ಕೃಷಿ, ತೋಟಗಾರಿಕೆ ಬೆಳೆಗಳಿಗೆ ಸೂಕ್ತ ಬರ ಪರಿಹಾರ ನೀಡಿ

KannadaprabhaNewsNetwork |  
Published : Dec 13, 2023, 01:00 AM IST
ಹೊನ್ನಾಳಿ ಫೋಟೋ 12ಎಚ್.ಎಲ್.ಐ1ಃ- ರಾಜ್ಯ ರೈತ ಸಂಘಗಳ ಒಕ್ಕೂಟದವತಿಯಿಂದ ಪಟ್ಟಣದ ಪ್ರವಾಸಿ ಮಂದಿರದಲ್ಲಿ  ನಡೆಸಿದ  ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡ ಬಲ್ಲೂರು ರವಿಕುಮಾರ್‌ ಸೇರಿದಂತೆ ಹಲವಾರು ಜನ ರೈತ ಮುಖಂಡರು ಮಾತನಾಡಿದರು. .  | Kannada Prabha

ಸಾರಾಂಶ

ರಾಜ್ಯ ರೈತ ಸಂಘಗಳ ಒಕ್ಕೂಟ ರಾಜ್ಯ ಕಾರ್ಯದರ್ಶಿ ಬಲ್ಲೂರು ರವಿಕುಮಾರ್ ಆಗ್ರಹ

ರಾಜ್ಯ ರೈತ ಸಂಘಗಳ ಒಕ್ಕೂಟ ರಾಜ್ಯ ಕಾರ್ಯದರ್ಶಿ ಬಲ್ಲೂರು ರವಿಕುಮಾರ್ ಆಗ್ರಹ

ಕನ್ನಡಪ್ರಭ ವಾರ್ತೆ ಹೊನ್ನಾಳಿ

ರೈತರು ಬರಗಾಲದ ಬೆಳೆ ನಷ್ಟದಿಂದ ತೀವ್ರ ಸಂಕಷ್ಟಕ್ಕೀಡಾಗಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರಿಗೆ ಬರ ಪರಿಹಾರ ನೀಡದೇ ನಿರ್ಲಕ್ಷ್ಯಿಸುತ್ತಿವೆ. ಕೂಡಲೇ ಬರ ಪರಿಹಾರ ರೂಪದಲ್ಲಿ ಕೃಷಿ ಬೆಳೆಗೆ ಎಕರೆಗೆ ₹35 ಸಾವಿರ ಹಾಗೂ ತೋಟಗಾರಿಕೆ ಬೆಳೆಗಳ ನಷ್ಟಕ್ಕೆ ಎಕರೆಗೆ ₹50 ಸಾವಿರ ಬರ ಪರಿಹಾರ ನೀಡಬೇಕು ಎಂದು ರಾಜ್ಯ ರೈತ ಸಂಘಗಳ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಬಲ್ಲೂರು ರವಿಕುಮಾರ್ ಒತ್ತಾಯಪಡಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ರೈತ ಸಂಘದ ಒಕ್ಕೂಟದ ವತಿಯಿಂದ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಎಲ್ಲಾ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ, ಕಾನೂನು ಜಾರಿಯಾಗಬೇಕು ಸ್ವಾಮಿನಾಥನ್ ಆಯೋಗದ ವರದಿಯಂತೆ ಬೆಂಬಲ ಬೆಲೆ ನಿಗದಿಪಡಿಸಬೇಕು. ಕಬ್ಬಿನ ಉತ್ಪಾದನಾ ವೆಚ್ಚ ಹೆಚ್ಚಾಗಿದ್ದು ಪ್ರತಿ ಟನ್ ಗೆ ಉತ್ಪಾದನಾ ವೆಚ್ಚ ₹ 3580 ಆಗಿದ್ದು, ಕೇಂದ್ರ ಸರ್ಕಾರ ನಿಗದಿ ಮಾಡಿರುವುದು ₹3150 ಮಾತ್ರ ಕಬ್ಬಿನ ದರ ಕನಿಷ್ಠ ಟನ್‌ಗೆ ₹4 ಸಾವಿರ ನಿಗದಿ ಮಾಡಬೇಕು ಎಂದು ಆಗ್ರಹಿಸಿದರು.

