ನೀರಿನ ಮೂಲಗಳ ಸಮೀಕ್ಷೆಗೆ ಸಾರ್ವಜನಿಕರು ಸಹಕರಿಸಿ: ಡಿಸಿ ಡಾ. ಕೆ.ವಿದ್ಯಾಕುಮಾರಿ

KannadaprabhaNewsNetwork |  
Published : Jun 12, 2025, 01:11 AM IST
10ಜಲಮೂಲ | Kannada Prabha

ಸಾರಾಂಶ

ನೀರಾವರಿ ನೀತಿಗಳನ್ನು ರೂಪಿಸಲು ಕೇಂದ್ರ ಜಲ ಸಂಪನ್ಮೂಲ ಸಚಿವಾಲಯದ ವತಿಯಿಂದ 7ನೇ ಸಣ್ಣ ನೀರಾವರಿ ಗಣತಿ - ನೀರಿನ ಮೂಲಗಳ ಸಮೀಕ್ಷೆಯನ್ನು ಜೂನ್‌ನಿಂದ ಅಕ್ಟೋಬರ್ ಅಂತ್ಯದ ವರೆಗೆ ನಡೆಯಲಿದ್ದು, ಸಾರ್ವಜನಿಕರು ಈ ಗಣತಿಗೆ ಸಹಕರಿಸಿ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾ ಕುಮಾರಿ ತಿಳಿಸಿದ್ದಾರೆ.

ನೀರಿನಾಸರೆಗಳ ಗಣತಿ ಕಾರ್ಯಗಳ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆ

ಕನ್ನಡಪ್ರಭ ವಾರ್ತೆ ಉಡುಪಿ

ನೀರಾವರಿ ನೀತಿಗಳನ್ನು ರೂಪಿಸಲು ಕೇಂದ್ರ ಜಲ ಸಂಪನ್ಮೂಲ ಸಚಿವಾಲಯದ ವತಿಯಿಂದ 7ನೇ ಸಣ್ಣ ನೀರಾವರಿ ಗಣತಿ - ನೀರಿನ ಮೂಲಗಳ ಸಮೀಕ್ಷೆಯನ್ನು ಜೂನ್‌ನಿಂದ ಅಕ್ಟೋಬರ್ ಅಂತ್ಯದ ವರೆಗೆ ನಡೆಯಲಿದ್ದು, ಸಾರ್ವಜನಿಕರು ಈ ಗಣತಿಗೆ ಸಹಕರಿಸಿ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾ ಕುಮಾರಿ ತಿಳಿಸಿದ್ದಾರೆ.ಅವರು ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿ 7ನೇ ಸಣ್ಣ ನೀರಾವರಿ ಗಣತಿ ಮತ್ತು ನೀರಿನಾಸರೆಗಳ ಗಣತಿ ಕಾರ್ಯಗಳ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯ ಎಲ್ಲ ವಿಧದ ಸಣ್ಣ ನೀರಾವರಿ ಯೋಜನೆಗಳ, ನೀರಿನ ಆಸರೆಗಳ ಸಮಗ್ರ, ನಂಬಲರ್ಹ ಮೂಲಗಳ ಅಂಕಿಅಂಶಗಳ ಸಂಗ್ರಹಣೆ, ಭವಿಷ್ಯದಲ್ಲಿ ಅವುಗಳ ಸದ್ಬಳಕೆ, ನಿರ್ವಹಣೆ ಹಾಗೂ ಆದಾಯ ಸಂಗ್ರಹಣೆ, ಹೊಸ ಯೋಜನೆಗಳಿಗೆ ರೂಪ ಕೊಡುವುದು ಸೇರಿದಂತೆ ಪರಿಣಾಮಕಾರಿ ಯೋಜನೆಗಳು ಮತ್ತು ನೀತಿಗಳ ನಿರೂಪಣೆ ಕೈಗೊಳ್ಳಲು ಸಣ್ಣ ನೀರಾವರಿ ಗಣತಿ ಮತ್ತು ನೀರಿನಾಸರೆಗಳ ಗಣತಿಗಳು ಅನುಕೂಲವಾಗಿಲಿವೆ ಎಂದರು.ನೀರಿನಾಸರೆಗಳ ಗಣತಿಯಲ್ಲಿ ನೈಸರ್ಗಿಕ ಹಾಗೂ ಮಾನವ ನಿರ್ಮಿತ ಎಲ್ಲ ನೀರಿನ ಆಸರೆಗಳ ಅಚ್ಚುಕಟ್ಟುಗಳ ಪ್ರಮಾಣ ಲೆಕ್ಕಿಸದೇ ಮಾಹಿತಿ ಸಂಗ್ರಹಿಸಲಾಗುವುದು ಎಂದ ಅವರು, ಗ್ರಾಮ ಹಾಗೂ ನಗರ ಅಂತರ್ಜಲ ಯೋಜನೆಗಳಾದ ಅಗೆದ ಬಾವಿ, ವಿವಿಧ ಕೊಳವೆ ಬಾವಿಗಳ ಮಾಹಿತಿ, ಜಲ ಯೋಜನೆಗಳಾದ ಮೇಲ್ಮೈ ಹರಿವು ಹಾಗೂ ಏತ ನೀರಾವರಿ ಯೋಜನೆಗಳನ್ನು ಒಳಗೊಂಡಿರುವಂತೆ ಮಾಹಿತಿ ಕಲೆ ಹಾಕಬೇಕು ಎಂದು ಹೇಳಿದರು.ನೀರಾವರಿ ಅಥವಾ ಇತರೆ ಉದ್ದೇಶಗಳಾದ ಕೈಗಾರಿಕೆ, ಮೀನುಗಾರಿಕೆ, ಕುಡಿಯುವ ನೀರು, ಆಟೋಟ ಮನೋರಂಜನೆ, ಧಾರ್ಮಿಕ ಅಂತರ್ಜಲ ಪುನಃಶ್ಚೇತನ, ಕೃಷಿ ಹೊಂಡ ಮುಂತಾದವುಗಳಲ್ಲಿ ಬಳಕೆಯಾಗುವ ಎಲ್ಲ ನೀರಿನ ಆಸರೆಗಳನ್ನು ಈ ಗಣತಿಯಲ್ಲಿ ಪರಿಗಣಿಸಲಾಗುವುದು ಎಂದು ತಿಳಿಸಿದರು.

