ಬಳ್ಳಾರಿಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ತಂಪಾಯಿತು ಇಳೆ

KannadaprabhaNewsNetwork |  
Published : May 19, 2024, 01:51 AM IST
ಬಳ್ಳಾರಿ ಹೊರ ವಲಯದ ಬೇವಿನಹಳ್ಳಿ ಬಳಿ ರೈತರು ಭೂಮಿ ಹದಗೊಳಿಸುವ ಕೆಲಸದಲ್ಲಿ ನಿರತರಾಗಿದ್ದರು.  | Kannada Prabha

ಸಾರಾಂಶ

ಕಳೆದ ವರ್ಷ ಮಳೆಯಿಲ್ಲದೇ ಭೀಕರ ಬರಗಾಲ ಎದುರಾಗಿತ್ತು. ಬೆಳೆ ನಷ್ಟದಿಂದಾಗಿ ರೈತರು ಸಾಲಗಾರರಾಗಿದ್ದರು.

ಕೆ.ಎಂ. ಮಂಜುನಾಥ್

ಬಳ್ಳಾರಿ: ಮುಂಗಾರು ಮಳೆಗಾಗಿ ಆಕಾಶದತ್ತ ಮುಖವೊಡ್ಡಿದ್ದ ರೈತರ ಮುಖದಲ್ಲೀಗ ಒಂದಷ್ಟು ಮಂದಹಾಸ ಮೂಡಿದೆ. ವರುಣನ ಆಗಮನಕ್ಕಾಗಿ ಎದುರು ನೋಡುತ್ತಿದ್ದ ಅನ್ನದಾತರು ಕಳೆದ ಒಂದು ವಾರದಲ್ಲಿ ಜಿಲ್ಲೆಯಲ್ಲಾದ ವಾಡಿಕೆಗಿಂತ ಉತ್ತಮ ಮಳೆಯಿಂದ ಸಂತಸಗೊಂಡಿದ್ದಾರೆ. ಜಿಲ್ಲೆಯ ನಾನಾ ಕಡೆ ಸುರಿದ ಮಳೆಯಿಂದ ಕೃಷಿ ಚಟುವಟಿಕೆಗೂ ಚಾಲನೆ ದೊರೆತಿದೆ. ಇದರಿಂದ ಈ ಬಾರಿಯ ಮುಂಗಾರು ಹಂಗಾಮಿಗೆ ಉತ್ತಮ ಆರಂಭ ಸಿಕ್ಕಂತಾಗಿದೆ.

ರಣ ಬಿಸಿಲಿನಿಂದ ಬೆಂಕಿಯ ಉಂಡೆಯಂತಾಗಿದ್ದ ಬಿಸಿಲೂರು ಖ್ಯಾತಿಯ ಬಳ್ಳಾರಿ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಆಗಾಗ್ಗೆ ಸುರಿಯುತ್ತಿರುವ ಮಳೆ ಇಳೆಯನ್ನು ತಂಪಾಗಿಸಿದೆಯಷ್ಟೇ ಅಲ್ಲ; ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದೆ. ಜಿಲ್ಲೆ ನಾನಾ ಕಡೆಗಳಲ್ಲಿ ಬಿತ್ತನೆಗಾಗಿ ಭೂಮಿಯನ್ನು ಹದಗೊಳಿಸುವ ಕೆಲಸ ಚುರುಕುಗೊಂಡಿದೆ.

