ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಹಾವು ಕಡಿತ ಒಂದು ಜಾಗತಿಕ ಸಮಸ್ಯೆಯಾಗಿದೆ. ಇದರಿಂದ ಸಾವು ನೋವುಗಳಾಗುತ್ತಿದ್ದು, ಸಾವಿನ ಪ್ರಮಾಣ ಪ್ರತಿವರ್ಷದಿಂದ ವರ್ಷಕ್ಕೆ ಏರಿಕೆಯಾಗಿದೆ. ಆದ್ದರಿಂದ ಸೆ.19ರಂದು ಜನರಲ್ಲಿ ಜಾಗೃತಿ ಮೂಡಿಸಲು ಅಂತಾರಾಷ್ಟ್ರೀಯ ಹಾವು ಕಡಿತದ ಜಾಗೃತಿ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆಂದು ಬಾಗಲಕೋಟೆ ಜಿಲ್ಲಾಸಮೀಕ್ಷಣಾಧಿಕಾರಿಗಳಾದ ಡಾ.ದಯಾನಂದ ಕರೆಯನ್ನವರ ಹೇಳಿದರು.ನವನಗರದ ಸರ್ಕಾರಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಪದವಿ ಪೂರ್ವ ವಸತಿ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ನಡೆದ ಅಂತಾರಾಷ್ಟ್ರೀಯ ಹಾವು ಕಡಿತ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿ ಅತಿ ಹೆಚ್ಚು ಹಾವು ಕಡಿತದ ಪ್ರಕರಣಗಳು ದಾಖಲಾಗುತ್ತಿವೆ. ಅದನ್ನು ತಡೆಯಲು ಸಾರ್ವಜನಿಕರಲ್ಲಿ ಆರೋಗ್ಯ ಇಲಾಖೆ ಜಾಗೃತಿ ಮೂಡಿಸಲಾಗುತ್ತಿದೆ. ಯಾವುದೇ ವ್ಯಕ್ತಿಗೆ ಹಾವು ಕಚ್ಚಿದಾಗ ಗಾಬರಿಗೊಳ್ಳದೆ ತುರ್ತಾಗಿ ಸಮೀಪದ ಸರ್ಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬೇಕು. ಎಎಸ್ವಿ ಇಂಜೆಕ್ಷನ್ ಕಡ್ಡಾಯವಾಗಿ ಪಡೆಯಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಸೋಂಕು ಶಾಸ್ತ್ರಜ್ಞ ಡಾ.ಸೀಮಾ ಹುದ್ದಾರ ಮಾತನಾಡಿ, ಹಾವು ಕಡಿತದ ಬಗ್ಗೆ ಪ್ರತಿಯೊಬ್ಬರಿಗೂ ಜಾಗೃತಿ ಅತ್ಯವಶ್ಯ. ಹಾವಿನ ಕಡಿತವನ್ನು ಗಂಭೀರವಾಗಿ ಪರಿಗಣಿಸದೆ ಸ್ಥಳೀಯ ನಾಟಿ ವೈದ್ಯ ಪದ್ಧತಿಯಂತಹ ಅವೈಜ್ಞಾನಿಕ ವಿಧಾನ ಅನುಸರಿಸುತ್ತಿರುವುದರಿಂದ ಸಾವುಗಳ ಸಂಖ್ಯೆ ಹೆಚ್ಚುತ್ತಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಶೇ.20ರಷ್ಟು ಹಾವು ಕಡಿತದ ಪ್ರಕರಣಗಳು ಪತ್ತೆಯಾಗುತ್ತಿವೆ. ಎರಡರಿಂದ ನಾಲ್ಕು ಸಾವಿನ ಪ್ರಕರಣಗಲು ದಾಖಲಾಗುತ್ತಿವೆ. ಆದ್ದರಿಂದ ಹಾವು ಕಡಿತಕ್ಕೊಳಗಾದವ ಗಾಬರಿಗೊಳ್ಳದೆ ಶಾಂತವಾಗಿರಿ, ಧೈರ್ಯ ತಂದುಕೊಳ್ಳಬೇಕು. ಗಾಬರಿಯಾದರೆ ಹೃದಯ ಬಡಿತ ಹೆಚ್ಚಾಗಿ ವಿಷ ವೇಗವಾಗಿ ಹರಡುತ್ತದೆ. ಕಚ್ಚಿದ ಹಾವನ್ನು ಹಿಡಿಯುವ ಹಾಗೂ ಕೊಲ್ಲುವ ಪ್ರಯತ್ನ ಮಾಡಬಾರದು. ಹಾವು ಕಡಿದ ಗಾಯದ ಮೇಲೆ ಮಂಜುಗಡ್ಡೆ ಇಡುವುದಾಗಲಿ, ನೀರಲ್ಲಿ ಗಾಯವನ್ನು ಮುಳುಗಿಸುವುದಾಗಲಿ ಮಾಡಬಾರದು. ಹೊಲ ಗದ್ದೆಗಳಲ್ಲಿ ಹಾವು ಕಡಿದಾಗ ಓಡಿ ಬರುವ ಪ್ರಯತ್ನ ಮಾಡಬಾರದು. ಸಾಧ್ಯವಾದರೆ ಅಕ್ಕಪಕ್ಕ ಯಾರಾದರೂ ಇದ್ದರೆ ರೋಗಿಯನ್ನು ಎತ್ತಿಕೊಂಡು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಬೇಕು ಎಂದು ತಿಳಿಸಿದರು.ಸರ್ಕಾರಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಪದವಿ ಪೂರ್ವ ವಸತಿ ಕಾಲೇಜಿನ ಪ್ರಾಚಾರ್ಯ ಎಂ.ಎನ್. ಗರಗ, ಇತಿಹಾಸ ಪ್ರಾಧ್ಯಾಪಕ ಕೇಶವ ಸಾಲಮಂಟಪಿ, ಎನ್ಸಿಡಿಡಿಪಿಸಿ ಡಾ.ಎ.ವಿ. ಪಾಟೀಲ,ಹಿರಿಯ ಆರೋಗ್ಯ ನಿರೀಕ್ಷಕ ಎಚ್.ಪಿ.ನಾಯ್ಕರ ಸೇರಿದಂದ ವಿದ್ಯಾರ್ಥಿನಿಯರು ಇದ್ದರು.