ಸೊರಬದಲ್ಲಿ ಬೀಡಾಡಿ ದನಗಳಿಂದ ಸಾರ್ವಜನಿಕರು ಸುಸ್ತು

KannadaprabhaNewsNetwork |  
Published : Jul 21, 2025, 12:00 AM IST
ಫೋಟೊ:೨೦ಕೆಪಿಸೊರಬ-೦೧ : ಸೊರಬ ಪಟ್ಟಣದ ಶ್ರೀ ರಂಗನಾಥಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಮಲಗಿರುವ ಬಿಡಾಡಿ ದನಗಳು. | Kannada Prabha

ಸಾರಾಂಶ

ಪಟ್ಟಣದಲ್ಲಿ ಬೀಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ಅವುಗಳ ಉಪಟಳದಿಂದ ಸಾರ್ವಜನಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಸಂಚರಿಸಲು ಭಯ ಪಡುವ ವಾತಾವರಣದಿಂದ ಬೇಸತ್ತಿದ್ದಾರೆ.

ಎಚ್.ಕೆ.ಬಿ. ಸ್ವಾಮಿ

ಕನ್ನಡಪ್ರಭ ವಾರ್ತೆ ಸೊರಬ

ಪಟ್ಟಣದಲ್ಲಿ ಬೀಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ಅವುಗಳ ಉಪಟಳದಿಂದ ಸಾರ್ವಜನಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಸಂಚರಿಸಲು ಭಯ ಪಡುವ ವಾತಾವರಣದಿಂದ ಬೇಸತ್ತಿದ್ದಾರೆ.

ಎಲ್ಲೆಂದರಲ್ಲಿ ತಿರುಗಾಡುವ ದನಗಳು:

ಹಗಲು ರಾತ್ರಿ ಎನ್ನದೇ ಬೀಡಾಡಿ ದನಗಳು ಬಸ್ ನಿಲ್ದಾಣ, ಪುರಸಭಾ ಮುಂಭಾಗದ ವೃತ್ತ, ಮುಖ್ಯ ರಸ್ತೆ, ಚಿಕ್ಕಪೇಟೆ, ಕಾನುಕೇರಿ, ಶ್ರೀ ರಂಗನಾಥ ದೇವಸ್ಥಾನ ಸಮೀಪ, ಶ್ರೀ ವಿನಾಯಕ ದೇವಸ್ಥಾನದ ಮುಂಭಾಗ ಸೇರಿದಂತೆ ಪಟ್ಟಣದ ಹೊರವಲಯದ ಹೊಸಪೇಟೆ ಬಡಾವಣೆಯಲ್ಲಿ ಎಲ್ಲೆಂದರಲ್ಲಿ ಬೀಡಾಡಿ ದನಗಳು ತಿರುಗಾಟ ನಡೆಸುತ್ತವೆ. ಇದರಿಂದ ವಾಹನ ಸವಾರರು ಜೀವ ಭಯದೊಂದಿಗೆ ಸಂಚರಿಸಬೇಕಿದೆ.

ಅಲ್ಲದೇ ಶಾಲಾ ಕಾಲೇಜು ವಿದ್ಯಾರ್ಥಿಗಳು ರಸ್ತೆಯಲ್ಲಿ ತೆರಳುವಾಗ ಗುಮ್ಮುವುದು ಮತ್ತು ಬೆನ್ನಟ್ಟುವುದು ಸಹಜವಾಗಿದೆ. ಇದರಿಂದ ವಿದ್ಯಾರ್ಥಿಗಳು ಭಯದಲ್ಲಿಯೇ ಶಾಲಾ-ಕಾಲೇಜುಗಳಿಗೆ ತೆರಳಬೇಕಿದೆ. ಈಗಾಗಲೇ ಬೀಡಾಡಿ ದನಗಳ ಉಪಟಳದಿಂದ ಬೈಕ್ ಅಪಘಾತಗಳು ಸಂಭವಿಸುತ್ತಿವೆ.

ಮಾಲೀಕರು ಯಾರು?

