ಗೋಕರ್ಣ: ಪ್ರವಾಸಿ ತಾಣದಲ್ಲಿ ಪ್ರವಾಸಿ ವಾಹನಗಳ ನಿಲುಗಡೆ ಸವಾಲಾಗಿ ಪರಿಣಮಿಸಿದ್ದು, ಇದರ ಪರಿಣಾಮ ವಾಹನ ದಟ್ಟಣೆ ಹೆಚ್ಚಾಗಿ ಸಂಚಾರಕ್ಕೆ ತೊಡಕಾಗುತ್ತಿದೆ.
ಹೀಗೆ ಯಾವ ದಿಕ್ಕಿನಲ್ಲಿ ಹೋದರೂ ಮಹಾನಗರದಂತೆ ರಸ್ತೆಯಲ್ಲೇ ಕಾಲ ಕಳೆಯುವಂತಾಗಿದೆ.
ಸಮಸ್ಯೆ ಏನು? ಏನಾಗಬೇಕು?: ಮೇಲಿನಕೇರಿಯಿಂದ ಮುಖ್ಯ ಕಡಲತೀರಕ್ಕೆ ಸಾಗುವ ಮಾರ್ಗದಲ್ಲಿ ರಸ್ತೆಯನ್ನು ಆಕ್ರಮಿಸಿರುವ ಅಂಗಡಿ ಮುಂಗಟ್ಟನ್ನು ತೆರವುಗೊಳಿಸಿ ವಾಹನ ಸಂಚರಿಸುವಾಗ ಪಾದಚಾರಿಗಳಾದರೂ ಸಾಗಲು ಅನುವಾಗುವಂತೆ ಮಾಡಬೇಕಿದೆ. ಇನ್ನೂ ಹೆಚ್ಚಿನ ಜನರು ಬರುವ ವೇಳೆ ಸ್ಥಳೀಯ ಆಡಳಿತ ಅಥವಾ ಜಿಲ್ಲಾಡಳಿತವರು ಹೆಚ್ಚಿನ ಪೊಲೀಸ್ ಅಥವಾ ಹೋಮ್ ಗಾರ್ಡ್ ನಿಯೋಜನೆಗೊಳಿಸಿ ಮೇಲಿನಕೇರಿಯಿಂದ ಬಂಗ್ಲೆಗುಡ್ಡಕ್ಕೆ ಪ್ರವಾಸಿ ವಾಹನ ಕಳುಹಿಸಿ, ಅಲ್ಲಿ ನಿಲುಗಡೆಗೊಳಿಸುವ ವ್ಯವಸ್ಥೆ ನಿರಂತರವಾಗಿ ಮಾಡಬೇಕಿದೆ.ಶುಕ್ರವಾರ ಪೊಲೀಸರು ಇದೇ ಕ್ರಮ ಕೈಗೊಂಡ ಕಾರಣ ಸಂಜೆ ವೇಳೆ ತುಸು ನಿಯಂತ್ರಣಕ್ಕೆ ಬಂದಿತ್ತು. ಇನ್ನು ಜಾತ್ರಾ ಅವಧಿಯಲ್ಲಿ ಪಡೆದಂತೆ ಭದ್ರಕಾಳಿ ಕಾಲೇಜು ಮೈದಾನ ಅಥವಾ ಇನ್ನಿತರ ಖಾಸಗಿ ಜಾಗ ಪಡೆದು ವಾಹನ ನಿಲುಗಡೆಗೆ ಅವಕಾಶ ನೀಡಿ, ಪೇಟೆಯಲ್ಲಿ ಜನರು ನಡೆದುಕೊಂಡು ಹೋಗುವಂತೆ ಮಾಡಬೇಕಿದೆ. ಏಕಮುಖ ಸಂಚಾರ ನಿಯಮ ಪಾಲನೆಗೆ ಸರಿಯಾದ ಮಾರ್ಗಸೂಚಕ ಫಲಕ ಅಳವಡಿಸಬೇಕಿದೆ.
ಅದರಲ್ಲಿಯೋ ಇಲ್ಲಿನ ವೆಂಕಟ್ರಮಣ ದೇವಾಲಯದಿಂದ ಆಡುಕಟ್ಟೆ ಶಾಲೆಯ ಮಾರ್ಗದಲ್ಲಿ ಏಕಮುಖ ಸಂಚಾರ ನಿಯಮ ಮುರಿದು ವಾಹನಗಳ ಸಾಗುತ್ತಿದ್ದು, ಇದರ ನಿಯಂತ್ರಣಕ್ಕೆ ಸಿಬ್ಬಂದಿ ನಿಯೋಜನೆ ಅಥವಾ ಮಾಹಿತಿ ಫಲಕ ಅಳವಡಿಸಬೇಕಿದೆ. ಅದರಂತೆ ರಥಬೀದಿಯಿಂದ ಬಸ್ ನಿಲ್ದಾಣ ಸಾಗುವ ಮಾರ್ಗದಲ್ಲಿ ಸಹ ಸಂಚಾರ ನಿಯಮ ಪಾಲನೆ ಕಡ್ಡಾಯಗೊಳಿಸಬೇಕಿದೆ. ಈ ಸಮಸ್ಯೆ ಪ್ರತಿ ಬಾರಿ ಪುನಾವರ್ತನೆಯಾಗುತ್ತಿದ್ದು, ಈ ಬಗ್ಗೆ ಗ್ರಾಮ ಸಭೆ, ಜನಪ್ರತಿನಿಧಿಗಳ ಬಳಿ ಜನರು ನಿರಂತರವಾಗಿ ವಿವರಿಸುತ್ತಿದ್ದರೂ ಯಾವುದೇ ಕ್ರಮತೆಗೆದುಕೊಳ್ಳದಿರುವುದು ಪ್ರಸ್ತುತ ನಡೆಯುತ್ತಿರುವ ಆವಾಂತರಕ್ಕೆ ಕಾರಣವಾಗಿದೆ.