ಹಾವೇರಿ: ಜಿಲ್ಲಾ ಕೇಂದ್ರದ ಪ್ರಮುಖ ರಸ್ತೆಗಳಲ್ಲಿ, ತರಕಾರಿ ಮಾರುಕಟ್ಟೆಗಳಲ್ಲಿ ಬೀದಿಬದಿ ವ್ಯಾಪಾರಸ್ಥರು ರಸ್ತೆ ಅತಿಕ್ರಮಿಸಿಕೊಂಡು ವ್ಯಾಪಾರ ಮಾಡುತ್ತಿರುವುದರಿಂದ ಜನರಿಗೆ, ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು.
ನಗರಸಭೆ ಸಭಾಂಗಣದಲ್ಲಿ ಮಂಗಳವಾರ ಶಶಿಕಲಾ ಮಾಳಗಿ ಅಧ್ಯಕ್ಷೆಯಲ್ಲಿ ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಸಾರ್ವಜನಿಕರು ಈ ಕುರಿತು ಒತ್ತಾಯ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ನಗರಸಭೆ ಅಧ್ಯಕ್ಷರು, ಶಾಸಕರ ಜತೆಗೆ ಚರ್ಚಿಸಿ, ಬೀದಿಬದಿ ವ್ಯಾಪಾರಸ್ಥರಿಗಾಗಿಯೇ ಬಸ್ ನಿಲ್ದಾಣ ಬಳಿಯ ಗೂಗಿಕಟ್ಟಿ, ನಾಗೇಂದ್ರನಮಟ್ಟಿ, ಹುಕ್ಕೇರಿಮಠ ಸೇರಿದಂತೆ ಖಾಲಿ ಜಾಗಗಳಲ್ಲಿ ಜೋನಲ್ ಮಾದರಿಯಲ್ಲಿ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದರು.ನಗರದಲ್ಲಿ ಸಂಚಾರ ದಟ್ಟಣೆ ನಿವಾರಿಸುವ ನಿಟ್ಟಿನಲ್ಲಿ ಕಾಗಿನೆಲೆ ಕ್ರಾಸ್ ಸೇರಿದಂತೆ ಟ್ರಾಫಿಕ್ ಹೆಚ್ಚಾಗಿರುವ ಕಡೆ ಸಿಗ್ನಲ್‌ಗಳನ್ನು ಸ್ಥಾಪಿಸಬೇಕು. ಸುಗಮ ಸಂಚಾರಕ್ಕೆ ಫುಟ್‌ಪಾತ್ ಒತ್ತುವರಿ ತೆರವುಗೊಳಿಸಬೇಕು. ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಅವುಗಳ ವಿರುದ್ಧ ಕಾರ್ಯಾಚರಣೆ ನಡೆಸಿ, ಅಲ್ಲಲ್ಲಿ ಒತ್ತುವರಿ ಆಗಿರುವ ನಗರಸಭೆ ಆಸ್ತಿಗಳನ್ನು ತೆರವುಗೊಳಿಸಿ, ರಕ್ಷಣೆ ಮಾಡುವಂತೆಯೂ ಸಾರ್ವಜನಿಕರು ಸಭೆಯನ್ನು ಒತ್ತಾಯಿಸಿದರು. ಪ್ರಭಾರ ಕಮೀಷನರ್ ಚೆನ್ನಪ್ಪ ಮಾತನಾಡಿ, ಹೆಗ್ಗೇರಿ ಕೆರೆಯಲ್ಲಿ ಬೋಟಿಂಗ್ ವ್ಯವಸ್ಥೆ, ಕಾರಂಜಿ, ಮನರಂಜನೆಗೆ ಉದ್ಯಾನ ಅಭಿವೃದ್ಧಿಪಡಿಸಲು ಅನುದಾನ ಸೇರ್ಪಡೆಗೆ ತಿಳಿಸಿದ ಅವರು, ಅಮೃತ ಯೋಜನೆಯಡಿ ಹೆಗ್ಗೇರಿ ಕೆರೆ ಅಭಿವೃದ್ಧಿ ಮಾಡಲು ಅನುದಾನವಿದೆ ಎಂದು ಮಾಹಿತಿ ನೀಡಿದರು.ರಾಣೇಬೆನ್ನೂರು ಪಾಲಾಗಿದ್ದ ಸುಮಾರು ₹ 4ಕೋಟಿ ವೆಚ್ಚದ ವಿದ್ಯುತ್ ಚಿತಾಗಾರವನ್ನು ಶಾಸಕರು ಹಾವೇರಿಗೆ ತಂದಿದ್ದಾರೆ. ಶೇ.90ರಷ್ಟು ಹಣವನ್ನು ಮರುಪಾವತಿ ಮಾಡಬೇಕಿದೆ. 5 ಕಂತುಗಳಲ್ಲಿ ಏಳು ವರ್ಷದೊಳಗೆ ಹಣವನ್ನು ಪಾವತಿ ಮಾಡಬೇಕು ಎಂದು ಜ್ಯೂನಿಯರ್ ಎಂಜಿನಿಯರ್ ಸಭೆಗೆ ಮಾಹಿತಿ ನೀಡಿದಾಗ, ಸಭಾಧ್ಯಕ್ಷೆ ಶಶಿಕಲಾ ಮಾಳಗಿ ಎಲ್ಲ ಸದಸ್ಯರ ಜತೆಗೆ ಚರ್ಚಿಸಿ ಅಂತಿಮ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.ಆದಾಯದ ಸಂಕ್ಷಿಪ್ತ ವಿವರ: 2024-25ನೇ ಸಾಲಿನಲ್ಲಿ ಡಿ.31ರ ವರೆಗೆ ಮನೆ ಕರ, ನೀರಿನ ಕರ, ಮಳಿಗೆಗಳ ಬಾಡಿಗೆ, ಅಭಿವೃದ್ಧಿ ಕರ, ಸಂತೆ ಶುಲ್ಕ ಹೀಗೆ ವಿವಿಧ ತೆರಿಗೆ ಹಾಗೂ ಯೋಜನೆಗಳಿಂದ ₹ 16.48ಕೋಟಿ ಜಮೆಯಾಗಿದೆ. ಈ ಪೈಕಿ ಹೊಸ ರಸ್ತೆ ನಿರ್ಮಾಣ, ಗಟಾರ ಮತ್ತು ಸಿ.ಡಿ ನಿರ್ಮಾಣ, ಹೊಸ ಪೈಪ್‌ಲೈನ್, ಹೊಸ ಪಂಪಸೆಟ್ ಖರೀದಿ, ರಸ್ತೆ ದುರಸ್ತಿ, ಮೆಟಲಿಂಗ್, ನೀರು ಸರಬರಾಜು ಖರೀದಿ, ಬೀದಿ ದೀಪ ನಿರ್ವಹಣೆ, ಸಾರ್ವಜನಿಕ ಉದ್ಯಾನ ಮತ್ತು ಕೆರೆ ಅಭಿವೃದ್ಧಿ ಹೀಗೆ ವಿವಿಧ ಕೆಲಸ ಕಾರ್ಯಗಳಿಗಾಗಿ ₹ 21.97 ಕೋಟಿ ಖರ್ಚು ಮಾಡಲಾಗಿದೆ.ಅನುದಾನ ನಿರೀಕ್ಷೆ: 2025-26ನೇ ಸಾಲಿನಲ್ಲಿ ಮನೆ ಕರ, ನೀರಿನ ಕರ, ಮಳಿಗೆಗಳ ಬಾಡಿಗೆ, ಅಭಿವೃದ್ಧಿ ಕರ, ಸಂತೆ ಶುಲ್ಕ ಹೀಗೆ ವಿವಿಧ ತೆರಿಗೆ ಹಾಗೂ ಯೋಜನೆಗಳಿಂದ ₹ 31.95 ಕೋಟಿ ಆದಾಯ ನಿರೀಕ್ಷೆಯನ್ನು ಹೊಂದಲಾಗಿದೆ. ಈ ಪೈಕಿ ವಿವಿಧ ಕಾಮಗಾರಿಗಳಿಗೆ ₹ 31.76 ಕೋಟಿ ಹಣ ಖರ್ಚಾಗಬಹುದು ಎಂಬ ಅಂದಾಜು ಪಟ್ಟಿಯನ್ನು ಸಿಬ್ಬಂದಿ ಮಾಹಿತಿ ನೀಡಿದರು. ಸಭೆಯಲ್ಲಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ ಇದ್ದರು.