ಕನ್ನಡಪ್ರಭ ವಾರ್ತೆ ಲಕ್ಷ್ಮೇಶ್ವರ
ಜನಸ್ಪಂದನ ಕಾರ್ಯಕ್ರಮದಲ್ಲಿ ಲಕ್ಷ್ಮೇಶ್ವರ ಪಟ್ಟಣ ಸೇರಿದಂತೆ ತಾಲೂಕಿನ ಅನೇಕ ಗ್ರಾಮಗಳ ಸಾರ್ವಜನಿಕರು ಸಮಸ್ಯೆಗಳನ್ನು ಹೊತ್ತುಕೊಂಡು ತಾಪಂ ಕಚೇರಿ ಆಗಮಿಸಿದ್ದು ಕಂಡು ಬಂತು.
ಈ ವೇಳೆ ಜಿಲ್ಲಾಧಿಕಾರಿಗಳು ಮನವಿಗೆ ಸ್ವೀಕರಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿ ಸ್ಥಳದಲ್ಲಿಯೇ ಪರಿಹಾರ ನೀಡುವ ಕಾರ್ಯ ಮಾಡಿದರು.ಈ ವೇಳೆ ಶಾಸಕ ಡಾ. ಚಂದ್ರು ಲಮಾಣಿ ಪುರಸಭೆಯ ಮುಖ್ಯಾಧಿಕಾರಿ ಎಚ್. ಮಹೇಶ ಅವರನ್ನು ತರಾಟೆ ತೆಗೆದುಕೊಂಡು ಬೇಸಿಗೆ ಕಾಲದಲ್ಲಿ ತಿಂಗಳಿಗೊಮ್ಮೆ ನೀರು ಬಿಡುತ್ತಿದ್ದರು, ಅದು ಸರಿ. ಈಗಲೂ ಸೋಮೇಶ್ವರ ನಗರಕ್ಕೆ ನೀರು ಬಿಡಿ ಎಂದು ನಾನು ನಿಮಗೆ ಫೋನ್ ಮಾಡಿ ಹೇಳಿದ್ದೇನೆ. ಆದಾರೂ ಬೇಜವ್ದಾರಿ ತೋರುತ್ತಿದ್ದೀರಿ. ಒಬ್ಬ ಮುಖ್ಯಾಧಿಕಾರಿ ಬೆಳಗ್ಗೆ ಎದ್ದು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು, ಶಿರಹಟ್ಟಿ ಮುಂಡರಗಿ ಮುಖ್ಯಾಧಿಕಾರಿಗಳನ್ನು ನೋಡಿ ಕಲಿತುಕೊಳ್ಳಿ ಎಂದು ತರಾಟೆ ತೆಗೆದುಕೊಂಡರು. ನಂತರ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಅವರು ಮುಖ್ಯಾಧಿಕಾರಿ ಎಚ್. ಮಹೇಶ ಅವರಿಗೆ ಮೊದಲು ಜನರ ಸಮಸ್ಯೆಗಳನ್ನು ಬಗೆಹರಿಸಿ ಎಂದು ಸೂಚಿಸಿದರು.
ಹೊಲದಲ್ಲಿನ ಬೆಳೆಯನ್ನು ಕಾಡು ಹಂದಿಗಳು, ಜಿಂಕೆ, ಮಂಗಗಳು ತಿಂದು ಹಾಳು ಮಾಡುತ್ತಿದ್ದು ಸೂಕ್ತ ಪರಿಹಾರ ಮಾಡಿಕೊಡುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗುಲಗಂಜಿಕೊಪ್ಪ ಹಾಗೂ ಗೋವನಾಳ ಗ್ರಾಮಸ್ಥರು ಹಾಗೂ ಭಾರತೀಯ ಕಿಸಾನ ಸಂಘದ ಅಧ್ಯಕ್ಷ ಟಾಕಪ್ಪ ಸಾತಪೂತೆ ಅವರೊಂದಿಗೆ ಮನವಿ ಮಾಡಿದರು.
ಕೊಂಡಿಕೊಪ್ಪ ಗ್ರಾಮದಲ್ಲಿನ ಆಶ್ರಯ ನಿವಾಸಿಗಳ ಕಾಲೋನಿಯಲ್ಲಿ ರಸ್ತೆ, ಚರಂಡಿ ಇಲ್ಲ. ಹೀಗಾಗಿ, ಕಳೆದ 70 ವರ್ಷಗಳಿಂದ ಇಲ್ಲಿನ ನಿವಾಸಿಗಳು ಸೌಲಭ್ಯ ವಂಚಿತರಾಗಿ ಜೀವನ ಸಾಗಿಸುತ್ತಿದ್ದಾರೆ. ಇದಕ್ಕೆ ಸೂಕ್ತ ಪರಿಹಾರ ನೀಡುವಂತೆ ಮಂಜುನಾಥ ರಾಠೋಡ ಮನವಿ ಮಾಡಿದರು.
ದೂದಪೀರಾ ದರ್ಗಾದ ಅಕ್ಕ ಪಕ್ಕದಲ್ಲಿ ಚರಂಡಿ ನಿರ್ಮಾಣ ಕಾರ್ಯ ಮಾಡುವಲ್ಲಿ ತೊಂದರೆಯಾಗುತ್ತಿದ್ದು ಸೂಕ್ತ ಪರಿಹಾರ ನಿಡುವಂತೆ ದರ್ಗಾ ಕಮಿಟಿ ಸದಸ್ಯರು ಮನವಿ ಮಾಡಿದರು.
ಈ ವೇಳೆ ಕಾರ್ಮಿಕ ಇಲಾಖೆಯ ವತಿಯಿಂದ ಕಟ್ಟಡ ಕಾರ್ಮಿಕರ ಹಾಗೂ ಇತರೆ ಕಾರ್ಮಿಕರ ಮಕ್ಕಳಿಗೆ ಸರ್ಕಾರ ಕೊಡ ಮಾಡಿದ 20 ಲ್ಯಾಪ್ ಟ್ಯಾಪ್‌ಗಳನ್ನು ವಿತರಣೆ ಮಾಡಲಾಯಿತು.
ಈ ವೇಳೆ ಶಾಸಕ ಡಾ. ಚಂದ್ರು ಲಮಾಣಿ, ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಸಿಇಒ ಭರತ ಎಸ್. ತಹಸೀಲ್ದಾರ್ ವಾಸುದೇವಸ್ವಾಮಿ, ಇಒ ಕೃಷ್ಣಪ್ಪ ಧರ್ಮರ, ಮುಖ್ಯಾಧಿಕಾರಿ ಮಹೇಶ ಹಡಪದ ಸೇರಿದಂತೆ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ಹಾಜರಿದ್ದರು.