ಜನರಿಗೆ ಸಕಾಲದಲ್ಲಿ ಪಾರದರ್ಶಕ ಸೇವೆ ಒದಗಿಸಿ: ದೇಶಪಾಂಡೆ

KannadaprabhaNewsNetwork |  
Published : Apr 19, 2026, 02:45 AM IST
18ಎಚ್.ಎಲ್.ವೈ-1: ತಾಲೂಕಾಡಳಿತ ಸೌಧದ ಆವರಣದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಗ್ರಾಮ ಚಾವಡಿ ಕಟ್ಟಡ ಕಾಮಗಾರಿಗೆ ಶಾಸಕ ಆರ್.ವಿ.ದೇಶಪಾಂಡೆಯವರು ಶಿಲಾನ್ಯಾಸ ನೆರವೆರಿಸಿದರು. | Kannada Prabha

ಸಾರಾಂಶ

ಕಚೇರಿಗೆ ಭೇಟಿ ನೀಡುವ ಜನರಿಗೆ ಸಕಾಲದಲ್ಲಿ ಪಾರದರ್ಶಕವಾದ ಸೇವೆಯನ್ನು ಒದಗಿಸಿ, ಆದಷ್ಟು ಅವರ ಕಚೇರಿ ಅಲೆದಾಟವನ್ನು ತಪ್ಪಿಸಲು ಪ್ರಾಮಾಣಿಕವಾಗಿ ಶ್ರಮಿಸಬೇಕು.

ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಡಿಯಲ್ಲಿ ಗ್ರಾಮ ಚಾವಡಿ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ

ಕನ್ನಡಪ್ರಭ ವಾರ್ತೆ ಹಳಿಯಾಳ

ಕಚೇರಿಗೆ ಭೇಟಿ ನೀಡುವ ಜನರಿಗೆ ಸಕಾಲದಲ್ಲಿ ಪಾರದರ್ಶಕವಾದ ಸೇವೆಯನ್ನು ಒದಗಿಸಿ, ಆದಷ್ಟು ಅವರ ಕಚೇರಿ ಅಲೆದಾಟವನ್ನು ತಪ್ಪಿಸಲು ಪ್ರಾಮಾಣಿಕವಾಗಿ ಶ್ರಮಿಸಿ ಎಂದು ಶಾಸಕ ಆರ್.ವಿ. ದೇಶಪಾಂಡೆ ಅಧಿಕಾರಿಗಳು ಕಿವಿಮಾತು ಹೇಳಿದರು.ಶನಿವಾರ ತಾಲೂಕಾ ಆಡಳಿತ ಸೌಧದ ಆವರಣದಲ್ಲಿ ತಮ್ಮ ಪ್ರದೇಶಾಭಿವೃದ್ಧಿ ಅನುದಾನದಡಿಯಲ್ಲಿ ₹15ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಗ್ರಾಮ ಚಾವಡಿ ಕಟ್ಟಡ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು. ಅಧಿಕಾರಿ ಹಾಗೂ ಸಿಬ್ಬಂದಿ ವರ್ಗಗಳಿಗೆ ಸರ್ಕಾರ ಉತ್ತಮ ಹಾಗೂ ಗೌರವಯುತ ವೇತನ ನೀಡುತ್ತಿರುವಾಗ, ಅದಕ್ಕೆ ಪ್ರತಿಯಾಗಿ ಸರ್ಕಾರಿ ಸಿಬ್ಬಂದಿಗಳಿಂದಲೂ ಉತ್ತಮ ಜನಪರ ಸೇವೆ ಅಪೇಕ್ಷಿಸಲಾಗುತ್ತದೆ. ಹೀಗಿರುವಾಗ ಜನರ ಸಂಕಷ್ಟಗಳಿಗೆ ಸ್ಪಂದಿಸುವುದು ನಿಮ್ಮ ಕರ್ತವ್ಯ, ಜವಾಬ್ದಾರಿಯಾಗಿದೆ. ಹೀಗಿರುವಾಗಲು ಜನರ ಕೆಲಸಕ್ಕಾಗಿ ಅವರಿಂದ ಅಪೇಕ್ಷಿಸುವುದು ಸರಿಕಾಣಿಸದು. ಇಂತಹ ಪ್ರಕರಣಗಳು ನಡೆಯುತ್ತಿದ್ದರೇ ಅಥವಾ ನಿಮ್ಮ ಕೆಲಸ ಕಾರ್ಯಗಳಿಗೆ ಅನಗತ್ಯವಾಗಿ ವಿಳಂಬ ಮಾಡಿ ಬೇಡಿಕೆ ಇಡುತ್ತಿದ್ದರೇ ನನ್ನ ಗಮನಕ್ಕೆ ತನ್ನಿ ಎಂದರು.