ಕಳೆದ ವರ್ಷ ಮಳೆಯಿಲ್ಲದೇ ಭೀಕರ ಬರಗಾಲ ಎದುರಾಗಿತ್ತು. ಬೆಳೆ ನಷ್ಟದಿಂದಾಗಿ ರೈತರು ಸಾಲಗಾರರಾಗಿದ್ದರು. ಇದು ಜೀವನ ನಿರ್ವಹಣೆಗೂ ಸಂಕಷ್ಟ ತಂದೊಡ್ಡಿತ್ತು. ಸಾಲಗಾರರ ಕಾಟ ತಾಳಲಾರದೆ ಜಿಲ್ಲೆಯ ಸಾವಿರಾರು ರೈತರು ಬೆಂಗಳೂರು, ಹೈದ್ರಾಬಾದ್ ಸೇರಿದಂತೆ ನಾನಾ ಕಡೆ ವಲಸೆ ಹೋಗಿದ್ದರು. ಕಳೆದ ವಾರದಿಂದ ಜಿಲ್ಲೆಯಲ್ಲಿ ವಾಡಿಕೆಗಿಂತ ಉತ್ತಮ ಮಳೆಯಾಗುತ್ತಿರುವುದರಿಂದ ಹೊಟ್ಟೆಪಾಡಿಗಾಗಿ ದೂರದ ಊರುಗಳಿಗೆ ತೆರಳಿದ್ದವರು ಊರು ಕಡೆ ವಾಪಸಾಗುತ್ತಿದ್ದಾರೆ.

ತಂಪಾಯಿತು ಬಿಸಿಲೂರು: ಜಿಲ್ಲೆಯಲ್ಲಿ ಕಳೆದ ಹತ್ತಾರು ದಿನಗಳಿಂದ ತುಂತುರು ಮಳೆ ಶುರುವಾಗಿದೆ. ಅಲ್ಲಲ್ಲಿ ಉತ್ತಮ ಮಳೆಯಾಗಿದೆ. ಕಳೆದ ಮೇ 12ರಿಂದ 18ರವರೆಗೆ 11 ಮಿ.ಮೀ. ವಾಡಿಕೆ ಮಳೆಗೆ 31 ಮಿ.ಮೀ. ಮಳೆಯಾಗಿದೆ. ಬಳ್ಳಾರಿ ತಾಲೂಕಿನಲ್ಲಿ 11.4 ಮಿ.ಮೀ. ಮಳೆಯಾಗಬೇಕಿತ್ತು. 9.7 ಮಿ.ಮೀ. ಮಳೆಯಾಗಿದೆ.

ಸಂಡೂರು ತಾಲೂಕಿನಲ್ಲಿ 13.7 ಮಿ.ಮೀ. ವಾಡಿಕೆಗೆ 32.1 ಮಿ.ಮೀ. ಮಳೆಯಾಗಿದೆ. ಸಿರುಗುಪ್ಪ ತಾಲೂಕಿನಲ್ಲಿ 16 ಮಿ.ಮೀ. ವಾಡಿಕೆ ಮಳೆಯಾಗಬೇಕಿತ್ತು. ಆದರೆ, 33.9 ಮಿ.ಮೀ. ಮಳೆಯಾಗಿದೆ. ಕುರುಗೋಡಿನಲ್ಲಿ11.3 ವಾಡಿಕೆಗೆ 58.2 ಮಿ.ಮೀ ಮಳೆಯಾಗಿದೆ. ಕಂಪ್ಲಿ ತಾಲೂಕಿನಲ್ಲಿ 9.5 ಮಿ.ಮೀ ವಾಡಿಕೆ ಮಳೆಗೆ 46.2 ಮಿ.ಮೀ. ಮಳೆಯಾಗಿದೆ. ಜಿಲ್ಲೆಯ ವಿವಿಧ ತಾಲೂಕುಗಳಲ್ಲಿನ ಮಳೆಯ ಪ್ರಮಾಣ ಗಮನಿಸಿದರೆ ಬಳ್ಳಾರಿ ತಾಲೂಕು ಹೊರತುಪಡಿಸಿದರೆ ಉಳಿದಂತೆ ಎಲ್ಲ ಕಡೆ ಉತ್ತಮ ಮಳೆಯಾಗಿದ್ದು, ಮುಂಗಾರು ಪೂರ್ವದ ಮಳೆಯ ಆಗಮನ ಕೃಷಿ ಚಟುವಟಿಕೆಗೆ ಇಂಬು ನೀಡಿದೆ.