ಕಳೆದ ಗಣತಿಯಲ್ಲಿ 18809 ಯೋಜನೆಗಳು:

6ನೇ ಸಣ್ಣ ನೀರಾವರಿ ಗಣತಿ ದತ್ತಾಂಶದ ಅನ್ವಯ ಜಿಲ್ಲೆಯಲ್ಲಿ ಒಟ್ಟು 257 ಗ್ರಾಮಗಳಲ್ಲಿ 18,290 ಅಂತರ್ಜಲ ಯೋಜನೆಗಳು, 181 ಮೇಲ್ಮೈ ಜಲ ಹರಿಯುವ ಯೋಜನೆಗಳು ಮತ್ತು 338 ಏತ ನೀರಾವರಿ ಯೋಜನೆಗಳು ಒಟ್ಟು 519 ಮೇಲ್ಮೈ ಜಲ ಯೋಜನೆಗಳಾಗಿದ್ದು, ಗಣತಿಯಲ್ಲಿ ಒಟ್ಟು 18809 ಯೋಜನೆಗಳು ಇರುವುದು ಕಂಡುಬಂದಿರುತ್ತದೆ. ಪ್ರಸ್ತುತ ದಿನಗಳಲ್ಲಿ ಅಂತರ್ಜಲ ಯೋಜನೆಗಳು ಹೆಚ್ಚಾಗಿರಬಹುದು. ಜಿಲ್ಲೆಯ ಪ್ರತಿಯೊಂದು ಸಣ್ಣ ನೀರಾವರಿ ಹಾಗೂ ನೀರಿನಾಸರೆಗಳ ಗಣತಿಯ ದತ್ತಾಂಶಗಳನ್ನು ಯಾವುದೇ ಲೋಪವಿಲ್ಲದಂತೆ ಕ್ರೋಢೀಕರಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಸಹಾಯಕ ಕಮೀಷನರ್ ರಶ್ಮಿ ಎಸ್., ಮಂಗಳೂರು ಸಣ್ಣ ನೀರಾವರಿ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಅಲ್ವಿನ್ ಅಗೇರ, ವಿವಿಧ ಜಿಲ್ಲಾಮಟ್ಟದ ಅಧಿಕಾರಿಗಳು, ತಹಸೀಲ್ದಾರರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