ಬೆಸ್ಕಾಂ ತುಮಕೂರು ವಿಭಾಗದಿಂದ ವಿದ್ಯುತ್ ಸುರಕ್ಷತಾ ಜಾಥಾ । ವಿದ್ಯುತ್ ಅಪಘಾತ ಉಂಟಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರಲ್ಲಿ ಅರಿವುಕನ್ನಡಪ್ರಭ ವಾರ್ತೆ ತುಮಕೂರು
ವಿದ್ಯುತ್ ಅಪಘಾತ ತಡೆಯುವ ಸಪ್ತಾಹದ ಅಂಗವಾಗಿ ಬೆಸ್ಕಾಂ ತುಮಕೂರು ವಿಭಾಗದ ವತಿಯಿಂದ ವಿದ್ಯುತ್ ಸುರಕ್ಷತಾ ಜಾಥಾವನ್ನು ನಗರದಲ್ಲಿ ನಡೆಸಲಾಯಿತು. ನಗರದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಿಂದ ಆರಂಭವಾದ ವಿದ್ಯುತ್ ಸುರಕ್ಷತಾ ಜನಜಾಗೃತಿ ಜಾಥಾಕ್ಕೆ ಬೆಸ್ಕಾಂ ಅಧೀಕ್ಷಕ ಎಂಜಿನಿಯರ್ ಎಚ್.ವಿ. ಕೃಷ್ಣ ಪ್ರಸಾದ್ ಅವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಸಾರ್ವಜನಿಕರು, ರೈತರು, ಶಾಲಾ ಮಕ್ಕಳು ಹಾಗೂ ಬೆಸ್ಕಾಂ ಸಿಬ್ಬಂದಿಗೆ ವಿದ್ಯುತ್ ಅಪಘಾತವನ್ನು ತಡೆಯುವ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಜಾಥಾ ನಡೆಸಲಾಗುತ್ತಿದೆ ಎಂದರು.ವಿದ್ಯುತ್ ಅಪಘಾತ ಉಂಟಾಗದಂತೆ ಹೇಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಬೆಸ್ಕಾಂ ಮುಂದಾಗಿದೆ. ಅಪಘಾತಗಳನ್ನು ತಡೆಗಟ್ಟುವ ಸಲುವಾಗಿ ಸುರಕ್ಷತಾ ಜಾಥಾ ನಡೆಸಿ ಜನರಲ್ಲಿ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ಕಟ್ಟಡಗಳನ್ನು ವಿದ್ಯುತ್ ತಂತಿಗಳ ಸಮೀಪ ನಿರ್ಮಿಸಬಾರದು. ತುಂಡಾಗಿ ಬಿದ್ದ ವಿದ್ಯುತ್ ತಂತಿಗಳನ್ನು ಮುಟ್ಟಬಾರದು. ತಕ್ಷಣ ಬೆವಿಕಂ ಸಹಾಯವಾಣಿ 1912ಗೆ ಕರೆ ಮಾಡಿ ಮಾಹಿತಿ ತಿಳಿಸಬೇಕು. ವಿದ್ಯುತ್ ಸ್ವಿಚ್‌ಗಳು ಹಾಗೂ ವಿದ್ಯುತ್ ಉಪಕರಣಗಳನ್ನು ಒದ್ದೆ ಕೈಗಳಿಂದ ಮುಟ್ಟಬಾರದು. ವಿದ್ಯುತ್ ಕಂಬಗಳಿಗೆ ಬ್ಯಾನರ್ ಅಥವಾ ಜಾಹೀರಾತು ಫಲಕಗಳನ್ನು ಕಟ್ಟಬೇಡಿ ಎಂದು ಅವರು ಸಲಹೆ ನೀಡಿದರು.ತುಮಕೂರು ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಶಾಂತ್ ಕೂಡ್ಲಿಗಿ ಮಾತನಾಡಿ, ಸಾರ್ವಜನಿಕರು ವಿದ್ಯುತ್ ಅಪಘಾತಕ್ಕೆ ಒಳಗಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಕುರಿತು ಅರಿವು ಮೂಡಿಸಲಾಗುತ್ತಿದೆ. ವಿದ್ಯುತ್ ಅಪಘಾತ ತಡೆಗಟ್ಟಲು ಸಾರ್ವಜನಿಕರು ಬೆಸ್ಕಾಂನೊಂದಿಗೆ ಸಹಕರಿಸಬೇಕು. ಬೆವಿಕಂ ಲೈನ್‌ನಿಂದ ಅಕ್ರಮವಾಗಿ ವಿದ್ಯುತ್ ಸಂಪರ್ಕವನ್ನು ಪಡೆದುಕೊಳ್ಳುವುದು ಅಪರಾಧ ಎಂದರು.
ಇದೇ ಸಂದರ್ಭದಲ್ಲಿ ಅಧೀಕ್ಷಕ ಎಂಜಿನಿಯರ್ ಕೃಷ್ಣಪ್ಪ ಅವರು ಬೆಸ್ಕಾಂ ಪವರ್ ಮೆನ್‌ಗಳಿಗೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಕುರಿತು ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಿಂದ ಹೊರಟ ಜಾಥಾವು ಅಶೋಕ ರಸ್ತೆ, ಟೌನ್‌ಹಾಲ್ ವೃತ್ತ, ಬಿ.ಎಚ್. ರಸ್ತೆ ಮುಖೇನ, ಸ್ವಾಮೀಜಿ ಸರ್ಕಲ್ ಮೂಲಕ ಹಾದು ಬೆಸ್ಕಾಂ ಕಚೇರಿ ತಲುಪಿತು.ಜಾಥಾದಲ್ಲಿ ಬೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್‌ಗಳಾದ ಮೇಘರಾಜ್, ಅನಂತರಾಮಯ್ಯ, ಎಇಇಗಳಾದ ಮಲ್ಲಣ್ಣ, ನಾಗರಾಜು, ಹರೀಶ್, ಪುರುಷೋತ್ತಮ್, ಅಮ್ಜದ್, ಶೈಲೇಂದ್ರ, ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ಎಂ.ಎಚ್. ವೆಂಕಟರಮಣಯ್ಯ, ಬೆಸ್ಕಾಂ ಮತ್ತು ಕೆಪಿಟಿಸಿಎಲ್ ಅಧಿಕಾರಿಗಳು, ಪವರ್‌ಮೆನ್‌ಗಳು ಭಾಗವಹಿಸಿದ್ದರು.
ಫೋಟೊನಗರದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಿಂದ ಆರಂಭವಾದ ವಿದ್ಯುತ್ ಸುರಕ್ಷತಾ ಜನಜಾಗೃತಿ ಜಾಥಾವು ಅಶೋಕ ರಸ್ತೆ, ಟೌನ್‌ಹಾಲ್ ವೃತ್ತ, ಬಿ.ಎಚ್. ರಸ್ತೆ ಮುಖೇನ, ಸ್ವಾಮೀಜಿ ಸರ್ಕಲ್ ಮೂಲಕ ಹಾದು ಬೆಸ್ಕಾಂ ಕಚೇರಿ ತಲುಪಿತು.