ಪಾಳು ಬಿದ್ದ ಜೈನ ಬಸದಿ ಸಂರಕ್ಷಣೆಗೆ ಸಾರ್ವಜನಿಕರ ಒತ್ತಾಯ

KannadaprabhaNewsNetwork | Updated : Jun 26 2024, 12:35 AM IST

ಸಾರಾಂಶ

ಬಸವೇಶ್ವರ ಗುಡ್ಡದ ಮೇಲಿರುವ ಪುರಾತನ ಜೈನ ಬಸದಿಯ ಜೀರ್ಣೋದ್ಧಾರ ಕಾಮಗಾರಿ ಸ್ಥಗಿತಗೊಂಡು ಹಲವು ವರ್ಷ ಕಳೆದಿದ್ದು, ಮತ್ತೆ ಬಸದಿ ಅವಸಾನದ ಅಂಚಿಗೆ ತಲುಪಿದೆ.

ಕನ್ನಡಪ್ರಭ ವಾರ್ತೆ ಮುಳಗುಂದ

ಪಟ್ಟಣದ ಬಸವೇಶ್ವರ ಗುಡ್ಡದ ಮೇಲಿರುವ ಪುರಾತನ ಜೈನ ಬಸದಿಯ ಜೀರ್ಣೋದ್ಧಾರ ಕಾಮಗಾರಿ ಸ್ಥಗಿತಗೊಂಡು ಹಲವು ವರ್ಷ ಕಳೆದಿದ್ದು, ಮತ್ತೆ ಬಸದಿ ಅವಸಾನದ ಅಂಚಿಗೆ ತಲುಪಿದೆ.

ಪಟ್ಟಣದಲ್ಲಿ ಐತಿಹಾಸಿಕ ಹಿನ್ನೆಲೆಯುಳ್ಳ ಸಿದ್ದೇಶ್ವರ ದೇವಾಲಯ, ನಯಸೇನ ಕಾಲದ ಜೈನ ಬಸದಿ, ನಗರೇಶ್ವರ, ಹೀಗೆ ಅನೇಕ ಐತಿಹಾಸಿಕ ದೇವಾಲಯಗಳು ಇಲ್ಲಿವೆ. ರಾಷ್ಟ್ರಕೂಟರು ಮುಳಗುಂದ ಆಳುತ್ತಿದ್ದಾಗ ಈ ಊರು ಜೈನ ತೀರ್ಥ ಕ್ಷೇತ್ರವಾಗಿತ್ತು. ಈಗಲೂ ಕೆಲವು ಬಸದಿಗಳು, ಜಿನಾಲಯಗಳು ಇಲ್ಲಿವೆ.

ಬಸದಿಯು ಸುಂದರ ಕೆತ್ತನೆಯ ಕಲಾ ಕುಸುರಿ ಕಲೆಯಿಂದ ಕೂಡಿದೆ. ಕಲ್ಲಿನಲ್ಲಿ ಕೆತ್ತಿದ ಬಾಹುಬಲಿ ಸೇರಿ ಇನ್ನಿತರೆ ಮೂರ್ತಿಗಳನ್ನು ಒಳಗೊಂಡಿವೆ. ಅಲ್ಲದೇ ಇಲ್ಲಿ ಹಲವು ಶಾಸನಗಳು ಇದ್ದು, ಅವುಗಳು ಭಗ್ನಗೊಂಡಿದ್ದು, ಜೀರ್ಣೋದ್ದಾರ ಅರ್ಧಕ್ಕೆ ನಿಂತಿರುವುದರಿಂದ ಬಸದಿ ಮತ್ತುಷ್ಟು ಪಾಳು ಬಿದ್ದಿದೆ. ಇಲ್ಲಿನ ಶಿಲಾಶಾಸನಗಳು, ಸ್ಮಾರಕಗಳು ಕಾಲಗರ್ಭ ಸೇರುವ ಮುನ್ನ ಪುರಾತತ್ವ ಇಲಾಖೆ, ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.

