ಅನಾಥ ಮಕ್ಕಳಿಗೆ ಬದುಕು ನೀಡುವುದು ಶ್ರೇಷ್ಠ ಕಾರ್ಯ

KannadaprabhaNewsNetwork |  
Published : Oct 17, 2026, 02:15 AM IST
ಕಾರ್ಯಕ್ರಮದಲ್ಲಿ ನರಸಾಪುರದ ಅನ್ನದಾನೇಶ್ವರ ಶಾಖಾಮಠದ ಡಾ. ವೀರಭದ್ರೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. | Kannada Prabha

ಸಾರಾಂಶ

ಮಹಾತ್ಮರ ಜನ್ಮದ ಹಿನ್ನೆಲೆಗಿಂತ ಅವರ ತತ್ವ, ಆದರ್ಶ ಮತ್ತು ಸಾಧನೆಗಳು ಜಗತ್ತಿಗೆ ಮುಖ್ಯವಾಗುತ್ತವೆ.

ಗದಗ: ನಾವು ಸಾಮಾನ್ಯವಾಗಿ ಜನ್ಮಕುಂಡಲಿ ಬರೆಯುತ್ತೇವೆ. ಆದರೆ ಸೇವಾಭಾರತಿಯ ಅಮೂಲ್ಯ ವಿಶೇಷ ದತ್ತು ಸ್ವೀಕಾರ ಕೇಂದ್ರವು ಮಕ್ಕಳಿಗೆ ಜೀವನಕುಂಡಲಿಯನ್ನೇ ಬರೆಯುತ್ತಿದೆ. ಅನಾಥ ಮಕ್ಕಳಿಗೆ ಪ್ರೀತಿಯ ಮಡಿಲು, ಭದ್ರ ಭವಿಷ್ಯ ಹಾಗೂ ಬದುಕಿನ ಭರವಸೆ ನೀಡುವುದಕ್ಕಿಂತ ಶ್ರೇಷ್ಠವಾದ ಕಾರ್ಯ ಮತ್ತೊಂದಿಲ್ಲ ಎಂದು ನರಸಾಪುರದ ಅನ್ನದಾನೇಶ್ವರ ಶಾಖಾಮಠದ ಡಾ. ವೀರಭದ್ರೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಗರದ ಸೇವಾಭಾರತಿಯ ಅಮೂಲ್ಯ ವಿಶೇಷ ದತ್ತು ಸ್ವೀಕಾರ ಕೇಂದ್ರದಲ್ಲಿ ಜರುಗಿದ 71ನೇ ಮಗುವಿನ ದತ್ತು ಪೂರ್ವ ಪೋಷಕತ್ವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಮಹಾತ್ಮರ ಜನ್ಮದ ಹಿನ್ನೆಲೆಗಿಂತ ಅವರ ತತ್ವ, ಆದರ್ಶ ಮತ್ತು ಸಾಧನೆಗಳು ಜಗತ್ತಿಗೆ ಮುಖ್ಯವಾಗುತ್ತವೆ. ಅನೇಕ ಮಹನೀಯರ ಜನ್ಮದ ವಿವರಗಳು ಇಂದಿಗೂ ನಿಗೂಢವಾಗಿದ್ದರೂ, ಅವರ ಚಿಂತನೆಗಳು ಮತ್ತು ಮಾನವೀಯ ಮೌಲ್ಯಗಳು ಜಗತ್ತಿಗೆ ದಾರಿದೀಪವಾಗಿವೆ. ಅದೇ ರೀತಿ ಮಗುವಿನ ಜನ್ಮದ ಹಿನ್ನೆಲೆಗಿಂತ ಅದರ ಭವಿಷ್ಯ, ವ್ಯಕ್ತಿತ್ವ ಮತ್ತು ಸಾಧನೆಗಳಿಗೆ ಮಹತ್ವ ನೀಡಬೇಕು ಎಂದರು.

ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಜಯದೇವಿ ಕವಲೂರ ಮಾತನಾಡಿ, ದತ್ತು ಸ್ವೀಕಾರವೆಂಬುದು ಕೇವಲ ಮಗುವಿಗೆ ಕುಟುಂಬ ಒದಗಿಸುವ ಪ್ರಕ್ರಿಯೆಯಲ್ಲ, ಪ್ರೀತಿ, ವಾತ್ಸಲ್ಯ ಮತ್ತು ಮಾನವೀಯತೆಯ ಮೂಲಕ ಮಗುವಿನ ಬದುಕಿಗೆ ಹೊಸ ಭರವಸೆ ನೀಡುವ ಮಹತ್ಕಾರ್ಯವಾಗಿದೆ ಎಂದರು.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಜಯಶ್ರೀ ಆರ್. ಮಾತನಾಡಿ, ಕಳೆದ ತಿಂಗಳೊಂದರಲ್ಲೇ ಎರಡು ನವಜಾತ ಶಿಶುಗಳನ್ನು ರಕ್ಷಿಸಬೇಕಾದ ಪರಿಸ್ಥಿತಿ ಎದುರಾಗಿದ್ದು, ಇಂತಹ ಘಟನೆಗಳು ಸಮಾಜದ ಕಳವಳ ಹೆಚ್ಚಿಸಿವೆ. ಮಗುವನ್ನು ಸಾಕಲು ಸಾಧ್ಯವಾಗದವರು ಅದನ್ನು ಅಪಾಯಕಾರಿ ಸ್ಥಳಗಳಲ್ಲಿ ಬಿಟ್ಟುಹೋಗದೆ, ಮಕ್ಕಳ ರಕ್ಷಣಾ ಇಲಾಖೆಯ ಮೂಲಕ ಕಾನೂನುಬದ್ಧವಾಗಿ ಸುರಕ್ಷಿತವಾಗಿ ಒಪ್ಪಿಸಬೇಕು ಎಂದು ಮನವಿ ಮಾಡಿದರು.

ಈ ನಿಟ್ಟಿನಲ್ಲಿ ಮಮತೆಯ ತೊಟ್ಟಿಲು ವ್ಯವಸ್ಥೆ ಮಕ್ಕಳ ಜೀವ ಮತ್ತು ಭವಿಷ್ಯ ರಕ್ಷಣೆಗೆ ಮಹತ್ವದ್ದಾಗಿದೆ. ಮಕ್ಕಳ ರಕ್ಷಣೆಗೆ ನೆರವು ಅಗತ್ಯವಿದ್ದಲ್ಲಿ ಮಕ್ಕಳ ಸಹಾಯವಾಣಿ ಸಂಪರ್ಕಿಸಬಹುದು. ಬಾಲ್ಯವಿವಾಹ, ಬಾಲಗರ್ಭಧಾರಣೆ ಮತ್ತು ಡಿಜಿಟಲ್ ಸುರಕ್ಷತೆ ಕುರಿತು ಶಾಲಾ- ಕಾಲೇಜುಗಳಲ್ಲಿ ನಿರಂತರ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕು. ಮಕ್ಕಳಿಗೆ ಭಯವಿಲ್ಲದೆ ಸಮಸ್ಯೆಗಳನ್ನು ಹಂಚಿಕೊಳ್ಳಲು ಮನೆಯಲ್ಲಿ ಸ್ನೇಹಪರ ವಾತಾವರಣ ಕಲ್ಪಿಸಬೇಕು ಎಂದರು.

ಗಣ್ಯ ವ್ಯಾಪಾರಸ್ಥ ಬಲರಾಮಸಾ ಬಸವಾ, ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನ ಬೆಲ್ಲದ ಮಾತನಾಡಿದರು. ಈ ವೇಳೆ ರೇಣುಕಾ ಬಸವಾ, ಗುರುಸಿದ್ಧಪ್ಪ ಕೊಣ್ಣೂರ, ಶಿವಕುಮಾರ ಸಣಕಲ್, ಲಿಂಗರಾಜ, ಜಯರಾಜ ಮುಳಗುಂದ, ಬಸವರಾಜ ಪಟ್ಟಣಶೆಟ್ಟಿ, ಈರಣ್ಣ ಢಾಣಿ ಸೇರಿದಂತೆ ಮುಂತಾದವರಿದ್ದರು. ಉಮಾ ಚನ್ನಪ್ಪನವರ ಪ್ರಾರ್ಥಿಸಿದರು. ನಾಗವೇಣಿ ಕಟ್ಟಿಮನಿ ಸ್ವಾಗತಿಸಿದರು. ಅರುಣ ರಾಜಪುರೋಹಿತ ಪರಿಚಯಿಸಿದರು. ಅನಿತಾ ದೇವದರ ನಿರೂಪಿಸಿದರು. ರಾಜೇಶ ಖಟವಟೆ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಣಿ ಸಂಯುಕ್ತಾಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದರೆ ನಾನೇ ಸ್ಪರ್ಧೆ: ಆನಂದ ಸಿಂಗ್
ಗ್ರಾಹಕರ ಅನುಕೂಲಕ್ಕಾಗಿ ಬಿಡಿಸಿಸಿ ನೂತನ ಶಾಖೆ ಆರಂಭ