ಹೆಗಡೆ ನಗರ ನಿರಾಶ್ರಿತರಿಗೆ ಶಾಶ್ವತ ಸೂರು ಕಲ್ಪಿಸಿ

KannadaprabhaNewsNetwork |  
Published : May 19, 2024, 01:51 AM IST
18ಕೆಡಿವಿಜಿ6, 7-ದಾವಣಗೆರೆ ಹೆಗ್ಡೆ ನಗರ ನಿರಾಶ್ರಿತರಿಗೆ ಶಾಶ್ವತ ಸೂರು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಪಾಲಿಕೆ ಅಧಿಕಾರಿಗಳ ಮುಖಾಂತರ ವಸತಿ ಸಚಿವ ಜಮೀರ್ ಅಹಮ್ಮದ್‌ರಿಗೆ ಮನವಿ ಅರ್ಪಿಸಲಾಯಿತು. | Kannada Prabha

ಸಾರಾಂಶ

ರಾಮಕೃಷ್ಣ ಹೆಗಡೆ ನಗರದ ಸಂತ್ರಸ್ತ ನಿವಾಸಿಗಳಿಗೆ ಶಾಶ್ವತ ಸೂರು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ರಾಮಕೃಷ್ಣ ಹೆಗಡೆ ನಗರ ನಿವಾಸಿಗಳ ಸಮಿತಿ, ದಾವಣಗೆರೆ ಸ್ಲಂ ಜನರ ಸಂಘಟನೆ- ಕರ್ನಾಟಕ, ಬೆಂಗಳೂರಿನ ಸ್ಲಂ ಮಹಿಳೆಯರ ಸಂಘಟನೆ, ಜಿಲ್ಲಾ ಪ್ರಗತಿಪರ ಸಂಘಟನೆಗಳ ಒಕ್ಕೂಟ, ನೆರಳು ಬೀಡಿ ಕಾರ್ಮಿಕರ ಯೂನಿಯನ್‌ನಿಂದ ಪ್ರತಿಭಟಿಸಿ, ಮಹಾನಗರ ಪಾಲಿಕೆಗೆ ಮನವಿ ಸಲ್ಲಿಸಲಾಯಿತು.

- ಪ್ರತಿಭಟನೆಯಲ್ಲಿ ಯೂನಿಯನ್‌ ಅಧ್ಯಕ್ಷೆ ಜಬೀನಾ ಖಾನಂ ಆಗ್ರಹ । ಪಾಲಿಕೆ ಮುಖೇನ ವಸತಿ ಸಚಿವರಿಗೆ ಮನವಿ - - -

ಕನ್ನಡಪ್ರಭ ವಾರ್ತೆ, ದಾವಣಗೆರೆ

ರಾಮಕೃಷ್ಣ ಹೆಗಡೆ ನಗರದ ಸಂತ್ರಸ್ತ ನಿವಾಸಿಗಳಿಗೆ ಶಾಶ್ವತ ಸೂರು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ರಾಮಕೃಷ್ಣ ಹೆಗಡೆ ನಗರ ನಿವಾಸಿಗಳ ಸಮಿತಿ, ದಾವಣಗೆರೆ ಸ್ಲಂ ಜನರ ಸಂಘಟನೆ- ಕರ್ನಾಟಕ, ಬೆಂಗಳೂರಿನ ಸ್ಲಂ ಮಹಿಳೆಯರ ಸಂಘಟನೆ, ಜಿಲ್ಲಾ ಪ್ರಗತಿಪರ ಸಂಘಟನೆಗಳ ಒಕ್ಕೂಟ, ನೆರಳು ಬೀಡಿ ಕಾರ್ಮಿಕರ ಯೂನಿಯನ್‌ನಿಂದ ಪ್ರತಿಭಟಿಸಿ, ಮಹಾನಗರ ಪಾಲಿಕೆಗೆ ಮನವಿ ಸಲ್ಲಿಸಲಾಯಿತು. ಯೂನಿಯನ್‌ ಅಧ್ಯಕ್ಷೆ ಜಬೀನಾ ಖಾನಂ ಮಾತನಾಡಿ, ನಗರ ಹಾಗೂ ಸುತ್ತಮುತ್ತ ಗುರುವಾರ ಸಂಜೆ ಸಿಡಿಲು, ಗುಡುಗಿನ ಆರ್ಭಟದೊಂದಿಗೆ ಗಾಳಿ, ಮಳೆ ಸಂಭವಿಸಿದೆ. ಈ ವೇಳೆ ರಾಮಕೃಷ್ಣ ಹೆಗಡೆ ನಗರ ನಿವಾಸಿಗಳನ್ನು ಸ್ಥಳಾಂತರಿಸಿದ್ದ ಪ್ರದೇಶದಲ್ಲಿ ಪಾಲಿಕೆ ತಾತ್ಕಾಲಿಕವಾಗಿ ಅಳವಡಿಸಿದ್ದ ತಗಡಿನ ಶೆಡ್‌ಗಳು ಕಿತ್ತುಹೋಗಿವೆ. ತಗಡಿನ ಶೀಟುಗಳು ನೂರಾರು ಅಡಿಗಳಷ್ಟು ದೂರಕ್ಕೆ ಹಾರಿಬಿದ್ದಿವೆ ಎಂದರು.

