ಜೀತಪದ್ಧತಿ ನಿರ್ಮೂಲನೆಗೆ ಸಾರ್ವಜನಿಕರ ಸಹಕಾರ ಅಗತ್ಯ: ನ್ಯಾಯಾಧೀಶೆ ಶೋಭಾ

KannadaprabhaNewsNetwork | Published : Feb 11, 2024 1:45 AM

ಸಾರಾಂಶ

ಬಾಲ ಕಾರ್ಮಿಕರ ನೇಮಕ ಶಿಕ್ಷಾರ್ಹ ಅಪರಾಧವಾಗಿದ್ದು, ಜೀತ ಪದ್ಧತಿ ನಿರ್ಮೂಲನೆಗೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಜೀತ ಪದ್ಧತಿ ಮುಕ್ತ ರಾಜ್ಯಕ್ಕಾಗಿ ಎಲ್ಲರೂ ಶ್ರಮಿಸಬೇಕು

ಕನ್ನಡಪ್ರಭ ವಾರ್ತೆ ಶಹಾಪುರ

ಸಮಾಜಕ್ಕೆ ಅಂಟಿರುವ ಜೀತಪದ್ಧತಿ ನಿರ್ಮೂಲನೆ ಮಾಡಲು ಅಧಿಕಾರಿಗಳ ಪ್ರಾಮಾಣಿಕ ಪ್ರಯತ್ನ ಮತ್ತು ನಾಗರಿಕರ ಹಾಗೂ ಸಂಘ-ಸಂಸ್ಥೆಗಳ ಪಾತ್ರ ಬಹು ಮುಖ್ಯವಾಗಿದೆ. ಜೀತ ಮುಕ್ತಿಗಾಗಿ ಕಾನೂನು ಜಾರಿಯಿದೆ. ನಾವೆಲ್ಲರೂ ಸರಿಯಾಗಿ ಅರಿತುಕೊಂಡು ನೆಮ್ಮದಿ ಜೀವನ ನಡೆಸಬೇಕು ಎಂದು ನ್ಯಾಯಾಲಯದ ಪ್ರಧಾನ ನ್ಯಾಯಾಧೀಶೆ ಶೋಭಾ ಹೇಳಿದರು.

ನಗರದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಲೂಕು ಪಂಚಾಯ್ತಿ, ಕಂದಾಯ ಇಲಾಖೆ, ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಜೀತ ಪದ್ಧತಿ ನಿರ್ಮೂಲನಾ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಾಲ ಕಾರ್ಮಿಕರ ನೇಮಕ ಶಿಕ್ಷಾರ್ಹ ಅಪರಾಧವಾಗಿದ್ದು, ಜೀತ ಪದ್ಧತಿ ನಿರ್ಮೂಲನೆಗೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಜೀತ ಪದ್ಧತಿ ಮುಕ್ತ ರಾಜ್ಯಕ್ಕಾಗಿ ಎಲ್ಲರೂ ಶ್ರಮಿಸಬೇಕು. ಪುನರ್ವಸತಿ ಕಲ್ಪಿಸುವಾಗ ಸರಿಯಾಗಿ ಸವಲತ್ತು ತಲುಪಿಸಬೇಕು. ಅದಕ್ಕಾಗಿ ಮಾಹಿತಿ ತಿಳಿದುಕೊಂಡು ಕೆಳ ಹಂತದಿಂದ ಕಾರ್ಯಪ್ರವೃತ್ತರಾಗಬೇಕು ಎಂದರು.

ತಾಪಂ ಅಧಿಕಾರಿ ಸೋಮಶೇಖರ ಬಿರಾದಾರ್ ಮಾತನಾಡಿ, ಜೀತ ಪದ್ಧತಿ ಇದೊಂದು ಅನಿಷ್ಟ ಪದ್ಧತಿಯಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಇದರ ಬಗ್ಗೆ ಜಾಗೃತಿ ಮತ್ತು ಅರಿವು ಮೂಡಿಸಬೇಕು. ನಮ್ಮ ಸಂವಿಧಾನದಲ್ಲಿ ಘನತೆಯಿಂದ ಜೀವಿಸಲು ಹಕ್ಕು ಪ್ರಾಪ್ತವಾಗಿದೆ. ಮತ್ತೊಬ್ಬರ ಹಕ್ಕುಗಳನ್ನು ಕಸಿದುಕೊಳ್ಳಲು ಯಾರಿಗೆ ಅಧಿಕಾರ ಇಲ್ಲ ಎಂದರು.

ತಹಸೀಲ್ದಾರ್ ಉಮಾಕಾಂತ ಹಳ್ಳೆ ಮಾತನಾಡಿ, ಬಡವರ ಶೋಷಣೆ ಮಾಡುವ ಜೀತ ಪದ್ಧತಿಯು ಅಮಾನವೀಯ ಮತ್ತು ಶಿಕ್ಷಾರ್ಹ ಅಪರಾಧವಾಗಿದೆ. ಅದರ ಸಂಪೂರ್ಣ ನಿರ್ಮೂಲನಗೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.

ವಕೀಲೆ ಸತ್ಯಮ್ಮ ಹೊಸಮನಿ ಮಾತನಾಡಿದರು. ವಕೀಲರಾದ ಬಸಮ್ಮ ರಾಂಪುರೆ, ಮಲ್ಲಪ್ಪ ಕುರಿ ಸೇರಿದಂತೆ ನ್ಯಾಯಾಂಗ ಇಲಾಖೆ ಸಿಬ್ಬಂದಿಗಳು, ತಾಲೂಕು ಪಂಚಾಯಿತಿ ಸಿಬ್ಬಂದಿಗಳು ಇದ್ದರು.

Share this article