ಸಾರ್ವಜನಿಕರ ಸಮಸ್ಯೆಗಳಿಗೆ 15 ದಿನಗಳೊಳಗಿ ಪರಿಹಾರ ಒದಗಿಸಿ-ಜಿಲ್ಲಾಧಿಕಾರಿ

KannadaprabhaNewsNetwork | Published : Jun 27, 2024 1:08 AM

ಸಾರಾಂಶ

ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಅವುಗಳಿಗೆ 15 ದಿನಗಳ ಒಳಗಾಗಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಪರಿಹಾರ ಒದಗಿಸಬೇಕು ಇಲ್ಲವೇ ಹಿಂಬರಹ ನೀಡಬೇಕು ಎಂದು ಜಿಲ್ಲಾಧಿಕಾರಿ ರಘುನಂದನಮೂರ್ತಿ ಹೇಳಿದರು.

ರಾಣಿಬೆನ್ನೂರು: ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಅವುಗಳಿಗೆ 15 ದಿನಗಳ ಒಳಗಾಗಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಪರಿಹಾರ ಒದಗಿಸಬೇಕು ಇಲ್ಲವೇ ಹಿಂಬರಹ ನೀಡಬೇಕು ಎಂದು ಜಿಲ್ಲಾಧಿಕಾರಿ ರಘುನಂದನಮೂರ್ತಿ ಹೇಳಿದರು. ನಗರದ ತಾಲೂಕು ಪಂಚಾಯತ್ ಸಭಾಭವನದಲ್ಲಿ ಬುಧವಾರ ಏರ್ಪಡಿಸಿದ್ದ ತಾಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೆಲವು ಸಮಸ್ಯೆಗಳು ಜಟಿಲವಾಗಿದ್ದು ಸರ್ಕಾರದ ಮಟ್ಟದಲ್ಲಿ ನಿರ್ಣಯ ಕೈಗೊಳ್ಳುವ ಅವಶ್ಯಕತೆ ಕಂಡು ಬಂದಲ್ಲಿ ಅವುಗಳನ್ನು ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು. ಇಂದಿನ ಸಭೆಯಲ್ಲಿ ಒಟ್ಟು 92 ಅರ್ಜಿಗಳು ಸಲ್ಲಿಕೆಯಾಗಿದ್ದು, ಆ ಪೈಕಿ ದಾರಿಗಳ ವಿಚಾರವಾಗಿ ಹೆಚ್ಚಿನ ಅರ್ಜಿಗಳು ಬಂದಿವೆ ಎಂದರು. ಶಾಸಕ ಪ್ರಕಾಶ ಕೋಳಿವಾಡ ಕಾರ್ಯಕ್ರಮ ಉದ್ಘಾಟಿಸಿದರು. ಸಭೆಯ ಪ್ರಾರಂಭದಿಂದಲೇ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಲಾಯಿತು. ತಾಲೂಕಿನ ಮಾಕನೂರ ಗ್ರಾಮದಲ್ಲಿ ವೈದ್ಯರು ಸಕಾಲದಲ್ಲಿ ಸೇವೆ ನೀಡುತ್ತಿಲ್ಲ ಎಂದು ಗ್ರಾಮಸ್ಥರು ಮನವಿ ಸಲ್ಲಿಸಿದರು. ಜಿಲ್ಲಾಧಿಕಾರಿಗಳು ಇದರ ಬಗ್ಗೆ ಕ್ರಮ ಜರುಗಿಸಲು ಟಿಎಚ್‌ಒಗೆ ಸೂಚಿಸಿದರು. ತಾಲೂಕಿನಲ್ಲಿ ಖಾಸಗಿ ಫೈನಾನ್ಸ್‌ಗಳ ಕಿರುಕುಳ ಜಾಸ್ತಿಯಾಗಿದೆ. ಮಳೆಯಿಲ್ಲದೆ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಆದ್ದರಿಂದ ಖಾಸಗಿ ಫೈನಾನ್ಸ್‌ಗಳಿಂದ ಉಂಟಾಗುತ್ತಿರುವ ಕಿರುಕುಳ ತಪ್ಪಿಸಬೇಕು. ಇದಲ್ಲದೆ ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಕೆಡಿಪಿ ಸಭೆಯಲ್ಲಿ ರೈತರಿಗೆ ಭಾಗವಹಿಸಲು ಅವಕಾಶ ಕಲ್ಪಿಸಬೇಕು ಎಂದು ರೈತ ಮುಖಂಡ ಈರಣ್ಣ ಹಲಗೇರಿ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು. ಸಣ್ಣ ಹಿಡುವಳಿದಾರರ ಖಾತೆ ಬದಲಾವಣೆಯ ಕುರಿತು ರಾಹುತನಕಟ್ಟಿ ಗ್ರಾಮದ ರೈತರೊಬ್ಬರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಪದ್ಮಾವತಿಪುರ ತಾಂಡಾ ಕಂದಾಯ ಗ್ರಾಮವಾಗಿದ್ದು, ಅಲ್ಲಿನ ನಿವಾಸಿಗಳಿಗೆ ಹಕ್ಕುಪತ್ರ ನೀಡಬೇಕು ಎಂದು ಗ್ರಾಮಸ್ಥರು ಮನವಿ ಸಲ್ಲಿಸಿದರು.ನಗರಸಭೆಯ ವ್ಯಾಪ್ತಿಯಲ್ಲಿ ಬರುವ ಲೆಔಟ್‌ಗಳಿಗೆ ಮೂಲಭೂತ ಸೌಲಭ್ಯಗಳಿಲ್ಲ. ಲೆಔಟ್‌ಗಳನ್ನು ನಿರ್ಮಿಸಿ ಸಾಕಷ್ಟು ವರ್ಷಗಳಾದರೂ ಸೌಲಭ್ಯ ಕಲ್ಪಿಸುವಲ್ಲಿ ನಗರಸಭೆ ವಿಫಲವಾಗಿದೆ. ನಗರದ ಭಂಗಿ ರಸ್ತೆಗಳನ್ನು ಅತಿಕ್ರಮಿಸಿ ಅಕ್ರಮ ಕಟ್ಟಡಗಳು ನಿರ್ಮಾಣವಾಗುತ್ತಿವೆ. ಇದರ ಬಗ್ಗೆ ನಗರಸಭೆ ಅಧಿಕಾರಿಗಳಿಗೆ ದೂರು ನೀಡಿದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ರೈತ ಮುಖಂಡ ಹನುಮಂತಪ್ಪ ಕಬ್ಬಾರ ಜಿಲ್ಲಾಧಿಕಾರಿಗಳಿಗೆ ದೂರಿದರು. ಇದಲ್ಲದೆ ತಾಲೂಕಿನ ಕೆಲವೊಂದು ಬಾರ್‌ಗಳಲ್ಲಿ ಊಟದ ಸೌಲಭ್ಯಗಳಿಲ್ಲದಿದ್ದರೂ ಗ್ರಾಹಕರಿಂದ ಮದ್ಯದ ಬಾಟಲಿಗಳಿಗೆ ಹೆಚ್ಚಿನ ದರ ವಸೂಲಿ ಮಾಡುತ್ತಿದ್ದಾರೆ. ಅದರ ಬಗ್ಗೆ ಅಬ್ಕಾರಿ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಮೆಡ್ಲೇರಿ ಗ್ರಾಮದಲ್ಲಿ ಹತ್ತಾರು ವರ್ಷಗಳಿಂದ ಗುಡಿಸಲು ಹಾಕಿಕೊಂಡವರನ್ನು ತೆರವುಗೊಳಿಸಲಾಗಿದೆ. ಇದರಿಂದ ನಾವೆಲ್ಲಾ ಬೀದಿ ಪಾಲಾಗುವಂತಾಗಿದ್ದು ನಮಗೆಲ್ಲಾ ನೆಲೆ ಕಲ್ಪಿಸಬೇಕು ಎಂದು ಅಲ್ಲಿನ ನಿವಾಸಿಗಳು ಮನವಿ ಮಾಡಿದರು. ಬಿಲ್ಲಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನರೇಗಾ ಯೋಜನೆಯಡಿ ಕಾರ್ಯ ನಿರ್ವಹಿಸುವ ಕೂಲಿ ಕಾರ್ಮಿಕರಿಗೆ ಪಿಡಿಒ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಲ್ಲ ಎಂದು ಕಾರ್ಮಿಕರು ದೂರಿದರು. ನಿಟ್ಟೂರ ಗ್ರಾಮಕ್ಕೆ ವಸತಿ ಬಸ್ ಇಲ್ಲದೆ ಸಮಸ್ಯೆಯಾಗಿದೆ. ಬಸ್ ಸೌಕರ್ಯ ಕಲ್ಪಿಸುವಂತೆ ಗ್ರಾಮಸ್ಥರು ಒತ್ತಾಯಿಸಿದರು.ಕುಪ್ಪೇಲೂರ ಗ್ರಾಮದಲ್ಲಿ ಸರ್ಕಾರಿ ಆಸ್ಪತ್ರೆಗೆ ಜಾಗೆ ದಾನ ನೀಡಿದ ವ್ಯಕ್ತಿ ಹೆಸರಿನ ಬೇರೆ ವ್ಯಕ್ತಿ ಹೆಸರು ಹಾಕಲಾಗಿದೆ. ಅದನ್ನು ತೆರವುಗೊಳಿಸಿ ನಿಜವಾದ ದಾನಿಯ ಹೆಸರು ಅಳವಡಿಕೆಗೆ ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿದರು. ಇದರ ಬಗ್ಗೆ ಅಗತ್ಯ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಟಿಎಚ್‌ಒಗೆ ಸೂಚನೆ ನೀಡಿದರು. ಇಂದಿನ ಸಭೆಯಲ್ಲಿ ನಗರಸಭೆ 9, ಕಂದಾಯ 17, ತೋಟಗಾರಿಕೆ 1, ಹೆಸ್ಕಾಂ 4, ಆರ್‌ಡಿಪಿಆರ್ 20, ಆಹಾರ 1, ಸಿಡಿಪಿಒ 18, ಸಮಾಜ ಕಲ್ಯಾಣ 1, ಶಿಕ್ಷಣ 3, ಆರೋಗ್ಯ 3, ಲೋಕೋಪಯೋಗಿ 3, ಗ್ರಾಮೀಣ ಕುಡಿಯುವ ನೀರು 1, ಜಿಪಂ ಎಂಜಿನಿಯರಿಂಗ್ 1, ಕಾರ್ಮಿಕ 3, ಅಬಕಾರಿ 1, ಉದ್ಯೋಗ ವಿನಿಮಯ 1, ಸಾರಿಗೆ 3, ಪೊಲೀಸ್ ಇಲಾಖೆ 1 ಸೇರಿದಂತೆ 92 ಅರ್ಜಿಗಳು ಸಲ್ಲಿಕೆಯಾದವು. ಅಪರ ಜಿಲ್ಲಾಧಿಕಾರಿ ವೀರಮಲ್ಲಪ್ಪ ಪೂಜಾರ, ಜಿಪಂ ಸಿಇಓ ಅಕ್ಷಯ್ ಶ್ರೀಧರ, ಡಿವೈಎಸ್‌ಪಿ ಡಾ.ಗಿರೀಶ ಭೋಜಣ್ಣನವರ, ಉಪ ವಿಭಾಗಾಧಿಕಾರಿ ಚನ್ನಪ್ಪ, ತಾಪಂ ಇಒ ಸುಮಲತಾ ಎಸ್.ಪಿ. ತಹಶೀಲ್ದಾರ ಕೆ. ಗುರುಬಸವರಾಜ, ಶಹರ ಸಿಪಿಐ ಡಾ. ಶಂಕರ್, ಬಿಇಒ ಎಂ.ಎಚ್. ಪಾಟೀಲ ಮತ್ತಿತರರಿದ್ದರು.

Share this article