ಇಲ್ಲಿನ ಪಾರ್ಶ್ವನಾಥ ಬಸದಿ ಹಾಗೂ ಚಂದ್ರನಾಥ ಬಸದಿಗಳು 12ನೇ ಶತಮಾನದಲ್ಲಿ ನಿರ್ಮಾಣಗೊಂಡಿದ್ದು, ನೋಡಲು ಬಲು ಆಕರ್ಷಕವಾಗಿದೆ. ಆದರೆ, ಬಸದಿ ಅಕ್ಕಪಕ್ಕದಲ್ಲಿ ಮುಳ್ಳಿನ ಜಾಲಿ ಕಂಟಿಗಳು ಬೆಳೆದು ನಿಂತಿವೆ. ಪುರಾತತ್ವ ಇಲಾಖೆ ಜೈನ್ ಬಸದಿ ಜತೆಗೆ ಇಲ್ಲಿನ ಶುದ್ಧ ನೀರಿನ ಘಟಕದ ಹತ್ತಿರವಿರುವ ದೇವಾಲಯದ ಜೀಣೋದ್ಧಾರಕ್ಕೆ ಮುಂದಾದರೆ ಇತಿಹಾಸ ಅಧ್ಯಯನಕ್ಕೆ ಪೂರಕ ವಾತಾವಾರಣ ನಿರ್ಮಾಣವಾಗುತ್ತದೆ ಎಂದರು.

ಜೈನ ಬಸದಿ ಜೀರ್ಣೋದ್ಧಾರ ಕಾರ್ಯ ಅಪೂರ್ಣಗೊಂಡು ಪಾಳು ಬಿದ್ದಿದ್ದರಿಂದ ಈಗ ಸದ್ಯ ಬಸದಿ ಅಕ್ರಮ ಚಟುವಟಿಕೆಗಳ ತಾಣವಾಗಿದೆ. ಇಲ್ಲಿ ಇಸ್ಪೀಟ್‌ ಆಡಿ ಎಲ್ಲೆಂದರಲ್ಲಿ ಇಸ್ಪೀಟ್‌ ಕಾರ್ಡ್‌ಗಳನ್ನ ಬಿಸಾಡಲಾಗಿದೆ. ಇಲ್ಲಿರುವ ಶಿಲಾಶಾಸನಗಳ ಮೇಲೆ ಗುಟ್ಕಾ ಹಾಕಿಕೊಂಡ ಉಗುಳಿದ್ದಾರೆ. ಕುಡಿದು ಸಾರಾಯಿ ಪಾಕೇಟ್‌ಗಳನ್ನ ಬಿಸಾಡಿದ್ದಾರೆ. ಅಧಿಕಾರಿಗಲು ಇತ್ತ ಗಮನ ಹರಿಸಿ ಐತಿಹಾಸಿಕ ಹಿನ್ನೆಲೆಯುಳ್ಳ ಜೈನ ಬಸದಿಯ ಜೀರ್ಣೋದ್ಧಾರ ಕಾರ್ಯವನ್ನು ಪೂರ್ಣಗೊಳಿಸಿ ನಮ್ಮ ಐತಿಹಾಸಿಕ ಸಂಸ್ಕೃತಿ, ಪರಂಪರೆ ಉಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜನತೆ ಆಗ್ರಹಿಸಿದ್ದಾರೆ.

ಗಮನಹರಿಸಲಿ

2017ರಲ್ಲಿ ಗದಗ ಜಿಲ್ಲಾಧಿಕಾರಿಯಾಗಿದ್ದ ಮನೋಜ್ ಜೈನ್ ಅವರು ಬಸದಿಗೆ ಭೇಟಿ ನೀಡಿ, ಪರಿಶೀಲಿಸಿ ಇದರ ಜೀರ್ಣೋದ್ಧಾರ ಕೈಗೊಳ್ಳುವಂತೆ ಪ್ರಾಚ್ಯುವಸ್ತು ಇಲಾಖೆಗೆ ಪತ್ರವನ್ನು ಬರೆದಿದ್ದರು. ಇದು ವರೆಗೂ ಅಭಿವೃದ್ಧಿ ಆಗಿಲ್ಲ. ಅಧಿಕಾರಿಗಳು, ಪ್ರಾಚ್ಯವಸ್ತು ಇಲಾಖೆ ಇತ್ತ ಗಮನ ಹರಿಸಿ ದೇವಾಲಯ ನಶಿಸಿ ಹೋಗುವ ಮೊದಲೆ ಉಳಿಸಿ ಕೊಳ್ಳಲು ಮುಂದಾಗಬೇಕು.

ವೀರೇಂದ್ರ ಹುಲಿ, ಜೈನ ಸಮುದಾಯದ ಯುವಕ.

Share this article