ಸಂಯುಕ್ತ ಕಿಸಾನ್ ಮೋರ್ಚಾ ರಾಜ್ಯ ರೈತ ಸಂಘಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘಗಳ ಸಂಯುಕ್ತಾಶ್ರಯದಲ್ಲಿ ಡಿ.23ರಂದು ವಿಶ್ವ ರೈತ ದಿನದಂದು ಬೆಂಗಳೂರಿನಲ್ಲಿ ರೈತರ ಮಹಾ ಅಧಿವೇಶನ ಬೆಳಗ್ಗೆ 11 ಗಂಟೆಗೆ ನಡೆಯಲಿದ್ದು, ಈ ಅಧಿವೇಶನದಲ್ಲಿ ರಾಜ್ಯ ರೈತ ಸಮುದಾಯ ಸಮಗ್ರ ಸಮಸ್ಯೆಗಳು ಹಾಗೂ ಪರಿಹಾರೋಪಾಯಗಳ ಬಗ್ಗೆ ಸಮಗ್ರ ಚಿಂತನೆ ಮತ್ತು ಚರ್ಚೆಗಳು ನಡೆಯಲಿದೆ ಎಂದು ತಿಳಿಸಿದರು.

ಶೇಕಡ 10 ಮೀಸಲಾತಿ ನೀಡಿ:

ರೈತ ಕುಟುಂಬದ ಗಂಡು ಮಕ್ಕಳಿಗೆ ಪ್ರಸ್ತುತ ದಿನಗಳಲ್ಲಿ ಹೆಣ್ಣು ಕೊಡಲು ಯಾರೂ ಮುಂದೆ ಬರುತ್ತಿಲ್ಲ. ಈ ಕಾರಣದಿಂದ ರೈತರ ಮಗನ ಮದುವೆಯಾಗುವ ಹೆಣ್ಣು ಮಕ್ಕಳಿಗೆ ವಿದ್ಯಾರ್ಹತೆಗನುಗುಣವಾಗಿ ಸರ್ಕಾರಿ ಉದ್ಯೋಗದಲ್ಲಿ ಶೇ.10 ಮೀಸಲಾತಿ ಸರ್ಕಾರ ಘೋಷಿಸಬೇಕು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಹೊನ್ನಾಳಿ ತಾಲೂಕು ಅಧ್ಯಕ್ಷ ಕೆ.ಸಿ.ಬಸಪ್ಪ,ನ್ಯಾಮತಿ ತಾಲೂಕು ಅಧ್ಯಕ್ಷ ಬೆಳಗುತ್ತಿ ಉಮೇಶ್‌ , ಮುಖಂಡರಾದ ಸುಂಕದಕಟ್ಟೆ ಕರಿಬಸಪ್ಪ, ರಾಜ್ಯ ಸಂಘಟನಾ ಕಾರ್ಯದರ್ಶಿ ನಂದಿತಾವರೆ ಮುರುಗೇಂದ್ರಯ್ಯ, ಜಿಲ್ಲಾ ಮುಖಂಡ ಅಂಜಿನಪ್ಪ, ಕಮ್ಮಾರನಹಳ್ಳಿ ಮಂಜುನಾಥ, ರಮೇಶ್‌ ಮುಂತಾದವರಿದ್ದರು.

ಬೆಳಗಾವಿ ಎಸ್ಪಿ ಅಮಾನತುಗೊಳಿಸಿ

ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದ ವೇಳೆ ಹಲವು ಬೇಡಿಕೆಗಳ ಬಗ್ಗೆ ಮನವಿ ಸಲ್ಲಿಸಲು ಹೋಗಿದ್ದ ರೈತ ಸಮುದಾಯ ವಿರುದ್ಧ ದರ್ಪಮೆರೆದ ಅಲ್ಲಿನ ಪೊಲೀಸ್‌ ವರಿಷ್ಠಾಧಿಕಾರಿಯ ಕೂಡಲೇ ಅಮಾನತುಗೊಳಿಸಿ ಬೇರೆಡೆ ವರ್ಗಾಯಿಸಬೇಕು ಎಂದು ರೈತ ಮುಖಂಡ ಬಲ್ಲೂರು ರವಿಕುಮಾರ್ ಸರ್ಕಾರಕ್ಕೆ ಒತ್ತಾಯಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!