ಕನ್ನಡಪ್ರಭ ವಾರ್ತೆ ಮಡಿಕೇರಿ
2023ಕ್ಕೆ ಹೋಲಿಸಿದರೆ ಈ ವರ್ಷ ಶೇಕಡವಾರು ಪ್ರಮಾಣ ಏರಿಕೆ ಆಗಿದೆ. ಕಳೆದ ವರ್ಷ ಕೊಡಗಿನಲ್ಲಿ ಶೇ. 90.55 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಜಿಲ್ಲೆ ರಾಜ್ಯದಲ್ಲಿ 3ನೇ ಸ್ಥಾನ ಪಡೆದುಕೊಂಡಿತ್ತು.
2022ನೇ ಸಾಲಿನಲ್ಲಿ ಕೊಡಗು ಆರನೇ ಸ್ಥಾನದಲ್ಲಿತ್ತು. 2022ಕ್ಕೆ ಹೋಲಿಸಿದರೆ 2023ರಲ್ಲಿ ಜಿಲ್ಲೆಯ ಒಟ್ಟಾರೆ ಫಲಿತಾಂಶ ಶೇ.17.23 ರಷ್ಟು ಹೆಚ್ಚಳವಾಗಿತ್ತು. ಈ ಬಾರಿ ಈ ಪ್ರಮಾಣ 1.58ರಷ್ಟು ಹೆಚ್ಚಳ ಕಂಡುಬಂದಿದೆ. ಜಿಲ್ಲೆಯಲ್ಲಿ 4,576 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 4,216 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.ಕಲಾ ವಿಭಾಗದಲ್ಲಿ ಪರೀಕ್ಷೆ ಬರೆದ 804 ವಿದ್ಯಾರ್ಥಿಗಳ ಪೈಕಿ 671 (ಶೇ. 83.46), ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆ ಬರೆದ 2,351 ವಿದ್ಯಾರ್ಥಿಗಳಲ್ಲಿ 2,196 (ಶೇ 93.41) ಹಾಗೂ ವಿಜ್ಞಾನ ವಿಭಾಗದಲ್ಲಿ ಪರೀಕ್ಷೆ ಬರೆದ 1,421 ವಿದ್ಯಾರ್ಥಿಗಳ ಪೈಕಿ 1,349 (ಶೇ 94.93) ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. 385 ಖಾಸಗಿ ಅಭ್ಯರ್ಥಿಗಳ ಪೈಕಿ 222 (ಶೇ 57.66) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪುನರಾವರ್ತಿತಾ 140 ಅಭ್ಯರ್ಥಿಗಳ ಪೈಕಿ 71 (ಶೇ 50.71) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಗೋಣಿಕೊಪ್ಪ ವಿದ್ಯಾನಿಕೇತನ ಪ.ಪೂ. ಕಾಲೇಜಿನ ಚರಿಸ್ಮ ಜಾನ್ಸನ್ 591 ಅಂಕ ಗಳಿಸಿ ಪ್ರಥಮ, ಗೋಣಿಕೊಪ್ಪ ಸರ್ವ ದೈವತಾ ಪಿ.ಯು. ಕಾಲೇಜಿನ ರಶ್ಮಿತ ಕೆ.ಕೆ. 589 ಅಂಕ ಗಳಿಸಿ ದ್ವಿತೀಯ ಹಾಗೂ ಪೊನ್ನಂಪೇಟೆ ಸಂತ ಅಂತೋಣಿ ಪಿ.ಯು. ಕಾಲೇಜಿನ ಬಿಂದು ಐ. ಮತ್ತು ಕೊಟ್ಟಮುಡಿ ಮರ್ಕಜ್ ಪಿ.ಯು. ಕಾಲೇಜಿನ ಜೂವೇರಿಯಾ ಪಿ. ಝಡ್. ತಲಾ 588 ಅಂಕ ಗಳಿಸಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಅಮ್ಮ - ಮಗಳು ಇಬ್ಬರೂ ಪಾಸ್: ಕುಶಾಲನಗರ ತಾಲೂಕಿನ ಕೂಡ್ಲೂರು ಚೆಟ್ಟಳ್ಳಿ ಗ್ರಾಮದ ರಿನಿಶಾ ಹಾಗು ಅವಳ ತಾಯಿ ಬೇಬಿರಾಣಿ 2023-24ನೇ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಕಳೆದ 25 ವರ್ಷಗಳ ಹಿಂದೆ ಹತ್ತನೇ ತರಗತಿಯನ್ನು ಓದಿದ ನಂತರ ಈಗ ಮಗಳ ಒತ್ತಾಯಕ್ಕಾಗಿ ಪಿಯುಸಿ ಪರೀಕ್ಷೆ ಬರೆದು ಉತ್ತೀರ್ಣರಾಗಿರುವುದು ಹೆಮ್ಮೆ ಎನಿಸಿದೆ ಎಂದು ಬೇಬಿರಾಣಿ ಹೇಳುತ್ತಾಳೆ.