ಭಿಕ್ಷಾಟನೆ ತಡೆ, ಕಾಣೆಯಾದ ಮಕ್ಕಳ ರಕ್ಷಣೆ ಕುರಿತು ಜನಜಾಗೃತಿ

KannadaprabhaNewsNetwork | Published : Feb 21, 2025 11:49 PM

ಸಾರಾಂಶ

ದೌರ್ಜನ್ಯಕ್ಕೆ ಒಳಗಾದ ಮಕ್ಕಳು ಕಂಡು ಬಂದಲ್ಲಿ ಮಕ್ಕಳ ಸಹಾಯವಾಣಿ 1098 ಇಲ್ಲವೇ ಪೊಲೀಸ್ ತುರ್ತು ಸೇವೆ–112 ಗೆ ಕರೆ ಮಾಡಿ ಮಾಹಿತಿ ನೀಡಬಹುದು

ಬಳ್ಳಾರಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ವಿಶೇಷ ಪೊಲೀಸ್ ಘಟಕ, ಸಖಿ-ಒನ್ ಸ್ಟಾಪ್ ಸೆಂಟರ್ ಸಹಯೋಗದಲ್ಲಿ ನಗರದ ರೈಲ್ವೆ ನಿಲ್ದಾಣ ಮತ್ತು ಬಸ್ ನಿಲ್ದಾಣಗಳಲ್ಲಿ ಭಿಕ್ಷಾಟನೆ ತಡೆ ಮತ್ತು ಕಾಣೆಯಾದ ಮಕ್ಕಳ ರಕ್ಷಣೆ ಕುರಿತು ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮಕ್ಕಳ ರಕ್ಷಣಾಧಿಕಾರಿ ಚನ್ನಬಸಪ್ಪ ಪಾಟೀಲ್ ಚಾಲನೆ ನೀಡಿ ಮಾತನಾಡಿ, ಕೆಲವು ಜನರು ಭಿಕ್ಷಾಟನೆಯನ್ನು ವೃತ್ತಿಯನ್ನಾಗಿಸಿಕೊಂಡಿದ್ದು, ಈ ಪಿಡುಗನ್ನು ಸಮಾಜದಿಂದ ತಡೆಗಟ್ಟಲು ಹಾಗೂ ನಿಷೇಧಿಸಲು ಇಂತಹ ಕೃತ್ಯದಲ್ಲಿ ತೊಡಗಿಸಿಕೊಂಡಿರುವವರನ್ನು ಗುರುತಿಸಿ, ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಿ ಅವರಿಗೆ ಪುನರ್ವಸತಿ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಮಕ್ಕಳ ವಿಶೇಷ ಪೊಲೀಸ್ ಘಟಕದ ಅಧಿಕಾರಿ ಲಲಿತಮ್ಮ, ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳು, ಚಿಂದಿ ಹಾಯುವ ಮಕ್ಕಳು, ಬೀದಿ ಮಕ್ಕಳು, ಕಾರ್ಮಿಕ ಪದ್ಧತಿಯಲ್ಲಿ ತೊಡಗಿರುವ ಮಕ್ಕಳು, ಅನಾಥ ಮಕ್ಕಳು, ಸಾಗಣೆಯಾದ ಮಕ್ಕಳು, ಪರಿತ್ಯಜಿಸಿಲ್ಪಟ್ಟ ಮಕ್ಕಳು, ಶೋಷಣೆ ಮತ್ತು ದೌರ್ಜನ್ಯಕ್ಕೆ ಒಳಗಾದ ಮಕ್ಕಳು ಕಂಡು ಬಂದಲ್ಲಿ ಮಕ್ಕಳ ಸಹಾಯವಾಣಿ 1098 ಇಲ್ಲವೇ ಪೊಲೀಸ್ ತುರ್ತು ಸೇವೆ–112 ಗೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದು ಹೇಳಿದರು.

ಕಾಣೆಯಾದ ಯಾವುದೇ ಮಗು ಕಂಡು ಬಂದಲ್ಲಿ ಕೂಡಲೇ ಮಕ್ಕಳ ಸಹಾಯವಾಣಿ 1098 ಮಾಹಿತಿ ನೀಡಿ, ಇಲ್ಲವೇ ಹತ್ತಿರದ ಪೊಲೀಸ್ ಠಾಣೆಗೆ ಮಗು ಒಪ್ಪಿಸಬೇಕು ಎಂದು ಕಾನೂನು ಪರಿವೀಕ್ಷಣಾಧಿಕಾರಿ ಈಶ್ವರ್ ರಾವ್ ತಿಳಿಸಿದರು.

ಮಕ್ಕಳ ರಕ್ಷಣಾಧಿಕಾರಿ (ಸಾಂಸ್ಥಿಕ ಸೇವೆ) ಮಂಜುನಾಥ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಯೊಜನೆಗಳ ಕುರಿತು ಜನರಿಗೆ ತಿಳಿಸಿಕೊಟ್ಟರು. ಮಕ್ಕಳ ಸಹಾಯವಾಣಿಯ ಸಂಯೋಜಕ ಆನಂದ ಮಕ್ಕಳ ಸಹಾಯವಾಣಿ-1098 ಕುರಿತ ಕರಪತ್ರ ಸಾರ್ವಜನಿಕರಿಗೆ ವಿತರಿಸಿ ಮಕ್ಕಳ ಸಹಾಯವಾಣಿ ಸೇವೆಗಳ ಕುರಿತು ತಿಳಿಸಿದರು.

ಈ ವೇಳೆ ಬಸ್ ನಿಲ್ದಾಣದ ಉಸ್ತುವಾರಿ ಅಧಿಕಾರಿ ರಾಜಶೇಖರ್, ನಿಯಂತ್ರಣಾಧಿಕಾರಿ ಪಂಪಾರೆಡ್ಡಿ, ಬಳ್ಳಾರಿ ರೈಲ್ವೇ ನಿಲ್ದಾಣದ ಎಎಸ್‌ಐ ಶಿವಮೂರ್ತಿ, ಪೊಲೀಸ್ ಪೇದೆ ಶಂಕರ್, ಬ್ರೂಸ್‌ಪೇಟೆ ಪೊಲೀಸ್ ಠಾಣೆಯ ಪಿಎಸ್‌ಐ ಎಂ.ಅನ್ಸರ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಮಕ್ಕಳ ಸಹಾಯವಾಣಿ ಸಿಬ್ಬಂದಿ ರವಿಕುಮಾರ್, ಹೊನ್ನೂರಪ್ಪ, ಉಮೇಶ್, ಅರುಳ್ ಆನಂದ್, ಕಾರ್ತಿಕ್, ಸುಧಾ, ನಿಲೋಫಿಯಾ, ಚಂದ್ರಕಳ, ಸಜಿನಿ ಮತ್ತು ಮಿಷನ್ ಶಕ್ತಿ ಯೋಜನೆಯ ಜಿಲ್ಲಾ ಸಂಯೋಜಕ ಶಹಜಾನ್, ಸಖಿ-ಒನ್ ಸ್ಟಾಪ್ ಸೆಂಟರ್‌ನ ಸಿಬ್ಬಂದಿ ವಿಶಾಲಕ್ಷೀ ಸರಸ್ವತಿ ಹಾಗೂ ನವದುರ್ಗಿ ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು.

Share this article