ಹಿರಿಯೂರು: ನಗರವನ್ನು ಅಭಿವೃದ್ಧಿ ಪಡಿಸುವ ಜೊತೆಗೆ ಸ್ವಚ್ಛತೆ ಮತ್ತು ಸೌಂದರೀಕರಣಗೊಳಿಸುವುದು ಅಗತ್ಯವಾಗಿದೆ. ಇದು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಂದ ಮಾತ್ರ ಸಾಧ್ಯವಿಲ್ಲ. ಸಾರ್ವಜನಿಕರ ಸಹಭಾಗಿತ್ವವೂ ಅಗತ್ಯವೆಂದು ಪೌರಾಯುಕ್ತ ಎ.ವಾಸಿಂ ಹೇಳಿದರು.
ಗಾಂಧಿ ವೃತ್ತದಲ್ಲಿ ವಾಹನಗಳ ದಟ್ಟಣೆ ಹಿನ್ನೆಲೆಯಲ್ಲಿ ತಳ್ಳುವ ಗಾಡಿಗಳನ್ನು ಬೇರೆ ಕಡೆಗೆ ಸ್ಥಳಾಂತರಿಸಿ ಸಾರ್ವಜನಿಕರು, ಬೈಕ್ ವಾಹನಗಳು ಸುಗಮವಾಗಿ ಸಂಚರಿಸಲು ಅನುವು ಮಾಡಿಕೊಡಲಾಗುವುದು. ಮನೆಯಲ್ಲಿ ಹೇಗೆ ಸ್ವಚ್ಛತೆ ಕಾಪಾಡುತ್ತೆವೋ ಹಾಗೇಯೇ ನಗರ ಹಾಗೂ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಡಲು ಮನಸು ಮಾಡಬೇಕು ಎಂದರು.
ಮನೆ ಹಾಗೂ ಅಂಗಡಿಗಳಲ್ಲಿ ಉತ್ಪತ್ತಿಯಾಗುವ ಹಸಿಕಸ ಹಾಗೂ ಒಣ ಕಸವನ್ನು ವಿಂಗಡನೆ ಮಾಡಿ ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡಿ ನಗರ ಸೌಂದರ್ಯದ ಅಭಿವೃದ್ಧಿಗೆ ಸಹಕರಿಸಬೇಕು. ಏಕ ಬಳಕೆ ಪ್ಲಾಸ್ಟಿಕ್ ನಿಷೇಧ ಇದ್ದರೂ ಇನ್ನೂ ನಗರದ ಕೆಲವು ಅಂಗಡಿಗಳಲ್ಲಿ ಪ್ಲಾಸ್ಟಿಕ್ ಬಳಕೆಯಲ್ಲಿರುವುದು ಕಳವಳಕಾರಿ ಸಂಗತಿ ಎಂದು ಹೇಳಿದರು.ಪ್ಲಾಸ್ಟಿಕ್ ಬಳಕೆ ಮಾಡುವವರಿಗೆ ಈಗಾಗಲೇ ಅನೇಕ ಬಾರಿ ತಿಳುವಳಿಕೆ ನೀಡಲಾಗಿದೆ. ಆದರೂ ಬಳಕೆ ನಿಲ್ಲದಿದ್ದರೆ ದಂಡ ಆಕರಣೆಯಂತಹ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹಿರಿಯ ಆರೋಗ್ಯ ನಿರೀಕ್ಷಕರಾದ ಸುನೀಲ್ ಕುಮಾರ್, ಎಸ್.ಸಂಧ್ಯಾ, ಕಿರಿಯ ಆರೋಗ್ಯ ನಿರೀಕ್ಷಕರಾದ ಅಶೋಕ್ ಕುಮಾರ್, ಮಹಾಲಿಂಗರಾಜ್, ನಯಾಜ್ ಶರೀಫ್ ಹಾಗೂ ಪೌರಕಾರ್ಮಿಕರು ಹಾಜರಿದ್ದರು.