ಹಾವೇರಿ: ಜಿಲ್ಲೆಯಲ್ಲಿ ಕಬ್ಬಿನ ದರ ನಿಗದಿಗಾಗಿ ನಡೆದ ಸುದೀರ್ಘ ಹೋರಾಟಕ್ಕೆ ತಾತ್ಕಾಲಿಕ ವಿರಾಮ ಸಿಕ್ಕಿದೆ. ಸಕ್ಕರೆ ಸಚಿವ ರುದ್ರಪ್ಪ ಲಮಾಣಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪ್ರತಿ ಟನ್ ಕಬ್ಬಿಗೆ 3,225 ರು. ದರ ನಿಗದಿಪಡಿಸಲಾಗಿದ್ದು, ಜಿಲ್ಲೆಯ ಮೂರು ಸಕ್ಕರೆ ಕಾರ್ಖಾನೆಗಳ ಮಾಲೀಕರು ಈ ದರ ನೀಡಲು ಒಪ್ಪಿಕೊಂಡಿದ್ದಾರೆ. ರೈತರು ಕೂಡ ಅನಿವಾರ್ಯ ಪರಿಸ್ಥಿತಿಯಲ್ಲಿ ಈ ದರಕ್ಕೆ ತಾತ್ಕಾಲಿಕ ಒಪ್ಪಿಗೆ ಸೂಚಿಸಿ ಚಳವಳಿಯನ್ನು ಹಿಂಪಡೆದಿದ್ದಾರೆ ಎಂದು ಕಬ್ಬು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಚೂನಪ್ಪ ಪೂಜಾರ ತಿಳಿಸಿದರು.
ಬೆಳಗಾವಿ ಭಾಗದಲ್ಲಿ ಕಬ್ಬಿನ ರಿಕವರಿ ಪ್ರಮಾಣ ಶೇ.11ಕ್ಕಿಂತ ಹೆಚ್ಚಿದೆ. ಆದರೆ ಹಾವೇರಿಯಲ್ಲಿ ಶೇ.9.4 ಇದೆ ಎಂದು ಕಾರ್ಖಾನೆಗಳು ಹೇಳುತ್ತಿವೆ. ರಿಕವರಿ ಪ್ರಮಾಣದ ಲೆಕ್ಕಾಚಾರದಲ್ಲಿ ರೈತರಿಗೆ ಅನುಮಾನಗಳಿದ್ದು, ಈ ವಿಚಾರಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ರೈತರಿಗೆ ಬೇರೆ ದಾರಿ ಇಲ್ಲದ ಕಾರಣ ಸದ್ಯದ ದರಕ್ಕೆ ಒಪ್ಪಿಗೆ ನೀಡಿದ್ದೇವೆ. ಆದರೆ ಇದು ಅಂತಿಮ ಪರಿಹಾರವಲ್ಲ. ಮುಂಬರುವ ಅಧಿವೇಶನದಲ್ಲಿಯೂ ಕಬ್ಬಿನ ದರ ಹಾಗೂ ರಿಕವರಿ ವಿಚಾರವಾಗಿ ಚರ್ಚೆಯಾಗಬೇಕು ಎಂದು ಆಗ್ರಹಿಸಿದರು.
ತೂಕದಲ್ಲಿ ಮೋಸ ತಡೆಗೆ ಆಗ್ರಹ..ಕಬ್ಬು ತೂಕ ಮಾಡುವ ಸಂದರ್ಭದಲ್ಲಿ ರೈತರಿಗೆ ಮೋಸವಾಗುತ್ತಿದೆ ಎಂಬ ದೂರುಗಳಿದ್ದು, ಇದನ್ನು ಸರಿಪಡಿಸಲು ಸಚಿವರಿಗೆ ಮನವಿ ಮಾಡಲಾಗಿದೆ. ಕಬ್ಬಿನ ನಿಜವಾದ ರಿಕವರಿ ಪ್ರಮಾಣ ತಿಳಿಯಲು ಪ್ರತ್ಯೇಕ ಪ್ರಯೋಗಾಲಯ ಸ್ಥಾಪಿಸಬೇಕು. ಇದಕ್ಕಾಗಿ 500ಕೋಟಿ ರು. ಅನುದಾನ ಮೀಸಲಿಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದೇವೆ. ರೈತರಿಗೆ ನ್ಯಾಯ ದೊರೆಯಬೇಕಾದರೆ ಕಬ್ಬಿನ ತೂಕ ಹಾಗೂ ರಿಕವರಿ ಲೆಕ್ಕಾಚಾರದಲ್ಲಿ ಪಾರದರ್ಶಕತೆ ಇರಬೇಕು ಎಂದರು.