ಗೌರಿ ಗಣೇಶ ಮೂರ್ತಿ, ಹಣ್ಣುಗಳ ಖರೀದಿಗೆ ಮುಗಿಬಿದ್ದ ಜನತೆ

KannadaprabhaNewsNetwork | Published : Sep 7, 2024 1:40 AM

ಸಾರಾಂಶ

ಗಣೇಶನನ್ನು ಖರೀದಿಸುತ್ತಿರುವ ಸಾರ್ವಜನಿಕರು.ತನ್ನ ಮಗುವಿನೊಂದಿಗೆ ನೋಟದಲ್ಲೇ ಹಬ್ಬವನ್ನು ಕಣ್ತುಂಬಿಕೊಳ್ಳುತ್ತಿರುವ ಅಲೆಮಾರಿ ಮಹಿಳೆ.

ಕನ್ನಡಪ್ರಭ ವಾರ್ತೆ ಮೈಸೂರುಗೌರಿ- ಗಣೇಶ ಹಬ್ಬದ ಅಂಗವಾಗಿ ಸಾರ್ವಜನಿಕರು ಬಟ್ಟೆ, ಹಣ್ಣು, ಗೌರಿ, ಗಣೇಶನ ಖರೀದಿಗೆ ಮುಗಿಬಿದ್ದರು.

ಸಡಗರ ಸಂಭ್ರಮದೊಡನೆ ಹಬ್ಬಕ್ಕೆ ಅಗತ್ಯವಿರುವ ಗಣೇಶ- ಗೌರಿ ವಿಗ್ರಹ ಖರೀದಿ, ಹೂವು, ಹಣ್ಣು, ಗರಿಕೆ, ಪೂಜಾ ಸಾಮಗ್ರಿ ಖರೀದಿಯಲ್ಲಿ ಸಾರ್ವಜನಿಕರು ದಿನಕಳೆದರು.

ಒಂದೆಡೆ ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆಯು ವಸ್ತುಗಳ ಖರೀದಿ ಜೋರಾದರೆ, ಮತ್ತೊಂದು ಕಡೆ ನಗರದ ಹಲವು ಬಡಾವಣೆಯ ರಸ್ತೆ ರಸ್ತೆಗಳಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಲು ಯುವಕರು, ಸಂಘ, ಸಂಸ್ಥೆಗಳ ಮುಖಂಡರು ಸಿದ್ಧತೆಯಲ್ಲಿ ತೊಡಗಿದ್ದರು.

ಕುಂಬಾರಗೇರಿ, ದೇವರಾಜ ಮಾರುಕಟ್ಟೆ, ಗಾಂಧಿಚೌಕ, ಚಿಕ್ಕಗಡಿಯಾರ ವೃತ್ತ, ಅಗ್ರಹಾರ ಸೇರಿದಂತೆ ಅನೇಕ ಕಡೆಗಳಲ್ಲಿ ಗಣೇಶನ ವಿಗ್ರಹ ಮಾರಾಟ ಜೋರಾಗಿತ್ತು. ವಿವಿಧ ಬಣ್ಣದ ಮತ್ತು ವಿವಿಧ ಆಯಾಮದಲ್ಲಿರುವ ಬೃಹತ್ಗಾತ್ರದ ಗಣಪತಿಯನ್ನು ಸಾರ್ವಜನಿಕರು ಕೊಂಡೊಯ್ದರು.

ಅಯೋಧ್ಯೆ ರಾಮ, ಸೌಮ್ಯ ಸ್ವಭಾವದ ಶಿವಲಿಂಗ ಗಣಪ, ರಾಜಸ್ತಾನಿ ಗಣಪ, ತಾಂಡವ ನೃತ್ಯದ ಕಾಲಭೈರವ ಗಣಪ, ಬೆಣ್ಣೆ ಗಣಪ, ಒಡಿಶಾ ಶೈಲಿಯ ಗಣಪ, ಲಾಲ್ ಬಾಗ್ ರಾಜ ಹೀಗೆ ನಾನಾ ಬಗಯ ಗಣಪತಿಯನ್ನು ಮಾರಾಟ ಮಾಡಲಾಯಿತು.

ಇವುಗಳ ಜತೆಗೆ ಪರಿಸರ ಸ್ನೇಹಿಯಾದ ಗೌರಿ ಮತ್ತು ಗಣೇಶನ ಮೂರ್ತಿಯನ್ನು ಹೆಚ್ಚಾಗಿ ಮಾರಾಟ ಮಾಡಲಾಗುತ್ತಿತ್ತು.

ದೇವರಾಜ ಮಾರುಕಟ್ಟೆ ಸೇರಿದಂತೆ ನಗರದ ಬಹುತೇಕ ಕಡೆಗಳಲ್ಲಿ ಜನಜಂಗುಳಿ ಕಂಡುಬಂತು. ಹೂವು- ಹಣ್ಣು, ಬಾಳೆಕಂದು, ಗರಿಕೆ ಮಾರಾಟ ಭರ್ಜರಿಯಾಗಿತ್ತು. ಬಾಗಿನ, ಗರಿಕೆ, ಬೇಲದ ಹಣ್ಣು, ಎಕ್ಕದ ಹೂವಿನ ಹಾರಕ್ಕೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಉಂಟಾಯಿತು. ಇದರೊಡನೆ ಬಾಳೆಕಂದು, ಹೂವಿನ ಹಾರ ಇತ್ಯಾದಿ ಪೂಜಾ ಸಾಮಗ್ರಿಗಳನ್ನು ಜನರು ವಿಶೇಷವಾಗಿ ಖರೀದಿಸಿದರು.

ಕೆಲ ದಿನಗಳ ಹಿಂದಷ್ಟೆ ಕಡಿಮೆ ಇದ್ದ ಅಗತ್ಯ ವಸ್ತುಗಳ ಬೆಲೆ ಹಬ್ಬದ ಹಿನ್ನೆಲೆಯಲ್ಲಿ ಏರಿಕೆಯಾದವು. ಏಲಕ್ಕಿ ಬಾಳೆ ಕೆಜಿಗೆ 100 ರೂ. ನಿಂದ 120 ರೂ.ಗೆ ಮಾರಾಟವಾಯಿತು. ಸೇಬು, ಮೂಸಂಬಿ, ದಾಳಿಂಬೆ, ಕಿತ್ತಳೆ, ಪೈನಾಪಲ್, ದ್ರಾಕ್ಷಿ, ಸೀತಾಫಲ ಮುಂತಾದ ಹಣ್ಣುಗಳ ಬೆಲೆಯೂ ಹೆಚ್ಚಾಗಿತ್ತು.

ಅಂತೆಯೇ ಹೂವಿನ ಬೆಲೆಯೂ ವಿಪರೀತವಾಗಿತ್ತು. ಸೇವಂತಿಗೆ ಮಾರಿಗೆ 100 ರೂ. ಮಲ್ಲಿಗೆ, ಕಾಕಡ, ಮರಲೆ ಮುಂತಾದ ಹೂವುಗಳನ್ನು ಮೊಳದ ಲೆಕ್ಕದಲ್ಲಿ ಮಾರಲಾಯಿತು.

Share this article