ಹಾವೇರಿ ವಿವಿಗೆ ಅಗತ್ಯ ಅನುದಾನ ಒದಗಿಸಿ: ಹೋರಾಟ ಸಮಿತಿ ಮನವಿ

KannadaprabhaNewsNetwork | Published : May 7, 2025 12:45 AM
Follow Us

ಸಾರಾಂಶ

ಹಾವೇರಿ ವಿವಿ ಮುಚ್ಚುವ ರಾಜ್ಯ ಸರ್ಕಾರದ ತೀರ್ಮಾನದಿಂದ ನಮ್ಮ ಹಾವೇರಿ ಜಿಲ್ಲೆಯ ಬಡ, ಮಧ್ಯಮ ವರ್ಗದ ಹಾಗೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು, ಅದರಲ್ಲೂ ವಿಶೇಷವಾಗಿ ಹೆಣ್ಣುಮಕ್ಕಳಿಗೆ ಉನ್ನತ ವಿದ್ಯಾಭ್ಯಾಸದಿಂದ ವಂಚಿತರಾಗುತ್ತಾರೆ.

ಹಾವೇರಿ: ಹಾವೇರಿ ವಿಶ್ವವಿದ್ಯಾಲಯವನ್ನು ವಿಲೀನಗೊಳಿಸುವ ಅಥವಾ ಮುಚ್ಚುವ ಪ್ರಕ್ರಿಯೆ ರದ್ದುಪಡಿಸಲು ಹಾಗೂ ವಿವಿಗೆ ಅಗತ್ಯ ಅನುದಾನ ಒದಗಿಸುವಂತೆ ಒತ್ತಾಯಿಸಿ ಸಿಎಂ ಸಿದ್ದರಾಮಯ್ಯ ಅವರಿಗೆ ಹಾವೇರಿ ವಿವಿ ಉಳಿಸಿ ಹೋರಾಟ ಸಮಿತಿ ಮನವಿ ಸಲ್ಲಿಸಿತು.

ಹಾನಗಲ್ಲ ತಾಲೂಕಿನ ಅಕ್ಕಿಆಲೂರಿಗೆ ಆಗಮಿಸಿದ್ದ ಸಿಎಂಗೆ ಸಲ್ಲಿಸಿದ ಮನವಿಯಲ್ಲಿ ಹಾವೇರಿ ವಿವಿಯನ್ನು ರಾಜ್ಯ ಸರ್ಕಾರ ಮುಚ್ಚುವ ಪ್ರಕ್ರಿಯೆ ರದ್ದುಪಡಿಸಲು ಒತ್ತಾಯಿಸಿ ಕಳೆದ ಫೆಬ್ರವರಿಯಿಂದ ಹಲವು ಹೋರಾಟ ಮಾಡಲಾಗಿದೆ. ಇದರಲ್ಲಿ ಬಹುತೇಕ ಎಲ್ಲ ವರ್ಗದ, ವೃತ್ತಿಯ ಸಂಘಟನೆಗಳು ಹಾಗೂ ಜಿಲ್ಲೆಯ ಮಠಾಧೀಶರು ಪ್ರತಿಭಟಿಸಿ ಮಂತ್ರಿಗಳು, ಶಾಸಕರು, ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿದ್ದನ್ನು ಸ್ಮರಿಸಿದರು.

