ಕಲ್ಕೆಳೆ ಬಳಿ ಅವೈಜ್ಞಾನಿಕ ಅಂಡರ್‌ಪಾಸ್‌ಗೆ ಸಾರ್ವಜನಿಕರ ಆಕ್ಷೇಪ । 3-4 ವರ್ಷದಿಂದ ನಡೆಯುತ್ತಿರುವ ಬೈಪಾಸ್ ಕಾಮಗಾರಿ
ಕನ್ನಡಪ್ರಭ ವಾರ್ತೆ ತಿಪಟೂರುತಾಲೂಕಿನ ಹುಚ್ಚಗೊಂಡನಹಳ್ಳಿಯಿಂದ ಮಡೆನೂರುವರೆಗೆ ಎನ್.ಎಚ್.206 ರಸ್ತೆಗೆ ನಗರದಿಂದ ಹೊರಗಡೆ ಬೈಪಾಸ್ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ನಗರದ ಹಳೆಪಾಳ್ಯ ಬಡಾವಣೆ ಹತ್ತಿರ ಕಲ್ಕೆಳೆ ಬಳಿ ಅವೈಜ್ಞಾನಿಕ ಅಂಡರ್‌ಪಾಸ್ ನಿರ್ಮಾಣ ಮಾಡಲಾಗಿದ್ದು, ಮಳೆ ಬಂದರೆ ವಿಪರೀತ ನೀರು ಶೇಖರಣೆಗೊಂಡು ಇಲ್ಲಿ ಜನರ ಓಡಾಟಕ್ಕೆ ಕಷ್ಟವಾಗುತ್ತಿದೆ.
ನಗರದ ಒಳಗಡೆಯ ಹೆದ್ದಾರಿಯಲ್ಲಿ ಓಡಾಡುವ ಭಾರಿ ವಾಹನಗಳ ದಟ್ಟಣೆ ಕಡಿಮೆ ಮಾಡಲು ಹೊರಗಡೆ ಎನ್.ಎಚ್.206ರ ರಸ್ತೆಗೆ ಬೈಪಾಸ್ ಕಾಮಗಾರಿ ಕಳೆದ ಮೂರ‍್ನಾಲ್ಕು ವರ್ಷಗಳಿಂದ ನಡೆಯುತ್ತಿದೆ. ಬೆಂಗಳೂರಿನಿಂದ ಹೊನ್ನಾವರ ಸಂಪರ್ಕಿಸುವ ಎನ್.ಎಚ್. ರಸ್ತೆ ಇದಾಗಿದೆ. ನಿತ್ಯ ಶಾಲಾ-ಕಾಲೇಜುಗಳು ವಿದ್ಯಾರ್ಥಿಗಳು ಹಾಗೂ ನೂರಾರು ವಾಹನಗಳು ಕಲ್ಕೆಳೆ ಅಂಡರ್‌ಪಾಸ್ ಬಳಸಿಕೊಂಡು ಓಡಾಡಬೇಕಿದೆ.ಬೈಪಾಸ್‌ಗೆ ಹೊಂದಿಕೊಂಡಂತೆ ಹಳೆಪಾಳ್ಯ, ಕಲ್ಕೆಳೆ, ಗಾಯತ್ರಿನಗರ, ಆದಿಲಕ್ಷ್ಮಿನಗರ, ಗೆದ್ಲೇಹಳ್ಳಿ, ಬಿಳಿಕಲ್ ಬಡಾವಣೆ, ಕೆಂಚರಾಯನಗರ ಗ್ರಾಮಸ್ಥರು, ವಿದ್ಯಾರ್ಥಿಗಳು, ರೈತರು ಹೊಲಗಳಿಗೆ ಹಾಗೂ ನಗರಕ್ಕೆ ಬಂದು ಹೋಗಲು ಇದೇ ಅಂಡರ್‌ಪಾಸ್ ಅವಲಂಬಿಸಿದ್ದಾರೆ.