ಜಾನುವಾರು ಸಾಕಿರುವವರು ನಿಯಮಗಳನ್ನು ಗಾಳಿಗೆ ತೂರಿ, ದನ, ಕರುಗಳನ್ನು ಎಲ್ಲೆಂದರಲ್ಲಿ ಮೇಯಲು ಬಿಡುತ್ತಿದ್ದಾರೆ. ಬಸ್ ನಿಲ್ದಾಣಕ್ಕೆ ಆಗಮಿಸುವ ಪ್ರಾಣಿಗಳು ಯಾರ ನಿಯಂತ್ರಣಕ್ಕೂ ಸಿಗುತ್ತಿಲ್ಲ. ಅಂಗಡಿ-ಮಳಿಗೆಗಳಲ್ಲಿ ಸಿಕ್ಕ ವಸ್ತುಗಳನ್ನು ತಿನ್ನುತ್ತಾ ಓಡಾಡುತ್ತಿರುವ ಬಿಡಾಡಿ ದನಗಳು ಬಸ್ ನಿಲ್ದಾಣ, ಕೆಲ ದೇವಸ್ಥಾನ ಹಾಗೂ ಮುಖ್ಯ ರಸ್ತೆಯಲ್ಲಿಯೇ ಮಲಗುತ್ತಿವೆ. ಇದರಿಂದ ರಾತ್ರಿ ವೇಳೆ ಸಂಚರಿಸುವವರಿಗೂ ತೊಂದರೆಯಾಗುತ್ತಿದೆ.

ಪುರಸಭೆ ಮುಖ್ಯಾಧಿಕಾರಿ ಮೌನ!

ಕಳೆದ ಹತ್ತು, ಹದಿನೈದು ವರ್ಷಗಳ ಹಿಂದೆ ಪಟ್ಟಣದ ಪುರಸಭೆ ಹಿಂಭಾಗದ ಅಂಬೇಡ್ಕರ್ ಬಡಾವಣೆಯಲ್ಲಿ ದನದ ದೊಡ್ಡಿಯೊಂದು ಕಾರ್ಯನಿರ್ವಹಿಸುತ್ತಿತ್ತು. ನಂತರದ ದಿನಗಳಲ್ಲಿ ಪಾಳು ಬಿದ್ದ ದೊಡ್ಡಿಯನ್ನು ತೆರವುಗೊಳಿಸಿ, ಸಮುದಾಯ ಭವನ ನಿರ್ಮಾಣವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಬೀಡಾಡಿ ದನಗಳ ಹಾವಳಿ ಹೆಚ್ಚಾದ ಸಂದರ್ಭ ಅಂದಿನ ಮುಖ್ಯಾಧಿಕಾರಿ ತಾತ್ಕಾಲಿಕವಾಗಿ ಪುರಸಭಾ ಹಿಂಭಾಗದಲ್ಲಿ ದನದ ದೊಡ್ಡಿಯನ್ನು ನಿರ್ಮಿಸಿದ್ದರು. ಆದರೆ, ಪ್ರಸ್ತುತ ಮುಖ್ಯಾಧಿಕಾರಿ ಇದೆಲ್ಲದರ ಅರಿವಿದ್ದರೂ, ಜಾಣ ಕುರುಡುತನದಿಂದ ವರ್ತಿಸುತ್ತಿದ್ದಾರೆ. ಚುನಾಯಿತ ಜನಪ್ರತಿನಿಧಿಗಳು ಈ ಬಗ್ಗೆ ಯಾವುದೇ ಗಮನ ಹರಿಸುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

ನಿತ್ಯ ಅಂಗಡಿ ಮುಂಗಟ್ಟುಗಳನ್ನು ತೆರೆಯುವುದಕ್ಕೂ ಮುಂಚೆ ಅಂಗಡಿಗಳ ಮುಂಭಾಗದಲ್ಲಿ ಬೀಡಾಡಿ ದನಗಳ ಸಗಣಿಯನ್ನು ಸ್ವಚ್ಛಗೊಳಿಸುವುದೇ ಮೊದಲ ಕೆಲಸವಾಗಿದೆ. ಹಲವು ಬಾರಿ ಸಂಬಂಧಪಟ್ಟ ಪುರಸಭಾ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ವರ್ತಕರು ಆರೋಪಿಸಿದ್ದಾರೆ.

