ಕನ್ನಡಪ್ರಭ ವಾರ್ತೆ ಟಿ. ನರಸೀಪುರಸ್ವಚ್ಚತೆ ಮತ್ತು ನೈರ್ಮಲ್ಯಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಜನವರಿ 21ರಿಂದ ಆರಂಭವಾಗಲಿರುವ ಮುಡುಕುತೊರೆ ಮಲ್ಲಿಕಾರ್ಜುನ ಸ್ವಾಮಿ ಜಾತ್ರೆಗೆ ಬರುವ ಭಕ್ತರಿಗೆ ಅಗತ್ಯ ಸೌಲಭ್ಯ ಕಲ್ಪಿಸಿಕೊಡುವ ಮೂಲಕ ಜಾತ್ರೆಯನ್ನು ಯಶಸ್ವಿಗೊಳಿಸಬೇಕೆಂದು ಜಿಲ್ಲಾ ಉಸ್ತುವಾರಿ ಹಾಗೂ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅಧಿಕಾರಿಗಳಿಗೆ ಸೂಚಿಸಿದರು.ತಾಲೂಕಿನ ಮುಡುಕುತೊರೆಯ ಜೆಎಸ್ಎಸ್ ಕಲ್ಯಾಣ ಮಂಟಪದಲ್ಲಿ ಸೋಮವಾರ ನಡೆದ ಮುಡುಕುತೊರೆ ಜಾತ್ರಾ ಮಹೋತ್ಸವ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಮುಡುಕುತೊರೆ ಮಲ್ಲಿಕಾರ್ಜುನ ಸ್ವಾಮಿ ಜಾತ್ರೆಯು ತಾಲೂಕಿನಲ್ಲಿಯೇ ಪ್ರಮುಖವಾದ ಪ್ರಸಿದ್ದ ಜಾತ್ರೆಯಾಗಿರುವುದರಿಂದ ಜಾನುವಾರು ಹಾಗೂ ರಥೋತ್ಸವ ಕಾರ್ಯಕ್ರಮಕ್ಕೆ ನಿರೀಕ್ಷೆಗೂ ಮೀರಿದ ಭಕ್ತಾಧಿಗಳು ಬರುವ ಹಿನ್ನೆಲೆ ಅಧಿಕಾರಿಗಳು ಬರುವ ಭಕ್ತಾಧಿಗಳಿಗೆ ಯಾವುದೇ ತೊಂದರೆ ಎದುರಾಗದಂತೆ ಮುಂಜಾಗ್ರತ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.ಜಾತ್ರೆ ಹಿನ್ನೆಲೆಯಲ್ಲಿ ರಸ್ತೆ ದುರಸ್ತಿ, ಶುದ್ಧ ಕುಡಿಯುವ ನೀರು, ವಿದ್ಯುತ್, ಮಹಿಳೆಯರಿಗೆ ಬಟ್ಟೆ ಬದಲಿಸುವ ಕೇಂದ್ರಗಳು ಸೇರಿದಂತೆ ಮತ್ತೀತರ ಮೂಲಭೂತ ಸೌಕರ್ಯಕ್ಕೆ ಆದ್ಯತೆ ನೀಡಬೇಕೆಂದು ಸೂಚಿಸಿದರು.ಈ ಬಾರಿ ಜಾತ್ರೆಯು ಜ. 21 ರಿಂದ 29 ರವರೆಗೆ 9 ದಿನಗಳ ನಡೆಯಲಿದ್ದು, ಕಳೆದ ಬಾರಿ ಜಾತ್ರೆಯ ವೆಚ್ಚಕ್ಕೆ 19 ಲಕ್ಷ ವೆಚ್ಚವಾಗಿದ್ದು, ಅಧಿಕಾರಿಗಳ ಮಾಹಿತಿ ಅನ್ವಯ ಈ ಬಾರಿ 21 ಲಕ್ಷ ರು. ಗಳ ವೆಚ್ಚವಾಗಬಹುದೆಂದು ಅಂದಾಜಿಸಲಾಗಿದೆ ಎಂದರು. ಮುಡುಕುತೊರೆ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧ:ಮುಡುಕುತೊರೆಯು ಪ್ರಸಿದ್ಧ ಧಾರ್ಮಿಕ ಸ್ಥಳವಾಗಿದ್ದು, ಪ್ರವಾಸೋದ್ಯಮ ಕೇಂದ್ರವೂ ಆಗಿದೆ. ಈ ಹಿನ್ನೆಲೆ ಈ ಭಾಗವನ್ನು ಮತ್ತಷ್ಟು ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದ ಸಚಿವರು, ಈಗಾಗಲೇ ವಸತಿ ಶಾಲೆ ನಿರ್ಮಾಣ, ಏತ ನೀರಾವರಿ ಯೋಜನೆ, ರಸ್ತೆಗಳ ನಿರ್ಮಾಣ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳು ಮಾಡಲಾಗಿದೆ ಎಂದರು.ಶಿಷ್ಠಾಚಾರ ಉಲ್ಲಂಘನೆ- ಮುಡುಕುತೊರೆ ಜಾತ್ರೆ ಆಹ್ವಾನಪತ್ರಿಕೆಯಲ್ಲಿ ಶಿಷ್ಠಾಚಾರ ಉಲ್ಲಂಘಿಸಲಾಗಿದೆ ಎಂದು ತಾಪಂ ಮಾಜಿ ಸದಸ್ಯ ನರಸಿಂಹ ಮಾದನಾಯಕ ಮುಡುಕುತೊರೆ ದೇವಸ್ಥಾನ ಇಒ ವೆಂಕಟೇಶ್ ಪ್ರಸಾದ್ ಮೇಲೆ ಗರಂ ಆದರು. ತಲಕಾಡು ವೈದ್ಯನಾಥೇಶ್ವರ ಸಮೂಹ ದೇವಾಲಯ ಸಮಿತಿ ಅಧ್ಯಕ್ಷ ನಾಗರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಡಿ. ಬಸವರಾಜು, ಗ್ರಾಪಂ ಅಧ್ಯಕ್ಷೆ ಪುಟ್ಟಮ್ಮ, ಉಪಾಧ್ಯಕ್ಷ ದಕ್ಷಿಣಾಮೂರ್ತಿ, ಗೋಪಾಲ್ , ರವಿಕುಮಾರ್ , ಬಸವರಾಜು ಶ್ರೀನಿವಾಸ್ , ತಹಸೀಲ್ದಾರ್ ಸುರೇಶ್ ಆಚಾರ್ ಇದ್ದರು.-------------