ತಾಲೂಕುವಾರು ಬಿತ್ತನೆ ಗುರಿ (ಹೆಕ್ಟೇರ್‌ಗಳಲ್ಲಿ): ಬಳ್ಳಾರಿ- 29480 (ನೀರಾವರಿ), 7649(ಮಳೆಯಾಶ್ರಿತ)- ಒಟ್ಟು 37,130 ಹೆಕ್ಟೇರ್. ಕುರುಗೋಡು- 14452 (ನೀರಾವರಿ), 3988 (ಮಳೆಯಾಶ್ರಿತ)- ಒಟ್ಟು 18440. ಸಿರುಗುಪ್ಪ- 40686 (ನೀರಾವರಿ), 20049 (ಮಳೆಯಾಶ್ರಿತ)- ಒಟ್ಟು 60735. ಸಂಡೂರು- 5073(ನೀರಾವರಿ), 29844 (ಮಳೆಯಾಶ್ರಿತ)- ಒಟ್ಟು 34917. ಕಂಪ್ಲಿ- 19252(ನೀರಾವರಿ), 3423 (ಮಳೆಯಾಶ್ರಿತ)- ಒಟ್ಟು 22675.

1.73 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ: ಬಳ್ಳಾರಿ ಜಿಲ್ಲೆಯಲ್ಲಿ ನೀರಾವರಿಯ 1,08,943 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಮಳೆಯಾಶ್ರಿತ 64953 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಇಟ್ಟುಕೊಳ್ಳಲಾಗಿದ್ದು, ನೀರಾವರಿ-ಮಳೆಯಾಶ್ರಿತ ಸೇರಿ ಈ ಬಾರಿಯ ಮುಂಗಾರು ಹಂಗಾಮಿನಲ್ಲಿ 1,73,897 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಇಟ್ಟುಕೊಳ್ಳಲಾಗಿದೆ. ಭತ್ತ, ಜೋಳ, ಮೆಕ್ಕೆಜೋಳ, ಸಜ್ಜೆ, ಸೂರ್ಯಕಾಂತಿ, ಶೇಂಗಾ ಜಿಲ್ಲೆಯ ಪ್ರಮುಖ ಬೆಳೆಗಳಾಗಿವೆ. ಜಿಲ್ಲೆಯಲ್ಲಿ ಅತಿ ಹೆಚ್ಚು ಭತ್ತ ಬೆಳೆಗಾರರಿದ್ದಾರೆ.

ಮೂರು ತಿಂಗಳಿಗಾಗುವಷ್ಟು ರಸಗೊಬ್ಬರ ದಾಸ್ತಾನು ಇದೆ. ಬಿತ್ತನೆ ಬೀಜಗಳನ್ನು ಬೇಡಿಕೆಗೆ ತಕ್ಕಂತೆ ಆಯಾ ರೈತ ಸಂಪರ್ಕ ಕೇಂದ್ರಗಳಿಗೆ ಪೂರೈಕೆ ಮಾಡಲಾಗುವುದು ಎನ್ನುತ್ತಾರೆ ಜಂಟಿ ಕೃಷಿ ನಿರ್ದೇಶಕ ಡಾ.ತಿರುಮಲೇಶ್.

ಕಳೆದ ಒಂದು ವಾರದಿಂದ ಮಳೆಯಾಗುತ್ತಿದೆ. ಕೃಷಿ ಚಟುವಟಿಕೆ ಆರಂಭಿಸುತ್ತೇವೆ. ಈ ಬಾರಿ ಮುಂಗಾರು ರೈತರಿಗೆ ಅನುಕೂಲವಾಗುವ ನಿರೀಕ್ಷೆಯಿದೆ ಎನ್ನುತ್ತಾರೆ ಬಳ್ಳಾರಿ ತಾಲೂಕಿನ ಮೋಕಾ ಗ್ರಾಮದ ರೈತ ಖಾಸೀಂಸಾಬ್.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಟಿ ಆತ್ಮ*ತ್ಯೆಗೆ ಸರ್ಕಾರಿ ನೌಕರಿಗೆ ಸೇರುವಂತೆ ಕುಟುಂಬ ಒತ್ತಡ ಕಾರಣ?
ನಮ್ಮವರಿಗೆ ಇಲ್ಲದ ಪರಿಹಾರ ಅವರಿಗೆ ಏಕೆ : ಬಿಜೆಪಿ ಆಕ್ರೋಶ