ಹಾನಗಲ್ಲ: ಶಾಲೆ ಮಂದಿರವಿದ್ದಂತೆ ಮಕ್ಕಳು ದೇವರಿಗೆ ಸಮಾನ. ಶಾಲೆಗಳಿಗೆ ಮೂಲಸೌಕರ್ಯ ಕಲ್ಪಿಸಿದರೆ ದೇವರ ಸೇವೆ ಮಾಡಿದಂತೆ ಎನ್ನುವ ಭಾವನೆ ತಮ್ಮದು ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.ತಾಲೂಕಿನ ಬೈಚವಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ವಾರದ ಆರು ದಿನ ಮೊಟ್ಟೆ ವಿತರಣೆಗೆ ಚಾಲನೆ ನೀಡಿ, ವಿವೇಕ ಯೋಜನೆಯಡಿ ೪೨ ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಿದ ೩ ಕೊಠಡಿ ಹಾಗೂ ನೂತನ ಸ್ಮಾರ್ಟ್ ಕ್ಲಾಸ್ ಉದ್ಘಾಟಿಸಿ ಅವರು ಮಾತನಾಡಿದರು. ಸಹೃದಯಿ ಉದ್ಯಮಿ ಅಜೀಂ ಪ್ರೇಮ್‌ಜಿ ಅವರು ವಿದ್ಯಾರ್ಥಿಗಳಲ್ಲಿ ಅಪೌಷ್ಟಿಕತೆ ಹೋಗಲಾಡಿಸಲು ೧೫೯೧ ಕೋಟಿ ರು. ವಿನಿಯೋಗಿಸಿ ೬ ದಿನ ಮೊಟ್ಟೆ ವಿತರಿಸುವ ಕಾರ್ಯಕ್ರಮಕ್ಕೆ ಸರ್ಕಾರದೊಂದಿಗೆ ಕೈ ಜೋಡಿಸಿದ್ದಾರೆ. ರಾಜ್ಯದಲ್ಲಿ ೫೬ ಲಕ್ಷ ವಿದ್ಯಾರ್ಥಿಗಳು ಈ ಕಾರ್ಯಕ್ರಮದಡಿ ಅನುಕೂಲ ಪಡೆಯಲಿದ್ದಾರೆ ಎಂದು ತಿಳಿಸಿದ ಅವರು ತಾಲೂಕಿನ ಎಲ್ಲ ಸರ್ಕಾರಿ ಶಾಲೆಗಳಿಗೆ ಏಕಕಾಲಕ್ಕೆ ಮೂಲಸೌಲಭ್ಯ ಕಲ್ಪಿಸಿ ಕಲಿಕಾಪೂರಕ ವಾತಾವರಣ ಸೃಷ್ಟಿಗೆ ಗುರಿ ಹೊಂದಲಾಗಿದೆ. ಇದಕ್ಕೆ ಸಮುದಾಯ ಮತ್ತು ಸರ್ಕಾರಿ ನೌಕರರ ಸಹಕಾರ ಪಡೆದುಕೊಳ್ಳಲಾಗುತ್ತಿದೆ. ದೇವಸ್ಥಾನ ನಿರ್ಮಾಣಕ್ಕೆ ನೀಡುವ ಒತ್ತು, ಮಹತ್ವವನ್ನು ಸರ್ಕಾರಿ ಶಾಲೆಗಳನ್ನು ಸುಧಾರಿಸಲೂ ಸಹ ನೀಡುವ ಅಗತ್ಯವಿದೆ ಎಂದರು. ಬಿಇಒ ವಿ.ವಿ. ಸಾಲಿಮಠ ಮಾತನಾಡಿ, ತಾಲೂಕಿನಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆಗೆ ನಂ. ೧ನೇ ಸ್ಥಾನದ ಗುರಿ ಹೊಂದಿ ಕಾರ್ಯೋನ್ಮುಖರಾಗಿದ್ದೇವೆ. ತಾಲೂಕಿನಲ್ಲಿ ಶಿಕ್ಷಕರ ಕೊರತೆ ನೀಗಿಸಲಾಗಿದೆ. ಗುಣಮಟ್ಟದ ಶಿಕ್ಷಣ ದೊರಕಿಸುವಲ್ಲಿ ಗಮನ ನೀಡಲಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಕರ ಕೌಶಲ್ಯ ವೃದ್ಧಿ ಪಡಿಸಲಾಗುತ್ತಿದೆ ಎಂದು ತಿಳಿಸಿದರು.ಎಸ್‌ಡಿಎಂಸಿ ಅಧ್ಯಕ್ಷ ಶಂಕ್ರಣ್ಣ ತಾವರಗೆರೆ, ಗ್ರಾಪಂ ಅಧ್ಯಕ್ಷೆ ಕವನಾ ಕಲ್ಲನಗೌಡ್ರ, ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಶಿವಯ್ಯ ಹಿರೇಮಠ, ಪ್ರಮುಖರಾದ ಉಮೇಶ ದಾನಪ್ಪನವರ, ಮರಿಗೌಡ ಪಾಟೀಲ, ಸಿದ್ದನಗೌಡ ಪಾಟೀಲ, ಶ್ರೀಕಾಂತ ಅರಳೇಶ್ವರ, ಪಿಡಿಒ ಸುಮಂಗಲಾ, ಮುಖ್ಯಶಿಕ್ಷಕಿ ಹೇಮಾ, ಮೌಲಾಸಾಬ ಯಳವಟ್ಟಿ, ಸೋಮು ನೆರ್ಕಿ, ಭರಮಗೌಡ ಪಾಟೀಲ, ತಿಮ್ಮಣ್ಣ ಅಲಿಲವಾಡ, ಗಂಗಾಧರ ಹಿರೇಮಠ, ಶಶಿಧರ ಕೋಟಿ, ಸೋಮಣ್ಣ ಕೊಡ್ರನವರ, ಬಿ.ಎಸ್.ಸಣ್ಣಭಂಗಿ, ಮಹೇಶ ನಾಯ್ಕ, ಮಲ್ಲಣ್ಣ ಸಾವಿಕೇರಿ ಇದ್ದರು.