ಸರ್ಕಾರಿ ಶಾಲೆಯಲ್ಲಿ ಸಿಗುವ ಗುಣಮಟ್ಟದ ಶಿಕ್ಷಣ ಕುರಿತು ಜನಜಾಗೃತಿ ಅಗತ್ಯ

KannadaprabhaNewsNetwork | Published : Mar 24, 2025 12:31 AM

ಸಾರಾಂಶ

ಸರ್ಕಾರಿ ಶಾಲೆಗಳಲ್ಲಿ ಸಿಗುವ ಸವಲತ್ತುಗಳು ಹಾಗೂ ಗುಣಮಟ್ಟದ ಶಿಕ್ಷಣ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಬೇಕಾಗಿದೆ ಎಂದು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಹಾಗೂ ಚನ್ನರಾಯಪಟ್ಟಣ ಲಯನ್ಸ್ ಕ್ಲಬ್ ಸಂಸ್ಥಾಪಕ ಅಧ್ಯಕ್ಷ ಡಾ.ವಿ. ಮಹೇಶ್ ಅಭಿಪ್ರಾಯಪಟ್ಟರು. ತಿಯೊಂದು ಮಗುವಿನಲ್ಲೂ ವಿಭಿನ್ನ ಆಲೋಚನೆ ಹಾಗೂ ಆವಿಷ್ಕಾರ ಕಟ್ಟಿಕೊಳ್ಳುವ ಹುರುಪು ಇರುತ್ತದೆ. ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ನೀಡುವ ಗುಣಮಟ್ಟದ ಶಿಕ್ಷಣ, ಸರ್ಕಾರಿ ಶಾಲೆಯಲ್ಲೇ ಸಿಗುತ್ತದೆ ಎಂದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಸರ್ಕಾರಿ ಶಾಲೆಗಳಲ್ಲಿ ಸಿಗುವ ಸವಲತ್ತುಗಳು ಹಾಗೂ ಗುಣಮಟ್ಟದ ಶಿಕ್ಷಣ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಬೇಕಾಗಿದೆ ಎಂದು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಹಾಗೂ ಚನ್ನರಾಯಪಟ್ಟಣ ಲಯನ್ಸ್ ಕ್ಲಬ್ ಸಂಸ್ಥಾಪಕ ಅಧ್ಯಕ್ಷ ಡಾ.ವಿ. ಮಹೇಶ್ ಅಭಿಪ್ರಾಯಪಟ್ಟರು.