ಆದರೆ ಡಿಸಿಎಂ ಹಾಗೂ ಉನ್ನತ ಶಿಕ್ಷಣ ಸಚಿವರ ಹೇಳಿಕೆಗಳು ಆತಂಕ ಉಂಟು ಮಾಡಿವೆ. ವಿವಿಗಳನ್ನು ಮುಚ್ಚದೇ ಬದಲಾಗಿ ವಿಲೀನಗೊಳಿಸುತ್ತೇವೆ ಎಂಬುದು ಆತಂಕವನ್ನುಂಟು ಮಾಡಿದೆ. ಇದು ರಾಜ್ಯದ ಜನರಲ್ಲಿ ಗೊಂದಲವನ್ನುಂಟು ಮಾಡುತ್ತಿವೆ. ಹಾವೇರಿ ವಿವಿ ಮುಚ್ಚುವ ರಾಜ್ಯ ಸರ್ಕಾರದ ತೀರ್ಮಾನದಿಂದ ನಮ್ಮ ಹಾವೇರಿ ಜಿಲ್ಲೆಯ ಬಡ, ಮಧ್ಯಮ ವರ್ಗದ ಹಾಗೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು, ಅದರಲ್ಲೂ ವಿಶೇಷವಾಗಿ ಹೆಣ್ಣುಮಕ್ಕಳಿಗೆ ಉನ್ನತ ವಿದ್ಯಾಭ್ಯಾಸದಿಂದ ವಂಚಿತರಾಗುತ್ತಾರೆ. ಅವರೆಲ್ಲರೂ ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಾರೆ ಎಂಬುದನ್ನು ಸರ್ಕಾರ ಅರಿಯಬೇಕೆಂದು ಒತ್ತಾಯಿಸಿದರು.

ಈ ವೇಳೆ ಸಾಹಿತಿ ಸತೀಶ ಕುಲಕರ್ಣಿ, ಹೊನ್ನಪ್ಪ ಮರೆಮ್ಮನವರ, ಪರಿಮಳ ಜೈನ್‌, ಆಂಜನೇಯ ಇತರರು ಇದ್ದರು. ರಕ್ತದಾನದಿಂದ ದೇಶ, ದೇಹದ ರಕ್ಷಣೆ

ರಾಣಿಬೆನ್ನೂರು: ಯುವ ಜನತೆ ರಕ್ತದಾನ ಮಾಡುವುದರಿಂದ ದೇಶ ಹಾಗೂ ದೇಹದ ರಕ್ಷಣೆಯಾಗುತ್ತದೆ ಎಂದು ಬಿಎಜೆಎಸ್‌ಎಸ್ ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ಡಾ. ಆರ್.ಎಂ.ಕುಬೇರಪ್ಪ ಹೇಳಿದರು.ನಗರದ ಬಿಎಜೆಎಸ್‌ಎಸ್ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಹಾವೇರಿ ಜಿಲ್ಲಾ ರಕ್ತ ಕೇಂದ್ರದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.ಜಿಲ್ಲಾ ರಕ್ತ ಕೇಂದ್ರದ ವೈದ್ಯಾಧಿಕಾರಿ ಡಾ. ಬಸವರಾಜ ತಳವಾರ ಮಾತನಾಡಿ, ರಕ್ತದಾನದಿಂದ ದಾನಿಯ ಆರೋಗ್ಯದಲ್ಲಿ ನವಚೈತನ್ಯ ಉಂಟಾಗುತ್ತದೆ ಹಾಗೂ ಕೋಲೆಸ್ಟ್ರಾಲ್ ಪ್ರಮಾಣ ಕಡಿಮೆಯಾಗುತ್ತದೆ ಎಂದರು.

ಪ್ರಾ.ಪ್ರಕಾಶ ಬಸಪ್ಪನವರ, ನಿವೃತ್ತ ಉಪನ್ಯಾಸಕ ಎಚ್.ಎ. ಭಿಕ್ಷಾವರ್ತಿಮಠ, ಕೆ.ಕೆ. ಹಾವಿನಾಳ, ಬಸವರಾಜ ಕಮತದ, ಸಂತೋಷ ನೆಲ್ಲಿಕೊಪ್ಪ, ಸುಮಾ ಲಮಾಣಿ, ಡಾ. ಚಂದ್ರಶೇಖರ, ರಿಯಾನಾಬಾನು ದೊಡ್ಡಮನಿ, ಕಾವ್ಯಾ ಹುಲ್ಲತ್ತಿ ಉಪಸ್ಥಿತರಿದ್ದರು.ಶಿಬಿರದಲ್ಲಿ 105 ವಿದ್ಯಾರ್ಥಿಗಳ ರಕ್ತ ತಪಾಸಣೆ ಮಾಡಲಾಯಿತು. 23 ವಿದ್ಯಾರ್ಥಿಗಳು ರಕ್ತದಾನ ಮಾಡಿದರು.