ಬೈಪಾಸ್ ಪಕ್ಕದಲ್ಲಿ ಹಲವಾರು ತೆಂಗಿನ ಕಾಯಿ ಫ್ಯಾಕ್ಟರಿಗಳಿದ್ದು, ಇಲ್ಲಿಗೆ ನೂರಾರು ಸಂಖ್ಯೆಯಲ್ಲಿ ಕೂಲಿ ಕಾರ್ಮಿಕರು ಕೆಲಸಕ್ಕೆ ಬರುತ್ತಾರೆ. ಕೋಟ್ಯಂತರ ರು. ಖರ್ಚು ಮಾಡಿ ನಿರ್ಮಾಣವಾಗುತ್ತಿರುವ ಈ ಅವೈಜ್ಞಾನಿಕ ಅಂಡರ್‌ಪಾಸ್ ಜನರಿಗೆ ಸ್ವಲ್ಪವೂ ಅನುಕೂಲವಾಗುತ್ತಿಲ್ಲ. ಈ ರಸ್ತೆಯಲ್ಲಿ ಬಾರಿ ವಾಹನಗಳು ಹೆಚ್ಚಾಗಿ ಓಡಾಡುವ ಕಾರಣ ಶಾಲಾ-ಕಾಲೇಜು ವಿದ್ಯಾರ್ಥಿಗಳು ಅಥವಾ ಪಾದಚಾರಿಗಳು ರಸ್ತೆ ದಾಟುವ ಸಂದರ್ಭದಲ್ಲಿ ಅವಘಡ ಸಂಭವಿಸಿದರೆ ಯಾರು ಹೊಣೆ. ಅಲ್ಲದೆ ಇಲ್ಲಿ ರಸ್ತೆ ಕಾಮಗಾರಿಯೂ ನಡೆಯುತ್ತಿದ್ದು ಜಲ್ಲಿ, ಸಿಮೆಂಟ್, ಡಾಂಬರು ತುಂಬಿಕೊಂಡು ಟಿಪ್ಪರ್ ಲಾರಿ, ಟ್ರ್ಯಾಕ್ಟರ್‌ಗಳು ಓಡಾಡುತ್ತಲೇ ಇರುತ್ತವೆ. ಸಾರ್ವಜನಿಕರ ಅನುಕೂಲಕ್ಕಾಗಿ ಸಾಕಷ್ಟು ಹಣ ಖರ್ಚು ಮಾಡಿ ನಿರ್ಮಿಸಿರುವ ಅಂಡರ್‌ಪಾಸ್ ಪ್ರಯೋಜನಕ್ಕೆ ಬಾರದಂತಾಗಿದೆ. ಹಾಗಾಗಿ ಈ ಅವೈಜ್ಞಾನಿಕ ಅಂಡರ್ ಪಾಸ್ ಬದಲು ಮೇಲ್ಸೆತುವೆ ನಿರ್ಮಿಸಿಕೊಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.ಕಲ್ಕೆಳೆ ಬಳಿ ನಿರ್ಮಿಸುತ್ತಿರುವ ಅವೈಜ್ಞಾನಿಕ ಅಂಡರ್‌ಪಾಸ್ ಹಣ ಖರ್ಚು ಮಾಡಲು ನಿರ್ಮಾಣವಾಗಿದೆ. ಸಾರ್ವಜನಿಕರ ಹಾಗೂ ವಾಹನಗಳ ಓಡಾಟಕ್ಕೆ ಕಷ್ಟವಾಗಿದೆ. ಮಳೆ ಬಂದರೆ ಓಡಾಟಕ್ಕೆ ತೊಂದರೆಯಾಗಿದೆ. ಹಾಗಾಗಿ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಮೇಲ್ಸೇತುವೆ ನಿರ್ಮಾಣ ಮಾಡಬೇಕು.
-ಗಿರೀಶ್, ನಿವಾಸಿ ಹಳೆಪಾಳ್ಯ.