ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಕ್ಷೇತ್ರದ ರೈತರು, ಶರಾವತಿ ಸಂತ್ರಸ್ತರು ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಅರಣ್ಯ ಇಲಾಖೆಯಿಂದ ತಕ್ಷಣವೇ ಆಗಬೇಕಾದ ಪ್ರಮುಖ ವಿಷಯಗಳ ಕುರಿತು ಸಂಸದ ಬಿ.ವೈ.ರಾಘವೇಂದ್ರ ಅವರು ಸಚಿವರಿಗೆ ವಿಸ್ತೃತ ಮನವಿ ಸಲ್ಲಿಸಿ, ಇವುಗಳನ್ನು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ತಕ್ಷಣವೇ ರವಾನಿಸಿ ಶೀಘ್ರ ವಿಲೇವಾರಿಗೆ ನಿರ್ದೇಶನ ನೀಡುವಂತೆ ಸಚಿವರನ್ನು ಒತ್ತಾಯಿಸಿದರು.
ಪ್ರಮುಖವಾಗಿ ಶೆಟ್ಟಿಹಳ್ಳಿ ವನ್ಯಜೀವಿಧಾಮದ 397.96 ಚ.ಕಿ.ಮೀ ವ್ಯಾಪ್ತಿಯ ಗಡಿ ಮರು ವಿಂಗಡಣೆಯ ಅಂತಿಮ ಅಧಿಸೂಚನೆಯನ್ನು ರಾಜ್ಯ ಸರ್ಕಾರ ಹೊರಡಿಸಿ, ಬಫರ್ ಜೋನ್ ಗಡಿ ತಿದ್ದುಪಡಿಗೆ ಸಂಬಂಧಿಸಿದಂತೆ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯಕ್ಕೆ ಶಿಫಾರಸು ಕಳುಹಿಸಬೇಕು ಎಂದು ಸಂಸದರು ಕೋರಿಕೆ ಸಲ್ಲಿಸಿದ್ದಾರೆ. ಶರಾವತಿ ಸಿಂಹ-ಬಾಲದ ಮಕಾಕ್ (Sharavathi Lion-Tailed Macaque Sanctuary) ಅಭಯಾರಣ್ಯದ ಗಡಿಯನ್ನು ಅಂತಿಮಗೊಳಿಸುವ ಪ್ರಕ್ರಿಯೆಯನ್ನು ಶೀಘ್ರದಲ್ಲಿ ಮುಗಿಸುವಂತೆ ಸಂಸದರು ಮನವಿ ಮಾಡಿಕೊಂಡಿದ್ದಾರೆ. ಇದರೊಂದಿಗೆ ದಶಕಗಳಿಂದ ಬಾಕಿಯಿರುವ ಶರಾವತಿ ಸಂತ್ರಸ್ತರ ಪುನರ್ವಸತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಶಿವಮೊಗ್ಗ ಜಿಲ್ಲಾಧಿಕಾರಿಗಳಿಗೆ ತಕ್ಷಣವೇ ಸ್ಥಳ ಪರಿಶೀಲನೆ ಪೂರ್ಣಗೊಳಿಸಿ ಪ್ರಸ್ತಾವನೆ ಸಲ್ಲಿಸಲು ಕಟ್ಟುನಿಟ್ಟಿನ ಸೂಚನೆ ನೀಡುವಂತೆ ಹಾಗೂ ಮೈಸೂರು ಪೇಪರ್ ಮಿಲ್ಸ್ (MPM) ಅರಣ್ಯ ವ್ಯಾಪ್ತಿಯಲ್ಲಿ ಮರ ತೆರವುಗೊಳಿಸುವ ನಿರ್ವಹಣಾ ಯೋಜನೆಗೆ (Management Plan) ಆದ್ಯತೆಯ ಮೇರೆಗೆ ಅನುಮೋದನೆ ದೊರಕಿಸಿಕೊಡುವಂತೆ ಬಿ.ವೈ.ರಾಘವೇಂದ್ರ ಅವರು ಮಾನ್ಯ ಸಚಿವರನ್ನು ಕೋರಿದ್ದಾರೆ.ಅಲ್ಲದೆ, ರಾಷ್ಟ್ರೀಯ ಹೆದ್ದಾರಿ 766ಸಿ (ಬೆಕ್ಕೋಡಿ ಯೋಜನೆ) ಅಡಿಯಲ್ಲಿ ಹೊಸನಗರದ ಮಾವಿನಕೊಪ್ಪ ವೃತ್ತದಿಂದ ಅಡುಗೋಡಿವರೆಗಿನ ರಸ್ತೆ ಮತ್ತು ಸೇತುವೆ ನಿರ್ಮಾಣ ಕಾಮಗಾರಿಯ ಎರಡನೇ ಹಂತದ ಅನುಮೋದನೆ ಪ್ರಸ್ತಾವನೆಯನ್ನು ತಕ್ಷಣವೇ ಸಲ್ಲಿಸಲು ಸಾಗರ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ನಿರ್ದೇಶಿಸುವುದು ಹಾಗೂ ಕೊಡಚಾದ್ರಿ ಬೆಟ್ಟದಿಂದ ಕೊಲ್ಲೂರಿಗೆ ಪ್ರವಾಸಿಗರ ಸುಲಭ ಸಂಚಾರಕ್ಕಾಗಿ ನಿರ್ಮಿಸಲು ಉದ್ದೇಶಿಸಿರುವ ಕೇಬಲ್ ಕಾರ್ ಯೋಜನೆಗೆ ಪರಿಸರ ಮತ್ತು ವನ್ಯಜೀವಿ ಮಂಜೂರಾತಿಯ ಶಿಫಾರಸು ಪತ್ರ ಬಾಕಿಯಿದ್ದು, ಹಂತ-1ರ ಅನುಮೋದನೆಗೆ ಶೀಘ್ರ ಕ್ರಮ ಕೈಗೊಳ್ಳುವಂತೆ ಸಂಸದರು ಆಗ್ರಹಿಸಿದರು. ಸಂಸದರ ಪ್ರತಿಯೊಂದು ಮನವಿಯನ್ನು ಅತ್ಯಂತ ಸಾವಧಾನದಿಂದ ಆಲಿಸಿದ ಸಚಿವ ರಾಮಲಿಂಗಾರೆಡ್ಡಿ ಅವರು ಸಂಸದರ ಕೋರಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿ, ಸಂಸದರು ಪ್ರಸ್ತಾಪಿಸಿದ ಎಲ್ಲಾ ವಿಷಯಗಳ ಕುರಿತು ಸೂಕ್ತ ಪರಿಶೀಲನೆ ನಡೆಸಿ ಶೀಘ್ರದಲ್ಲೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.