ಪಂ. ಮಾಧವ ಗುಡಿ ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ

KannadaprabhaNewsNetwork | Published : Dec 25, 2023 1:30 AM

ಸಾರಾಂಶ

ಪದ್ಮಶ್ರೀ ಸಂಗೀತ ಪ್ರತಿಷ್ಠಾನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿಯಾಗಿ ಆಲೂರು ವೆಂಕಟರಾವ್ ಭವನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಮಾಧವ ಸ್ವರನಿಧಿ ಪ್ರಶಸ್ತಿಯನ್ನು ಖ್ಯಾತ ಹಿಂದುಸ್ತಾನಿ ಗಾಯಕ ಡಾ. ಪಂಡಿತ ನಾಗರಾಜ ಹವಾಲ್ದಾರ ಅವರಿಗೆ ಪ್ರದಾನ ಮಾಡಲಾಯಿತು.

ಡಾ. ಪಂಡಿತ ನಾಗರಾಜ ಹವಾಲ್ದಾರ ಅವರಿಗೆ ಮಾಧವ ಸ್ವರನಿಧಿ ಪ್ರಶಸ್ತಿ ಪ್ರದಾನಕನ್ನಡಪ್ರಭ ವಾರ್ತೆ ಧಾರವಾಡ

ಪದ್ಮಶ್ರೀ ಸಂಗೀತ ಪ್ರತಿಷ್ಠಾನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿಯಾಗಿ ಆಲೂರು ವೆಂಕಟರಾವ್ ಭವನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಮಾಧವ ಸ್ವರನಿಧಿ ಪ್ರಶಸ್ತಿಯನ್ನು ಖ್ಯಾತ ಹಿಂದುಸ್ತಾನಿ ಗಾಯಕ ಡಾ. ಪಂಡಿತ ನಾಗರಾಜ ಹವಾಲ್ದಾರ ಅವರಿಗೆ ಪ್ರದಾನ ಮಾಡಲಾಯಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ಪಂ. ಮಾಧವ ಗುಡಿ ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದವರು. ಅಂತಹ ಸಂಗೀತ ನಿರಂತರವಾಗಿ ಅವರ ಮುಕ್ಕಳು ಹಾಗೂ ಶಿಷ್ಯಂದಿರ ಮೂಲಕ ಮುಂದುವರಿಯಲಿ ಎಂದರು.

ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ಶರಣಬಸವ ಚೋಳಿನ ಮಾತನಾಡಿ, ಆಕಾಶವಾಣಿ ತನ್ನ 75 ವರ್ಷಗಳ ಸಂಭ್ರಮಿಸುತ್ತಿರುವ ಹಿನ್ನೆಲೆಯಲ್ಲಿ ಸಂಗೀತ ದಿಗ್ಗಜರೊಂದಿಗೆ ಮಾತುಕತೆ ನಡೆಸುವ ಸಂಗೀತ ಸಂಪದದಂತಹ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಅನೇಕ ಅಂತಾರಾಷ್ಟ್ರೀಯ ಕಲಾವಿದರಿಗೆ ವೇದಿಕೆಯನ್ನು ಕಲ್ಪಿಸಿದ ಕೀರ್ತಿಗೆ ಪಾತ್ರವಾಗಿದೆ. ಇಂತಹ ದಿಗ್ಗಜರಲ್ಲಿ ಆಕಾಶವಾಣಿಯ ಕಾರ್ಯವನ್ನು ಮೆಚ್ಚಿಕೊಂಡವರಲ್ಲಿ ಹಿಂದುಸ್ತಾನಿ ಹಿರಿಯ ಗಾಯಕರಾದ ಪಂಡಿತ ಮಾಧವ ಗುಡಿ ಒಬ್ಬರು ಎಂದರು.