ಸಂತ್ರಸ್ತರು ಜೀವನಕ್ಕೆ ತಂದಿಟ್ಟುಕೊಂಡಿದ್ದ ಆಹಾರ ಧಾನ್ಯ, ಎಣ್ಣೆ ಇತರೆ ಗೃಹೋಪಯೋಗಿ ವಸ್ತುಗಳು ಸಂಪೂರ್ಣ ಹಾಳಾಗಿವೆ. ಬಟ್ಟೆಗಳು ಸಂಪೂರ್ಣ ತೊಯ್ದು, ಒಣ ಬಟ್ಟೆಗಳು ಸಹ ಬಳಸಲು ಇಲ್ಲದ ಸ್ಥಿತಿ ಉಂಟಾಗಿದೆ. ಸುಮಾರು 500 ಕುಟುಂಬಗಳನ್ನು ಯಾವುದೇ ಮೂಲಸೌಕರ್ಯ, ಕನಿಷ್ಠ ಸೌಲಭ್ಯಗಳೂ ಇಲ್ಲದ ನಿರ್ಜನ ಪ್ರದೇಶಕ್ಕೆ ಸ್ಥಳಾಂತರಿಸಿದ್ದು ಎಷ್ಟು ಸರಿ? ಪಾಲಿಕೆ ಆಡಳಿತ, ಆಯುಕ್ತರು ತಕ್ಷಣ ಎಚ್ಚೆತ್ತುಕೊಂಡು, ನೊಂದ ಸಂತ್ರಸ್ತರಿಗೆ ಶಾಶ್ವತ ಸೂರು ಕಲ್ಪಿಸಲು ಮನೆ ಕಟ್ಟುವ ಕಾಮಗಾರಿ ಆರಂಭಿಸಬೇಕು ಎಂದು ಒತ್ತಾಯಿಸಿದರು.

ವರ್ತುಲ ರಸ್ತೆ ನಿರ್ಮಾಣಕ್ಕಾಗಿ ವಾಸವಿದ್ದ ಜಾಗದಿಂದಲೇ 4 ದಶಕದಿಂದ ಈ ಎಲ್ಲರನ್ನೂ ಒಕ್ಕಲೆಬ್ಬಿಸಿ, ನಿರ್ಜನ ಪ್ರದೇಶಕ್ಕೆ ತಳ್ಳಲಾಗಿದೆ. ಮಕ್ಕಳು, ಮಹಿಳೆಯರು, ಗರ್ಭಿಣಿ, ಬಾಣಂತಿಯರು, ವಿಶೇಷಚೇತನರು, ಹಸುಗೂಸುಗಳು ರಣಬೀಸಿಲಿನಲ್ಲಿ ಬಳಲಿ, ಬೆಂದುಹೋಗಿದ್ದಾರೆ. ಈಗ ಮಳೆಯಿಂದಾಗಿ ಜೀವನ ನಡೆಸುವುದೇ ಕಷ್ಟವಾಗಿದೆ. ಪ್ರಾಣ ಕೈಯಲ್ಲಿಡಿದು ದಿನ ಕಳೆಯುವಂತಾಗಿದೆ. 500 ಕುಟುಂಬಗಳ ಬದುಕು ಬೀದಿಗೆ ಬೀಳುವ ಅಪಾಯದಲ್ಲಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಸಂತ್ರಸ್ತರಿಗೆ ಶಾಶ್ವತ ಸೂರು ಕಲ್ಪಿಸುವಂತೆ ಅನೇಕ ಸಲ ಪ್ರತಿಭಟನೆ ನಡೆಸಿದ್ದರೂ ಅಧಿಕಾರಿಗಳು ಸ್ಪಂದಿಸಿಲ್ಲ. ಲೋಕಸಭೆ ಚುನಾವಣೆ ನೀತಿ ಸಂಹಿತೆಯ ನೆಪವೊಡ್ಡಿ, ಇಷ್ಟು ದಿನ ಕಾಲ ತಳ್ಳಿದರು. ಈಗ ಮಳೆಗಾಲ ಶುರುವಾಗಿದೆ. ಶೀಘ್ರವೇ ರಾಮಕೃಷ್ಣ ಹೆಗಡೆ ನಗರ ನಿರಾಶ್ರಿತರಿಗೆ ಶಾಶ್ವತ ಸೂರು ಕಟ್ಟಿಕೊಡದಿದ್ದರೆ ಮುಂದೆ ಆಗುವಂಥ ಅನಾಹುತಗಳಿಗೆ ರಾಜ್ಯ ಸರ್ಕಾರ, ಪಾಲಿಕೆ ಹಾಗೂ ಇಲಾಖೆ ಅಧಿಕಾರಿಗಳೇ ನೇರ ಹೊಣೆ ಎಂದು ಜಬೀನಾ ಖಾನಂ ಎಚ್ಚರಿಸಿದರು.