ಗೋಶಾಲೆಗೆ ರವಾನಿಸಿ :

ಪಟ್ಟಣದಲ್ಲಿ ಮಿತಿ ಮೀರಿರುವ ಬಿಡಾಡಿ ದನಗಳ ಹಾವಳಿಗೆ ತಡೆ ಹಾಕುವಲ್ಲಿ ಸ್ಥಳೀಯ ಪಪಂ ಸಂಪೂರ್ಣ ವಿಫಲವಾಗಿದೆ. ವಿದ್ಯಾರ್ಥಿಗಳು ಶಾಲಾ-ಕಾಲೇಜ್‌ಗಳಿಗೆ ತೆರಳಲು ಜೀವ ಕೈಯಲ್ಲಿ ಹಿಡಿದಿಟ್ಟುಕೊಳ್ಳುವಂತಾಗಿದ್ದು, ಬೀಡಾಡಿ ದನಗಳ ಹಾವಳಿ ತಡೆಗಟ್ಟಲು ಸಮೀಪದ ಗೋಶಾಲೆಗಳಿಗೆ ರವಾನಿಸಬೇಕು ಎಂದು ಜನರು ಒತ್ತಾಯಿಸಿದ್ದಾರೆ.

ಇತ್ತೀಚೆಗೆ ಎಪಿಎಂಸಿ ಸಮೀಪದಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ಮೂರು ಜಾನುವಾರು ಮೃತಪಟ್ಟಿವೆ. ಒಂದು ಕರು ಗಾಯಗೊಂಡಿದೆ. ರಾತ್ರಿ ಸಮಯದಲ್ಲಿ ಎಲ್ಲೆಂದರಲ್ಲಿ ರಸ್ತೆಯ ಮೇಲೆ ಮಲಗುತ್ತವೆ. ಈ ಬಗ್ಗೆ ಹಲವು ಬಾರಿ ಮನವಿ ಸಹ ನೀಡಲಾಗಿದೆ. ಜಾನುವಾರು ಮಾಲೀಕರಿಗೆ ಎಚ್ಚರಿಕೆ ನೀಡಿ, ಮನೆಯಲ್ಲಿ ಕಟ್ಟಿ ಹಾಕಲು ಪುರಸಭೆ ಅಧಿಕಾರಿ ಆದೇಶ ನೀಡಬೇಕು.

ಜೆ.ಎಸ್. ಚಿದಾನಂದಗೌಡ, ಗೋ ಸಂರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ

ಶೀಘ್ರದಲ್ಲಿಯೇ ಜಾನುವಾರು ಮಾಲಿಕರಿಗೆ ನೋಟಿಸ್ ನೀಡಲಾಗುವುದು. ಮಾಲಿಕರಿಲ್ಲದ ಜಾನುವಾರನ್ನು ಗೋ ಶಾಲೆಗೆ ಕಳುಹಿಸಲು ಕ್ರಮ ವಹಿಸಲಾಗುವುದು.

ಎಚ್.ವಿ. ಚಂದನ್, ಮುಖ್ಯಾಧಿಕಾರಿ, ಪುರಸಭೆ, ಸೊರಬ.

PREV

Latest Stories

ದಾವಣಗೆರೆಯಲ್ಲಿ ವೀರಶೈವ ಪಂಚಪೀಠಗಳ ಸಮಾಗಮ
ಹವ್ಯಕ ಪ್ರತಿಷ್ಠಾನ ವಾರ್ಷಿಕೋತ್ಸವ ಸಂಪನ್ನ
5 ಪಾಲಿಕೆ ರಚನೆಗೆ ಆಕ್ಷೇಪಣೆ ಸಲ್ಲಿಸಲು ಹಕ್ಕಿದೆ: ಡಿಕೆಶಿ