ಹಿಂದುಸ್ತಾನಿ ಹಿರಿಯ ಗಾಯಕ ಹನುಮಂತ ಬುರ್ಲಿ, ಪಂ. ಮಾಧವ ಗುಡಿ ಹಾಗೂ ಅವರ ಗುರುವಿನೊಂದಿಗಿನ ಒಡನಾಟವನ್ನು ಸ್ಮರಿಸಿದರು. ಇದೇ ಸಂದರ್ಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ಪಂಡಿತ ನಾಗರಾಜ ಹವಾಲ್ದಾರ, ತಮ್ಮ ಗುರುಗಳ ಹೆಸರಿನಲ್ಲಿ ಸ್ಥಾಪನೆಗೊಂಡ ಪ್ರತಿಷ್ಠಿತ ಪ್ರಶಸ್ತಿ ತಮಗೆ ದೊರಕಿರುವುದು ಅತ್ಯಂತ ಸಂತಸದ ಸಂಗತಿ ಎಂದರು.

ವೆಂಕಟೇಶ ಕುಲಕರ್ಣಿ ಸ್ವಾಗತಿಸಿದರು. ಪಂ. ರಾಘವೇಂದ್ರ ಗುಡಿ ಅಧ್ಯಕ್ಷತೆ ವಹಿಸಿದ್ದರು.

ಸಮಾರಂಭದ ಅಂಗವಾಗಿ ನಡೆದ ಸಂಗೀತೋತ್ಸವದಲ್ಲಿ ಭಾರ್ಗವಿ ಕುಲಕರ್ಣಿ ಗಾಯನ, ಪಂ. ಶಾಂತಲಿಂಗ ದೇಸಾಯಿ, ಮಲ್ಲೇಶ ಹೂಗಾರ ಹಾಗೂ ರಘುನಂದನ ಹೂಗಾರ ಅವರ ತಬಲಾ ಸೋಲೋ, ಪಂ. ಜಯತೀರ್ಥ ಕುಲಕರ್ಣಿ ಕೊಳಲುವಾದನ, ಪಂ. ಪ್ರಸನ್ನ ಗುಡಿಯವರ ಗಾಯನ, ಪವನ ದೇಶಪಾಂಡೆ ಗೀತಾ ಜಯಂತಿ ಅಂಗವಾಗಿ “ ಕೃಷ್ಣಂ ವಂದೇ ಜಗದ್ಗುರುಂ “ ಎಂಬ ಏಕವ್ಯಕ್ತಿ ರಂಗಪ್ರಯೋಗ ಮಾಡಿದರು. ವೇದಶ್ರೀ ಮರಾಠೆ ಇವರಿಂದ ಭರತನಾಟ್ಯ ಹಾಗೂ ಕುಚಪುಡಿ ನೃತ್ಯ, ಭಾಗ್ಯಶ್ರೀ ಹೂಗಾರ ಅವರಿಂದ ಸಿತಾರವಾದನ ನಡೆಯಿತು. ಹವಾಲ್ದಾರ ಅವರ ಗಾಯನಕ್ಕೆ ಸಂವಾದಿನಿಯಲ್ಲಿ ಗುರುಪ್ರಸಾದ ಹೆಗಡೆ, ಕಲಾವತಿ ಹಂಪಿಹೊಳಿ, ಕುಶಾಲ ಗಲಗಲಿ, ಗಾಯತರಿ ಥಿಟೆ, ತಬಲಾದಲ್ಲಿ ಕೇದಾರನಾಥ ಹವಾಲ್ದಾರ, ಜಯತೀರ್ಥ ಪಂಚಮುಖಿ ಹಾಗೂ ಪ್ರಸಾದ ಮಡಿವಾಳರ ಸಾಥ್ ನೀಡಿದರು. ವಿಜಯೀಂದ್ರ ಅರ್ಚಕ ಪರಿಚಯಿಸಿದರು. ಆರತಿ ದೇವಶಿಖಾಮಣಿ ಕಾರ್ಯಕ್ರಮ ನಿರೂಪಿಸಿದರು.

Share this article