ಅಸ್ಸಾಂನಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಗದಗ ಗ್ರಾಮೀಣ ಮಂಡಳದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಅರವಿಂದ ಅಣ್ಣಿಗೇರಿ ನೇತೃತ್ವದಲ್ಲಿ ಮುಳಗುಂದ ಪೊಲೀಸ್ ಠಾಣೆ ಸಿಪಿಐ ಬಿ.ಜಿ. ಸುಬ್ಬಾಪುರಮಠ ಅವರಿಗೆ ದೂರು ನೀಡಿ ಒತ್ತಾಯಿಸಲಾಯಿತು.
ಮುಳಗುಂದ: ಅಸ್ಸಾಂನಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಗದಗ ಗ್ರಾಮೀಣ ಮಂಡಳದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಅರವಿಂದ ಅಣ್ಣಿಗೇರಿ ನೇತೃತ್ವದಲ್ಲಿ ಇಲ್ಲಿಯ ಪೊಲೀಸ್ ಠಾಣೆ ಸಿಪಿಐ ಬಿ.ಜಿ. ಸುಬ್ಬಾಪುರಮಠ ಅವರಿಗೆ ದೂರು ನೀಡಿ ಒತ್ತಾಯಿಸಲಾಯಿತು.
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅಸ್ಸಾಂನಲ್ಲಿ ಚುನಾವಣಾ ಪ್ರಚಾರವನ್ನುದ್ದೇಶಿಸಿ ಮಾತನಾಡುತ್ತಾ, ನಮಾಜ್ ಮಾಡುವಾಗ ವಿಷಪೂರಿತ ಹಾವು ಕಂಡರೆ ಅದನ್ನು ಕೊಲ್ಲಬೇಕು ಎಂದು ಕುರಾನ್‌ನಲ್ಲಿ ಬರೆಯಲಾಗಿದೆ. ಆರ್‌ಎಸ್‌ಎಸ್, ಬಿಜೆಪಿಗಳು ಆ ವಿಷಪೂರಿತ ಹಾವಿನಂತೆ. ಅದನ್ನು ಕೊಲ್ಲದಿದ್ದರೆ ನೀವು ಬದುಕುಳಿಯುವುದಿಲ್ಲ ಎಂಬ ಹೇಳಿಕೆ ನೀಡುವ ಮೂಲಕ ಅವರು ಮುಸ್ಲಿಮರನ್ನು ಆರ್‌ಎಸ್‌ಎಸ್, ಬಿಜೆಪಿ ಸದಸ್ಯರನ್ನು ಕೊಲ್ಲಲು ಪ್ರಚೋದಿಸಿದ್ದಾರೆ. ಇಂತಹ ಹೇಳಿಕೆಗಳಿಂದ ದೇಶದ ಮೇಲಾಗುವ ಸಂಭಾವ್ಯ ಪರಿಣಾಮಗಳನ್ನು ತಳ್ಳಿಹಾಕಲಾಗುವುದಿಲ್ಲ. ಅವರ ಹೇಳಿಕೆಯಿಂದ ಪ್ರಭಾವಿತರ ವ್ಯಕ್ತಿಗಳು ಆರ್‌ಎಸ್‌ಎಸ್, ಬಿಜೆಪಿ ಕಾರ್ಯಕರ್ತರ ಮೇಲೆ ದಾಳಿ ಮಾಡಬಹುದು. ಹೀಗಾಗಿ ಪ್ರಚೋದನಕಾರಿ ಹೇಳಿಕೆ ಪರಿಣಾಮ ಉಂಟಾಗಿರುವ ಸೂಕ್ಷ್ಮ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಕಾರ್ಯಕರ್ತರನ್ನು ರಕ್ಷಿಸಲು ಭದ್ರತಾ ವ್ಯವಸ್ಥೆ ಮಾಡಬೇಕು. ಖರ್ಗೆ ಅವರನ್ನು ಕೂಡಲೆ ಬಂಧಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಯಿತು.
ಈ ವೇಳೆ ಗದಗ ಗ್ರಾಮೀಣ ಮಂಡಳದ ಅಧ್ಯಕ್ಷ ಬೂದಪ್ಪ ಹಳ್ಳಿ, ಜಿಲ್ಲಾ ಘಟಕದ ಕಾರ್ಯದರ್ಶಿ ಮೋಹನ ಮದ್ದಿ, ಎಸ್.ಟಿ. ಮೋರ್ಚಾ ಕಾರ್ಯದರ್ಶಿ ವೈ.ಪಿ. ಅಡ್ನೂರ, ಮಂಜುನಾಥ ಹಳ್ಳೂರಮಠ, ಹನುಮಂತಪ್ಪ ದಿಂಡೇನವರ, ಮಹಾಂತೇಶ ಬಾತಾಖಾನಿ, ಸುರೇಶ ರಾಮಣ್ಣವರ, ಪ್ರಕಾಶ ದೊಡ್ಡಮನಿ, ಡಿ.ಬಿ. ಕರಿಗೌಡ್ರ, ವಿರೂಪಾಕ್ಷ ಹಸಬಿ, ಮಹಾಂತಪ್ಪ ಘೋಡಕೆ, ಮಲ್ಲಪ್ಪ ಕುರಿ, ಸಿ.ಎಸ್. ಪತ್ರಿ, ಮಲ್ಲಪ್ಪ ಕನ್ನೂರ, ನಾಗರಾಜ ಕತ್ತಿ, ದೇವಪ್ಪ ನೀಲಗುಂದ, ಶರಣಪ್ಪ ಭೋಳನವರ, ಮಂಜು ಕುಂಬಾರ ಮೊದಲಾದವರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.