ಪಟ್ಟಣದ ಮಾಧ್ಯಮಿಕ ಶಾಲಾ ಆವರಣದಲ್ಲಿರುವ ಸರ್ಕಾರಿ ಬಾಲಕಿಯರ ಪ್ರೌಢಶಾಲಾ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು, ಸರ್ಕಾರಿ ಸೌಲಭ್ಯಗಳು ಬೇಕು ಆದರೆ ಸರ್ಕಾರಿ ಶಾಲೆಗಳಲ್ಲಿ ತಮ್ಮ ಮಕ್ಕಳು ಕಲಿಯುವುದು ಬೇಡ. ಸರ್ಕಾರಿ ಶಾಲೆಗಳಲ್ಲಿ ಎಲ್ಲ ಸೌಲಭ್ಯಗಳು ಸಿಗುತ್ತಿದ್ದರೂ ಪೋಷಕರಿಗೆ ಖಾಸಗಿ ಶಾಲೆಗಳ ವ್ಯಾಮೋಹ ಹೆಚ್ಚಾಗಿದೆ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಇಲಾಖೆ ಜಾರಿಗೊಳಿಸುವ ಎಲ್ಲಾ ಸವಲತ್ತುಗಳನ್ನು ಕಲ್ಪಿಸುವುದರೊಂದಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಎಲ್ಲಾ ವರ್ಗಕ್ಕೆ ಸೇರಿದ ಮಕ್ಕಳು ಇದ್ದು, ಪ್ರತಿಯೊಂದು ಮಗುವಿನಲ್ಲೂ ವಿಭಿನ್ನ ಆಲೋಚನೆ ಹಾಗೂ ಆವಿಷ್ಕಾರ ಕಟ್ಟಿಕೊಳ್ಳುವ ಹುರುಪು ಇರುತ್ತದೆ. ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ನೀಡುವ ಗುಣಮಟ್ಟದ ಶಿಕ್ಷಣ, ಸರ್ಕಾರಿ ಶಾಲೆಯಲ್ಲೇ ಸಿಗುತ್ತದೆ. ಪಟ್ಟಣಕ್ಕೆ ಸೀಮಿತವಾಗಿದ್ದ ಖಾಸಗಿ ಶಾಲೆಗಳ ವ್ಯಾಮೋಹ, ಗ್ರಾಮೀಣ ಪ್ರದೇಶಕ್ಕೂ ವಿಸ್ತರಿಸಿ ಪೋಷಕರು ಅಂಕದ ಹಿಂದೆ ಓಡುವ ಸಂಸ್ಕೃತಿ ಬೆಳೆಸಿಕೊಂಡಿದ್ದಾರೆ. ರಾಷ್ಟ್ರ ನಿರ್ಮಾಣಕ್ಕೆ ಸರ್ಕಾರಿ ಶಾಲೆ ಸಮಗ್ರ ಶಿಕ್ಷಣದೊಂದಿಗೆ ಮಾನಸಿಕವಾಗಿ ಮಕ್ಕಳನ್ನು ಬೆಳೆಸುತ್ತಿದೆ ಎಂಬುದನ್ನು ಪೋಷಕರಿಗೆ ಮನದಟ್ಟು ಮಾಡಿಸಿ ಮನಪರಿವರ್ತನೆಯಾಗಬೇಕೆಂದರು. ಪೋಷಕರು ಓದುಗರಲ್ಲಿ ಕ್ರಿಯಾಶೀಲತೆ ಉಂಟು ಮಾಡುವ, ದೈನಂದಿನ ವಿಚಾರಗಳನ್ನು ಕಟ್ಟಿಕೊಡುವ ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡಲ್ಲಿ ಹೆಚ್ಚು ಜ್ಞಾನ ಪಡೆಯಬಹುದಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲೆಯ ಮುಖ್ಯ ಶಿಕ್ಷಕ ಬಿ.ಆರ್.ರಮೇಶ್ ಅಧ್ಯಕ್ಷೀಯ ನುಡಿಗಳನ್ನಾಡಿ ವಿದ್ಯಾರ್ಥಿ ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಂಡು ಪರಸ್ಪರ ಸ್ನೇಹ, ಸೌಹಾರ್ದತೆಯಿಂದ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬದುಕಬೇಕು. ಮುಂದಿನ ಉತ್ತಮ ಸಾಮಾಜಿಕ ವ್ಯವಸ್ಥೆ ಮತ್ತು ಭವಿಷ್ಯ ನಿರ್ಮಾಣಕ್ಕಾಗಿ ಉತ್ತಮ ಮನೋಭಾವ ಮತ್ತು ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಅನಿವಾರ್ಯ. ಯಶಸ್ಸಿಗೆ ಯಾವುದೇ ಅಡ್ಡದಾರಿ ಇರುವುದಿಲ್ಲ ಕೇವಲ ನಿರಂತರ ಪರಿಶ್ರಮದಿಂದ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹಿಂಜರಿಕೆ ಮನೋಭಾವವನ್ನು ತೊಡೆದು ಹಾಕಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಚನ್ನರಾಯಪಟ್ಟಣ ಲಯನ್ಸ್‌ ಸೇವಾ ಸಂಸ್ಥೆ ಶಾಲೆಯ ಪಟೇತರ ಚಟುವಟಿಗಳಿಗೆ ಸಹಕರಿಸಿದ ಹಿನ್ನೆಲೆಯಲ್ಲಿ ಪದಾಧಿಕಾರಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು.

Share this article