ತಾಲೂಕಾಡಳಿತ ಸೌಧದ ಆವರಣದಲ್ಲಿರುವ ಹಳೆಯ ಗ್ರಾಮ ಚಾವಡಿ ಕಟ್ಟಡವನ್ನು ಸಂರಕ್ಷಿಸಬೇಕೆಂದು ಸೂಚಿಸಿದ ದೇಶಪಾಂಡೆ, ಹಳಿಯಾಳ ಪಟ್ಟಣದಲ್ಲಿ ತಾಲೂಕಾ ಕಚೇರಿ ಪ್ರಾರಂಭವಾಗುವ ಮುನ್ನ ಈ ಗ್ರಾಮ ಚಾವಡಿಯ ಕಟ್ಟಡವಿತ್ತು. ಸ್ವಾತಂತ್ರ್ಯಪೂರ್ವ ಕಾಲದ ಈ ಚಾವಡಿಯ ಕಟ್ಟಡವನ್ನು ಸ್ಮಾರಕವನ್ನಾಗಿ ಉಳಿಸಿ ಕಾಪಾಡಬೇಕು, ಸಾಧ್ಯವಿದಲ್ಲಿ ಇಲಾಖೆಯ ಕೆಲಸ ಕಾರ್ಯಗಳಿಗೆ ಬಳಕೆಯಾಗುವಂತೆ ನೋಡಿಕೊಳ್ಳಿ ಎಂದರು.

ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಯ ಗ್ರಾಮೀಣ ಲೆಕ್ಕಾಧಿಕಾರಿಗಳಿಗೆ ಲ್ಯಾಪ್‌ಟಾಪ್‌ಗಳನ್ನು ಶಾಸಕರು ವಿತರಿಸಿದರು. ಮೀನುಗಾರಿಕೆ ಇಲಾಖೆಯಿಂದ ಆಯ್ದ ಫಲಾನುಭವಿಗಳಿಗೆ ಮೀನು ಹಿಡಿಯುವ ಸಾಮಗ್ರಿಗಳ ವಿತರಣಾ ಕಾರ್ಯ ಮೊಟಕುಗೊಳಿಸಿದ ಶಾಸಕರು, ಫಲಾನುಭವಿಗಳ ಆಯ್ಕೆ ಮಾಡಿದ ಮಾನದಂಡದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ತಮ್ಮ ಗಮನಕ್ಕೆ ತರದೇ ಯಾವುದೇ ಆಯ್ಕೆ ಪ್ರಕ್ರಿಯೆ ನಡೆಯಬಾರದೆಂದು ತಾಕೀತು ಮಾಡಿದರು. ಮೀನು ಹಿಡಿಯುವ ಸಾಮಗ್ರಿಗಳ ವಿತರಣೆ ಕಾರ್ಯಕ್ರಮವನ್ನು ಮತ್ತೊಮ್ಮೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಪುರಸಭಾ ಮಾಜಿ ಅಧ್ಯಕ್ಷ ಉಮೇಶ ಬೊಳಶೆಟ್ಟಿ, ತಹಸೀಲ್ದಾರ ಫಿರೋಜಷಾ ಸೋಮನಕಟ್ಟಿ, ಗ್ರೇಡ್-2 ತಹಸೀಲ್ದಾರ ರವೀಂದ್ರ ನೇಸರಗಿ, ಶಿರಸ್ತೇದಾರ ಲಕ್ಷ್ಮೀ ಡೊಂಕಣ್ಣನವರ, ಹನುಮಂತ ಪರೋಡಕರ, ಸೆಂಡ್ರಾ ಡಾಯಸ್, ಕಂದಾಯ ನಿರೀಕ್ಷಕ ಅನಿಲ ಪರ್ಬತ್, ಚಂದ್ರಶೇಖರ ಕಮ್ಮಾರ, ಎ.ವಿ. ಪಾಟೀಲ, ರಾಜು ಅರಶಿಣಗೊಡಿ, ಪರಶುರಾಮ ಶಿಂಧೆ, ಮಹಾಂತೇಶ್ ದೊಡ್ಮಣಿ, ಕಿರಣ ಜಕ್ಕಲಿ, ಮಂಜುನಾಥ ಕೈಸೆರೆ ಹಾಗೂ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಿಸಿಆರ್‌ಇ ಎಸ್ಪಿ, ಡಿವೈಎಸ್ಪಿ ವಿರುದ್ಧ ದಲಿತ ಇನ್ಸ್‌ಪೆಕ್ಟರ್ ಕಿರುಕುಳ ಆರೋಪ
ಈ ಬಾರಿ ಅಕ್ಷಯ ತೃತೀಯಕ್ಕೆ ಚಿನ್ನ ಖರೀದಿ ಶೇ. 30-35ರಷ್ಟು ಇಳಿಮುಖ