ಭಾರಿ ಮಳೆಗೆ ಹಾನಿಗೆ ಹೆಚ್ಚು ಪರಿಹಾರ ನೀಡಿ: ರೈತ ಸಂಘ

KannadaprabhaNewsNetwork |  
Published : Apr 30, 2026, 01:30 AM IST
ಪೊಟೋ: 29ಎಸ್‌ಎಂಜಿಕೆಪಿ01ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಎದುರು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಹೊಳೆಹೊನ್ನೂರು ಹಾಗೂ ಕೂಡ್ಲಿಗೆರೆ ಹೋಬಳಿಯ ಗ್ರಾಮಗಳಲ್ಲಿ ಪ್ರಕೃತಿ ವಿಕೋಪದಿಂದ ಹಾನಿಯಾಗಿರುವ ಘಟನೆಯನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ತಕ್ಷಣ ಹೆಚ್ಚು ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಯಿತು. | Kannada Prabha

ಸಾರಾಂಶ

ಶಿವಮೊಗ್ಗ ತಾಲೂಕಿನ ಹೊಳೆಹೊನ್ನೂರು ಹಾಗೂ ಕೂಡ್ಲಿಗೆರೆ ಹೋಬಳಿಯ ಗ್ರಾಮಗಳಲ್ಲಿ ಪ್ರಕೃತಿ ವಿಕೋಪದಿಂದ ಹಾನಿಯಾಗಿರುವ ಘಟನೆಯನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ತಕ್ಷಣ ಹೆಚ್ಚು ಪರಿಹಾರ ನೀಡಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಶಿವಮೊಗ್ಗ ತಾಲೂಕಿನ ಹೊಳೆಹೊನ್ನೂರು ಹಾಗೂ ಕೂಡ್ಲಿಗೆರೆ ಹೋಬಳಿಯ ಗ್ರಾಮಗಳಲ್ಲಿ ಪ್ರಕೃತಿ ವಿಕೋಪದಿಂದ ಹಾನಿಯಾಗಿರುವ ಘಟನೆಯನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ತಕ್ಷಣ ಹೆಚ್ಚು ಪರಿಹಾರ ನೀಡಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.

ಏ.26ರಂದು ಈ ಎರಡೂ ಹೋಬಳಿ ಗ್ರಾಮಗಳಲ್ಲಿ ಹಿಂದೆಂದೂ ಕಂಡರಿಯದ ಆಲಿಕಲ್ಲು ಮಳೆ, ಬಿರುಗಾಳಿಯಿಂದ ಸುಮಾರು ಮನೆಗಳು ಹಾನಿಯಾಗಿದ್ದು, ವಾಸ ಮಾಡಲಿಕ್ಕೆ ಆಗದಂತಾಗಿದೆ. ನಿರಾಶ್ರಿತರಿಗೆ ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ. ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಅಡಕೆ ಮರಗಳನ್ನು ಬೆಳೆಯಲಾಗಿದ್ದು, ಒಂದು ಎಕರೆಯಲ್ಲಿರುವ ಅಡಕೆ ಮರಗಳಲ್ಲಿ ಶೇ.50ಕ್ಕಿಂತ ಹೆಚ್ಚು ಮರಗಳು ನೆಲಕ್ಕುರುಳಿ ರೈತರು ಆತಂಕಕ್ಕೀಡಗಿದ್ದಾರೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.