ಪಾಲಿಕೆ ಕಚೇರಿಯಲ್ಲಿ ಅಧಿಕಾರಿ ಮುಖಾಂತರ ವಸತಿ ಸಚಿವ ಜಮೀರ್ ಅಹಮ್ಮದ್‌ ಅವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಸಂಘಟನೆಗಳ ಮುಖಂಡರಾದ ಎಂ.ಕರಿಬಸಪ್ಪ, ಆವರಗೆರೆ ಚಂದ್ರು, ನೂರ್‌ ಫಾತಿಮಾ, ಸುಹೇಲ್‌, ಶಿರೀನ್ ಬಾನು, ಹೆಗ್ಗೆರೆ ರಂಗಪ್ಪ, ಮಹಮ್ಮದ, ಅನೇಕರು ಪಾಲ್ಗೊಂಡಿದ್ದರು.

- - -

ಬಾಕ್ಸ್‌

* ಬೇಡಿಕೆಗಳೇನು?

- ಮನೆಗಳನ್ನು ಕಲ್ಪಿಸುವವರೆಗೂ ರಾಮಕೃಷ್ಣ ಹೆಗಡೆ ನಗರ ನಿವಾಸಿಗಳಿಗೆ ಬಾಡಿಗೆ ಮನೆಗಳನ್ನು ಮಾಡಿ, ಪಾಲಿಕೆಯಿಂದಲೇ ಬಾಡಿಗೆಯ ಹಣ ಭರಿಸಬೇಕು.

- ಸಂತ್ರಸ್ತರಿಗೆ ತಕ್ಷಣ‍ವೇ ಜಾಗ, ಮನೆಗಳ ಹಕ್ಕುಪತ್ರವನ್ನು ನೀಡಬೇಕು

- ರಸ್ತೆ, ಚರಂಡಿ, ಒಳಚರಂಡಿ, ನ್ಯಾಯಬೆಲೆ ಅಂಗಡಿ, ಆಸ್ಪತ್ರೆ, ಸಾರಿಗೆ, ಶಿಕ್ಷಣ ಸೇರಿದಂತೆ ಮೂಲ ಸೌಕರ್ಯಗಳನ್ನು ಪ್ರಥಮಾದ್ಯತೆ ಮೇಲೆ ಒದಗಿಸಬೇಕು

- ಎಷ್ಟು ದಿನಗಳಲ್ಲಿ ಶಾಶ್ವತ ಸೂರು ಕಲ್ಪಿಸಲಾಗುತ್ತದೆ ಎಂಬ ಬಗ್ಗೆ ಲಿಖಿತವಾಗಿ ಪಾಲಿಕೆ ಆಯುಕ್ತರು ನೀಡಬೇಕು

- ಪ್ರತಿ 3 ತಿಂಗಳಿಗೊಮ್ಮೆ ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತರ ಸಮ್ಮುಖ ಸಂತ್ರಸ್ತರ ಕುಂದುಕೊರತೆ ಸಭೆ ನಡೆಸಬೇಕು

- - -

-18ಕೆಡಿವಿಜಿ6, 7:

ದಾವಣಗೆರೆಯ ರಾಮಕೃಷ್ಣ ಹೆಗಡೆ ನಗರ ನಿರಾಶ್ರಿತರಿಗೆ ಶಾಶ್ವತ ಸೂರು ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸಲು ಒತ್ತಾಯಿಸಿ ಪ್ರತಿಭಟನೆ ನಡೆಸಿ, ಪಾಲಿಕೆ ಮೂಲಕ ವಸತಿ ಸಚಿವ ಜಮೀರ್ ಅಹಮ್ಮದ್‌ ಅವರಿಗೆ ಮನವಿ ಅರ್ಪಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಟಿ ಆತ್ಮ*ತ್ಯೆಗೆ ಸರ್ಕಾರಿ ನೌಕರಿಗೆ ಸೇರುವಂತೆ ಕುಟುಂಬ ಒತ್ತಡ ಕಾರಣ?
ನಮ್ಮವರಿಗೆ ಇಲ್ಲದ ಪರಿಹಾರ ಅವರಿಗೆ ಏಕೆ : ಬಿಜೆಪಿ ಆಕ್ರೋಶ