ಕನ್ನಡಪ್ರಭ ವಾರ್ತೆ ಮಡಿಕೇರಿ
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ವಕೀಲರ ಸಂಘ ಆಶ್ರಯದಲ್ಲಿ ಶುಕ್ರವಾರ ನಗರದ ಜಿಲ್ಲಾ ನ್ಯಾಯಾಲಯದಲ್ಲಿ ಅರೆಕಾಲಿಕ ಕಾನೂನು ಸ್ವಯಂ ಸೇವಕರಿಗೆ ಕಾನೂನು ಅರಿವು ಮತ್ತು ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗುರುತಿನ ಚೀಟಿ ವಿತರಿಸಿ ಅವರು ಮಾತನಾಡಿದರು.
ರಾಷ್ಟ್ರದ ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಬದುಕುವ ಹಕ್ಕಿದೆ. ಆ ನಿಟ್ಟಿನಲ್ಲಿ ಮೂಲಭೂತ ಹಕ್ಕುಗಳ ಜೊತೆಗೆ ಕರ್ತವ್ಯ ತಿಳಿಸಲಾಗಿದೆ. ಆದ್ದರಿಂದ ಮೂಲಭೂತ ಹಕ್ಕು ಪಡೆಯುವುದರ ಜೊತೆಗೆ ಕರ್ತವ್ಯಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಆ ದಿಸೆಯಲ್ಲಿ ಕಾನೂನು ಸೇವಾ ಪ್ರಾಧಿಕಾರವು ಕಾನೂನಿನ ಅರಿವು ಮತ್ತು ನೆರವು ನೀಡುತ್ತಿದೆ ಎಂದರು.ಕಾನೂನಿನಲ್ಲಿ ಜನರೇ ಮಾಡಿರುವ ಕಾನೂನುಗಳು ಮತ್ತು ನಿಸರ್ಗ ಮಾಡಿದ ಕಾನೂನು ಎಂಬ ಎರಡು ವರ್ಗ ಇವೆ. ಎರಡನ್ನೂ ಪಾಲಿಸಿದಲ್ಲಿ ಆರೋಗ್ಯಯುತ ಸಮಾಜ ನಿರ್ಮಾಣ ಮಾಡಬಹುದಾಗಿದೆ. ಆ ನಿಟ್ಟಿನಲ್ಲಿ ಕಾನೂನುಗಳನ್ನು ಪಾಲಿಸಿ ಅಸ್ತಿತ್ವ ಉಳಿಸಿಕೊಂಡು ಉತ್ತಮ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸಬೇಕು ಎಂದು ವಿವರಿಸಿದರು.
ಮಡಿಕೇರಿ ವಕೀಲರ ಸಂಘದ ಅಧ್ಯಕ್ಷ ಎಂ.ಎ.ನಿರಂಜನ್ ಮಾತನಾಡಿ, ಕಾನೂನು ಸ್ವಯಂ ಸೇವಕರು ಕಾನೂನು ಸೇವಾ ಪ್ರಾಧಿಕಾರ ಮತ್ತು ಜನರ ನಡುವೆ ಕೊಂಡಿಯಾಗಿ ಕೆಲಸ ಮಾಡುವಂತಾಗಬೇಕು ಎಂದು ತಿಳಿಸಿದರು.
ಕುಟುಂಬ ಅಥವಾ ಇನ್ನಿತರ ಯಾವುದೇ ರೀತಿಯ ಭಿನ್ನಾಭಿಪ್ರಾಯ/ ಸಮಸ್ಯೆಗಳನ್ನು ಮಾತುಕತೆ ಮೂಲಕ ಪರಿಹರಿಸಿಕೊಳ್ಳಲು ಮುಂದಾಗಬೇಕು. ಸಣ್ಣಪುಟ್ಟ ವಿಚಾರಗಳಿಗೆ ನ್ಯಾಯಾಲಯಕ್ಕೆ ಹೋಗಬಾರದು. ಸಾಧ್ಯವಾದಷ್ಟು ತಳಹಂತದಲ್ಲಿಯೇ ಪರಿಹರಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ಕವಿಮಾತು ಹೇಳಿದರು.ಇತ್ತೀಚಿನ ದಿನಗಳಲ್ಲಿ ಮಡಿಕೇರಿ ನ್ಯಾಯಾಲಯಕ್ಕೆ ತಿಂಗಳಿಗೆ 10-15 ವಿಚ್ಛೇದನ ಪ್ರಕರಣಗಳು ದಾಖಲಾಗುತ್ತಿವೆ. ಈ ಹಿಂದೆ ಒಂದು ವರ್ಷಕ್ಕೆ ಇಷ್ಟು ಪ್ರಕರಣಗಳು(10 ರಿಂದ 15) ದಾಖಲಾಗುತ್ತಿದ್ದವು ಎಂದು ಎಂ.ಎ.ನಿರಂಜನ ತಿಳಿಸಿದರು.
ವಕೀಲ ಕೆ.ಎಂ.ಮೀನಾ ಕುಮಾರಿ ಅವರು ಅರೆಕಾಲಿಕ ಕಾನೂನು ಸ್ವಯಂ ಸೇವಕರಿಗೆ ಕಾನೂನಿನ ಅರಿವು ಕುರಿತು ಹಾಗೂ ಹಿರಿಯ ನಾಗರಿಕರ ಮತ್ತು ವಿಕಲಚೇತನರ ಸಬಲೀಕರಣ ಇಲಾಖೆ ಅಧಿಕಾರಿ ಕೆ.ಜಿ.ವಿಮಲ ಅವರು ಹಿರಿಯ ನಾಗರಿಕರ ಮತ್ತು ವಿಕಲಚೇತನರ ಸೌಲಭ್ಯ ಬಗ್ಗೆ ಮಾಹಿತಿ ನೀಡಿದರು.