ತೆಂಗಿನಮರಗಳು ಸಹ ನೆಲಕ್ಕುರುಳಿವೆ. ವರ್ಷಗಟ್ಟಲೆ ಬೆಳೆಸಿದ ಮರಗಳು ಒಂದೇ ರಾತ್ರಿಯಲ್ಲಿ ನೆಲಕ್ಕುರುಳಿರುವುದು ಸಾವಿರಾರು ರೈತರ ಜೀವನಾಧಾರಿತವೇ ಕಿತ್ತುಹೋಗಿದೆ. ರೈತನ ಬೆವರಿನ ಫಸಲು ನೀರಿನಲ್ಲಿ ಕೊಚ್ಚಿ ಹೋಗಿದೆ. ಅಡಿಕೆ ಒಂದು ಬೆಳೆ ಅಲ್ಲ, ಮಲೆನಾಡಿನ ಜೀವನಾಡಿ. ಆದ್ದರಿಂದ ಈ ಘಟನೆ ಬಗ್ಗೆ ಅಧಿಕಾರಿಗಳಿಂದ ನೈಜವಾದ ಸರ್ವೆ ಮಾಡಿಸಿ ತಕ್ಷಣ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ರಾಜ್ಯ ರೈತ ಸಂಘದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ಮಾತನಾಡಿ, ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ಪರಿಹಾರ ನೀಡಿ ಮಾರ್ಗಸೂಚಿ ಪ್ರಕಾರ ಪರಿಹಾರದ ಮೊತ್ತ 1 ಹೆಕ್ಟೇರ್ ಒಣಭೂಮಿ ಬೆಳೆಗೆ 8500 ರು., ನೀರಾವರಿ ಬೆಳೆಗೆ 17 ಸಾವಿರ ರು., ಬಹುವಾರ್ಷಿಕ ತೋಟದ ಬೆಳೆಗಳಿಗೆ 22 ಸಾವಿರ ರು., ಇದೆ. ಈ ಪರಿಹಾರವನ್ನು ಶೇ.33 ಕ್ಕಿಂತ ಹೆಚ್ಚು ಹಾನಿಯಾಗಿದ್ದಲ್ಲಿ ಮಾತ್ರ ಕೊಡಬಹುದು. 1 ಹೆಕ್ಟೇರ್‌ನಲ್ಲಿ 2.5 ಎಕರೆ ಅಡಕೆ ಬೆಳೆಗೆ 22 ಸಾವಿರ ರು., 1 ಎಕರೆಗೆ 9 ಸಾವಿರದಂತೆ 548 ಗಿಡಗಳಿಗೆ ಲೆಕ್ಕ ಹಾಕಿದಾಗ ಒಂದು ಮರಕ್ಕೆ 16 ರು. ಬರುತ್ತದೆ. ಈ 16 ರು.ನಿಂದ 1 ಅಡಕೆ ಮರವನ್ನು ತೋಟದಿಂದ ಕಡಿದು ಹೊರಗೆ ಸಾಗಿಸಲಿಕ್ಕು ಸಹ ಸಾಧ್ಯವಿಲ್ಲ. ಆದ್ದರಿಂದ ವಿಪತ್ತು ಪರಿಹಾರ ನಿಧಿ ಹೆಚ್ಚಿಸಲು ಹಿಂದಿನಿಂದಲೂ ರೈತ ಸಂಘ ಪಾದಯಾತ್ರೆ, ಚಳವಳಿಗಳನ್ನು ಮಾಡಿ ಒತ್ತಾಯಿಸುತ್ತ ಬಂದಿದೆ. ಇಲ್ಲಿಯವರೆಗೂ ಹೆಚ್ಚಳ ಮಾಡಿಲ್ಲ. ಈಗಲಾದರೂ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿದರು.

ಅಡಕೆ ಬೆಳೆ ಬೆಳೆಯಲು ಅಡಕೆ ಸಸಿ ನೆಟ್ಟು ಸಾವಿರಾರು ರು. ಖರ್ಚು ಮಾಡಿ ಫಸಲು ಬರಲು ಕನಿಷ್ಠ 8 ವರ್ಷ ಕಾಯಬೇಕು. ಈ ರೀತಿ ಬೆಳೆಸಿದ ಅಡಿಕೆ ಮರಗಳು ಸಂಪೂರ್ಣ ನೆಲಕ್ಕುರುಳಿದಾಗ ಲಕ್ಷಾಂತರ ರೂ. ನಷ್ಟವಾಗುತ್ತದೆ. ಆದ್ದರಿಂದ ಮಳೆಯಿಂದ ಆದ ಹಾನಿಯನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಪರಿಹಾರ ಮೊತ್ತವನ್ನು 20 ಪಟ್ಟು ಹೆಚ್ಚಿಸಬೇಕು. ಎಲ್ಲಾ ರೈತರಿಗೂ ಎಕರೆಗೆ ಕನಿಷ್ಠ 50 ಸಾವಿರ ರು. ಪರಿಹಾರ ನೀಡಬೇಕು. ಜಿಲ್ಲಾಧಿಕಾರಿ ಪ್ರತೀ ಹಳ್ಳಿಗೂ ಭೇಟಿ ನೀಡಿ ನೈಜ ಸಮೀಕ್ಷೆ ಮಾಡಿಸಬೇಕು. ಹಾನಿಗೊಳಗಾದ ಮನೆಗಳಿಗೆ ಹೊಸದಾಗಿ ಮನೆಕಟ್ಟಿಕೊಳ್ಳಲು 5 ಲಕ್ಷ ರು. ಪರಿಹಾರ ನೀಡಬೇಕೆಂದರು.

ರೈತ ಸಂಘದ ಜಿಲ್ಲಾಧ್ಯಕ್ಷ ಕೆ.ರಾಘವೇಂದ್ರ, ರಾಜ್ಯ ಮಹಿಳಾ ಸಂಚಾಲಕಿ ಭಾಗ್ಯ ರಾಘವೇಂದ್ರ, ರಾಜ್ಯ ಉಪಾಧ್ಯಕ್ಷ ಟಿ.ಎಂ.ಚಂದ್ರಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಬಿ.ಜಗದೀಶ್, ಪ್ರಮುಖರಾದ ಸಿ.ಬಿ.ಹನುಮಂತಪ್ಪ, ಡಿ.ಎನ್.ಪಂಚಾಕ್ಷರಿ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಳೆ ಶ್ರೀಷಡಕ್ಷರ ಗವಿಮಠದಲ್ಲಿ ಧಾರ್ಮಿಕ ಸಭೆ
ಗೋಮಾಳ ಜಮೀನಿನಲ್ಲಿ ಅಕ್ರಮ ಜೆಎಂಸಿ ಸರ್ವೇಗೆ ಖಂಡನೆ