ರೋಣ: ಗ್ರಾಮೀಣ ಭಾಗದಲ್ಲಿ ಜನರು ಬೇಸಿಗೆಯಲ್ಲಿ ಕೆಲಸವಿಲ್ಲದೇ ಗುಳೆ ಹೋಗುತ್ತಾರೆ, ಅದನ್ನು ತಪ್ಪಿಸಲು ನಿಮ್ಮೆಲ್ಲರ ಸಹಕಾರ ಬಹಳ ಮುಖ್ಯ, ಪ್ರತಿ ಮನೆಗೆ ಹೋಗಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಏ.1ರಿಂದ ಸಮುದಾಯ ಕಾಮಗಾರಿ ಪ್ರಾರಂಭವಾಗುತ್ತದೆ ಎಂಬುದನ್ನು ಮನವರಿಕೆ ಮಾಡಿ ಗುಳೆ ತಪ್ಪಿಸಿ ಎಂದು ಜಿಲ್ಲಾ ಮಾಹಿತಿ ಶಿಕ್ಷಣ ಮತ್ತು ಸಂವಹನ ಸಂಯೋಜಕ ವಿ.ಎಸ್. ಸಜ್ಜನ ಹೇಳಿದರು.
ಏ.1 ರಿಂದ ನಿಮ್ಮ ಗ್ರಾಮದಲ್ಲಿ ಸಮುದಾಯ ಕಾಮಗಾರಿ ಪ್ರಾರಂಭಿಸಲು ತಯಾರಿ ಮಾಡಿಕೊಳ್ಳಲಾಗಿದೆ. ಈಗಾಗಲೇ ಎಲ್ಲ ಗ್ರಾಪಂ ಅಧಿಕಾರಿಗಳಿಗೆ ಜಿಪಂ ಸಿಇಒ ತಿಳಿಸಿದ್ದಾರೆ, ಹಾಗಾಗಿ ಪ್ರತಿ ಗ್ರಾಪಂ ಮಟ್ಟದಲ್ಲಿ ಕೆಲಸ ಪ್ರಾರಂಭವಾಗುತ್ತದೆ. ಕಾಯಕ ಬಂಧುಗಳಾದ ತಾವೆಲ್ಲರೂ ಕೂಲಿಕಾರರ ಆರ್ಥಿಕ ಸಬಲತೆಗಾಗಿ ದುಡಿಯಬೇಕು. ಬಂಧು ಅಂದರೆ ಜನರಿಗೆ ಹತ್ತಿರ ಇದ್ದವರು ಅಂತಾ ಅರ್ಥ ಹಾಗಾಗಿ ದುಡಿಯುವ ವರ್ಗಕ್ಕೆ ಹತ್ತಿರ ಇರುವ ತಮಗೆ ಕಾಯಕ ಬಂಧುಗಳು ಎನ್ನಲಾಗುತ್ತದೆ. ಕೆಲಸದ ಸ್ಥಳದಲ್ಲಿ ನೀರು, ನೆರಳು ಸೇರಿದಂತೆ ಮಕ್ಕಳಿಗಾಗಿಯೇ ಗ್ರಾಮದಲ್ಲಿ ಕೂಸಿನ ಮನೆ ಸಹ ತೆರೆಯಲಾಗಿದ್ದು ಪಾಲಕರು ಮಕ್ಕಳನ್ನು ಅಲ್ಲಿ ಬಿಟ್ಟು ಹೋಗಬೇಕು ಅದನ್ನು ನೀವು ಜನರಿಗೆ ತಿಳಿಸಬೇಕು ಎಂದರು.
ಮುಖ್ಯವಾಗಿ ಕೆಲಸಕ್ಕೆ ಬಂದವರಿಗೆ ಅಳತೆ ತಕ್ಕ ಹಾಗೆ ಕಡೆಯುವದು ಕಡ್ಡಾಯ, ಒಬ್ಬರಿಗೆ ಒಂದು ಅಳತೆ ಮತ್ತೊಬ್ಬರಿಗೆ ಒಂದು ಅಳತೆ ಹೀಗೆ ತಾರತಮ್ಯ ಮಾಡದ ಹಾಗೇ ಕೆಲಸ ಮಾಡುವದು ತಮ್ಮ ಕರ್ತವ್ಯ ದಯವಿಟ್ಟು ಪಾಲಿಸಿ. ಈ ಬಾರಿ ಗ್ರಾಪಂದಿಂದ ನೊಂದಾಯಿಸಲ್ಪಟ್ಟ ಕುಟುಂಬಗಳಲ್ಲಿ ನರೇಗಾ ಯೋಜನೆಯಡಿ ಸಕ್ರಿಯವಲ್ಲದ ಇರುವವರನ್ನು ಗುರುತಿಸಿ ಸದರಿಯವರನ್ನು ಪಾಲ್ಗೊಳ್ಳುವಂತೆ ಮಾಡಲು ಮನೆ ಮನೆಗೆ ತೆರಳಿ ಯೋಜನೆಯಡಿ ದೊರೆಯುವ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸುವಂತೆ ತಿಳಿಸಿದರು.ಗ್ರಾಪಂ ಅಭಿವೃದ್ಧಿ ಅಧಿಕಾರಿ ಬಸವರಾಜ ಶೃಂಗೇರಿ, ತಾಲೂಕು ಮಾಹಿತಿ ಶಿಕ್ಷಣ & ಸಂವಹನ ಸಂಯೋಜಕ ಮಂಜುನಾಥ, ಬಿ.ಎಫ್. ಟಿ ಈರಣ್ಣ ಬೆಲೇರಿ, ಜಿಕೆಎಂ ಚಾಂದಬಿ ಕರ್ನಾಚಿ, ಗ್ರಾಪಂ ಸದಸ್ಯರು, ಕಾಯಕ ಬಂಧುಗಳು ಹಾಗೂ ಗ್ರಾಪಂ ಸಿಬ್ಬಂದಿಗಳು ಇದ್ದರು.