊಂದು 70 ಕೋಟಿ ರು.ಗೆ ಖರೀದಿ ಮಾಡಿಕೊಂಡಿದ್ದು, ಅಲ್ಲಿ ಜನ ವಸತಿಗೆ ನಿವೇಶನಗಳನ್ನಾಗಿ ಪರಿವರ್ತಿಸುತ್ತಿದೆ. 1960ರಲ್ಲಿ ಕಾರ್ಖಾನೆಗೆ ಜಾಗ ನೀಡುವ ವೇಳೆ ಕಾರ್ಖಾನೆ ಬಂದ್ ಮಾಡಿದರೆ, ಜಾಗವನ್ನು ಯಥಾಸ್ಥಿತಿಯಲ್ಲಿ ಸರ್ಕಾರಕ್ಕೆ ಮರಳಿಸುವಂತೆ ಪತ್ರ ವ್ಯವಹಾರವಾಗಿತ್ತು. ಈಗ ಅದನ್ನು ಖಾಸಗಿ ಕಂಪನಿ ಖರೀದಿಸಿದೆ. ಈಚೆಗೆ ಇಡೀ ಕಾರ್ಖಾನೆ ಜಾಗವು ವಕ್ಫ್ ಆಸ್ತಿಯೆಂಬುದಾಗಿ ದಾಖಲಾಗಿದ್ದು, ಇದರಿಂದ ಸರ್ಕಾರಕ್ಕೆ, ಕಾರ್ಮಿಕರಿಗೆ ತೀವ್ರ ಅನ್ಯಾಯವಾಗುತ್ತಿದೆ ಎಂದು ದೂರಿದರು.

ಸರ್ಕಾರಕ್ಕೆ ಸೇರಿದ 210 ಎಕರೆ ಭೂಮಿಯನ್ನು ಮರಳಿ ಸರ್ಕಾರದ ವಶಕ್ಕೆ ಪಡಯಬೇಕು. ಹಾಳು ಬಿದ್ದಿರುವ ಆ ಜಾಗದಲ್ಲಿ ಸರ್ಕಾರವೇ ಯೋಜನೆ ರೂಪಿಸಿ, ಭೂಮಿಯ ಸದುಪಯೋಗ ಆಗುವಂತೆ ಯೋಜನೆ ರೂಪಿಸಬೇಕು. ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಕಾಯಂ ಕಾರ್ಮಿಕರ ಪೈಕಿ ಶೇ.25 ಜನರಷ್ಟೇ ಈಗ ಜೀವಂತ ಉಳಿದಿದ್ದಾರೆ. ಉಳಿದವರು ನಿಧನರಾಗಿದ್ದಾರೆ. ಕಾರ್ಮಿಕರಿಗೆ ಶೇ.25ರಷ್ಟು ಪಿಎಫ್ ನೀಡಿದ್ದು, ಇನ್ನೂ ಬಾಕಿ ಹಣ ಬರಬೇಕಿದೆ. ಸರ್ಕಾರ ಈ ಬಗ್ಗೆ ಗಮನ ಹರಿಸಿ, ಕಾರ್ಮಿಕರಿಗೆ ನ್ಯಾಯ, ಪರಿಹಾರ ಕೊಡಿಸಲಿ ಎಂದು ಮನವಿ ಮಾಡಿದರು.

ಅಲ್ಲದೇ, ಕಾನೂನು ಬಾಹಿರವಾಗಿ ಕಿರ್ಲೋಸ್ಕರ್ ಕಾರ್ಮಿಕರ ಸಂಘವೆಂದು ಸ್ಥಾಪಿಸಿ, ಕಾರ್ಮಿಕರ ಹಣವನ್ನು ಕೆಲವರು ಬಳಸಿಕೊಂಡಿದ್ದಾರೆ. ಅಂತಹವರ ವಿರುದ್ಧವೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು, ಕಾರ್ಮಿಕರಿಗೆ ನ್ಯಾಯ ಕೊಡಿಸಬೇಕು. ಸಂಘದಿಂದ ಕಾರ್ಮಿಕರಿಗೆ ಆಗಿರುವ ಅನ್ಯಾಯ, ವಂಚನೆ ಬಗ್ಗೆ ಸಂಪೂರ್ಣ ವಿಚಾರವನ್ನು ಅಧಿಕಾರಿಗಳ ಗಮನಕ್ಕೆ ತಂದರೂ, ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಮುಖಂಡರಾದ ಎಸ್‌.ಕೆ.ರಾಮಪ್ಪ ಜಗಳೂರು, ನಾಗೇಂದ್ರಪ್ಪ ಮಾಕನೂರು, ಚನ್ನಕೇಶವಮೂರ್ತಿ ಹರಿಹರ ಮತ್ತಿತರರಿದ್ದರು.

...........................

ದಾವಣಗೆರೆ ದಕ್ಷಿಣದ ಶಾಸಕರು, ಹಿರಿಯರಾದ ಡಾ.ಶಾಮನೂರು ಶಿವಶಂಕರಪ್ಪ ಜೂ.16ಕ್ಕೆ ತಮ್ಮ 95ನೇ ವರ್ಷದ ಜನ್ಮದಿನ ಆಚರಿಸುತ್ತಿದ್ದಾರೆ. ಇಂತಹ ಹಿರಿಯರಿಗೆ ರಾಜ್ಯ ಸರ್ಕಾರ ಸಂಪುಟ ದರ್ಜೆಯ ಸ್ಥಾನಮಾನವನ್ನು ಕಲ್ಪಿಸಬೇಕು. ಶಾಮನೂರು ಶಿವಶಂಕರಪ್ಪನವರ ಕೊಡುಗೆ, ಸೇವೆಯನ್ನು ಗುರುತಿಸಿ, ಮುಖ್ಯಮಂತ್ರಿ, ರಾಜ್ಯ ಸರ್ಕಾರ ಸ್ವಯಂ ಪ್ರೇರಿತವಾಗಿ ಸ್ವಯಂ ಪ್ರೇರಣೆಯಿಂದ ಅಜೀವಾವಧಿವರೆಗೆ ಸಂಪುಟ ದರ್ಜೆ ಸ್ಥಾನಮಾನ, ಗೌರವ ಕಲ್ಪಿಸುವ ಮೂಲಕ ಸ್ಪಂದಿಸಬೇಕು.

- ವಿ.ಸ್ಯಾಮ್‌ಸನ್‌ ಮೇಸ್ತ್ರಿ, ಅಧ್ಯಕ್ಷ, ಅಖಿಲ ಭಾರತ ರಾಹುಲ್ ಗಾಂಧಿ ಅಭಿಮಾನಿಗಳ ಸಂಘ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೀದಿ ನಾಯಿ ಮರಿ ದತ್ತು ಪಡೆದು ಮಾನವೀಯತೆ ತೋರಿ
5 ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೊ ಕಡ್ಡಾಯ