ಇಬ್ಬರು ನಕಲಿ ವೈದ್ಯರ ಕ್ಲಿನಿಕ್ ಸೀಜ್

KannadaprabhaNewsNetwork |  
Published : Jun 12, 2025, 01:09 AM IST
ಬಳ್ಳಾರಿಯ ಕೊಳಗಲ್ಲು ಗ್ರಾಮದಲ್ಲಿ ನಕಲಿ ವೈದ್ಯರ ಕ್ಲಿನಿಕ್‌ನ್ನು ತಾಲೂಕು ವೈದ್ಯಾಧಿಕಾರಿಗಳು ಸೀಜ್ ಮಾಡಿದರು.  | Kannada Prabha

ಸಾರಾಂಶ

ಯಾವುದೇ ವೈದ್ಯಕೀಯ ಪದವಿ ಪಡೆಯದೇ ಔಷಧಿಗಳ ಮಾಹಿತಿ ಪಡೆದುಕೊಂಡು ಜನತೆಗೆ ತಾವು ವೈದ್ಯರೆಂದು ಸುಳ್ಳು ಹೇಳಿ ವೈದ್ಯ ವೃತ್ತಿ ಮಾಡುತ್ತಿದ್ದ ಇಬ್ಬರು ನಕಲಿ ವೈದ್ಯರ ಕ್ಲಿನಿಕ್‌ಗಳನ್ನು ಕೊಳಗಲ್ಲು ಗ್ರಾಮದಲ್ಲಿ ಸೀಜ್ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಬಳ್ಳಾರಿ

ಯಾವುದೇ ವೈದ್ಯಕೀಯ ಪದವಿ ಪಡೆಯದೇ ಔಷಧಿಗಳ ಮಾಹಿತಿ ಪಡೆದುಕೊಂಡು ಜನತೆಗೆ ತಾವು ವೈದ್ಯರೆಂದು ಸುಳ್ಳು ಹೇಳಿ ವೈದ್ಯ ವೃತ್ತಿ ಮಾಡುತ್ತಿದ್ದ ಇಬ್ಬರು ನಕಲಿ ವೈದ್ಯರ ಕ್ಲಿನಿಕ್‌ಗಳನ್ನು ಕೊಳಗಲ್ಲು ಗ್ರಾಮದಲ್ಲಿ ಸೀಜ್ ಮಾಡಲಾಗಿದೆ.

ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರ ಸೂಚನೆ ಮೇರೆಗೆ ಬಳ್ಳಾರಿ ತಾಲೂಕು ಆರೋಗ್ಯಾಧಿಕಾರಿ ಡಾ. ಅಬ್ದುಲ್ಲಾ ಆರ್. ನೇತೃತ್ವದ ತಂಡವು ಕುರುಗೋಡು ತಾಲೂಕಿನ ಕೊಳಗಲ್ಲು ಗ್ರಾಮದಲ್ಲಿ ಸಾರ್ವಜನಿಕರಿಗೆ ತಾವು ವೈದ್ಯರೆಂದು ಬಿಂಬಿಸಿ ಯಾವುದೇ ವೈದ್ಯಕೀಯ ಪದವಿ ಪಡೆಯದೇ ಕೇವಲ ಪಿಯುಸಿ ತನಕ ಓದಿಕೊಂಡು ಔಷಧಿಗಳ ಬಗ್ಗೆ ಮಾಹಿತಿ ಪಡೆದುಕೊಂಡು ಜನತೆಗೆ ಚಿಕಿತ್ಸೆ ನೀಡುತ್ತಿದ್ದ ಮಹೇಶ್ ಕ್ಲಿನಿಕ್, ಮೆಹಬೂಬ್ ಬಾಷ ಕ್ಲಿನಿಕ್‌ಗಳನ್ನು ಸೀಜ್ ಮಾಡಿ ಜಿಲ್ಲಾಧಿಕಾರಿಗಳ ಮುಂದಿನ ಕ್ರಮಕ್ಕಾಗಿ ವರದಿ ನೀಡಲಾಗಿದೆ.

ಸಾರ್ವಜನಿಕರು ತಮ್ಮ ಆರೋಗ್ಯದ ದೃಷ್ಟಿಯಿಂದ ಅಧಿಕೃತ ವೈದ್ಯ ಪದವಿ ಪಡೆದ ವೈದ್ಯರ ಬಳಿ ತಪಾಸಣೆ ಮಾಡಿಸಬೇಕು. ಅವರಿಂದಲೇ ಚಿಕಿತ್ಸೆ ಪಡೆಯುವುದರಿಂದ ಆರೋಗ್ಯದ ಮೇಲೆ ಉಂಟಾಗಬಹುದಾದ ಗಂಭೀರ ಪರಿಣಾಮಗಳನ್ನು ತಡೆಯಬಹುದಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಯಲ್ಲಾ ರಮೇಶ್ ಬಾಬು ತಿಳಿಸಿದ್ದಾರೆ.

ಗ್ರಾಮಗಳಲ್ಲಿ ವೈದ್ಯ ವೃತ್ತಿ ಮಾಡುತ್ತಿರುವವರು ಕಂಡುಬಂದಲ್ಲಿ ಅವರ ವೈದ್ಯಕೀಯ ಪದವಿ ಮಾಹಿತಿ ಪಡೆದುಕೊಂಡು ಚಿಕಿತ್ಸೆ ಪಡೆಯಬೇಕು. ಒಂದು ವೇಳೆ ನಕಲಿ ವೈದ್ಯರು ಎಂದು ಕಂಡುಬಂದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಾರ್ಯಾಲಯಕ್ಕೆ ದೂರು ನೀಡಿದರೆ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮ 2007 ರಡಿ ಕ್ರಮ ಜರುಗಿಸಬಹುದಾಗಿದೆ ಎಂದು ಹೇಳಿದ್ದಾರೆ.

ದಾಳಿಯ ವೇಳೆ ಕುರುಗೋಡು ವೈದ್ಯಾಧಿಕಾರಿ ಡಾ. ಮಂಜುನಾಥ ಜವಳಿ, ಜಿಲ್ಲಾ ಕೆಪಿಎಂಇ ವಿಭಾಗದ ಆರೋಗ್ಯ ನಿರೀಕ್ಷಣಾಧಿಕಾರಿ ಅರುಣ್ ಕುಮಾರ್, ಗೋಪಾಲ್ ಕೆ.ಎಚ್. ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವ್ಯಕ್ತಿಯ ಅಕ್ರಮ ಬಂಧನದಲ್ಲಿಟ್ಟಿದ್ದಕ್ಕೆ ಸರ್ಕಾರಕ್ಕೆ ದಂಡ!
ಯಶವಂತಪುರ ಮೆಟ್ರೋ ಪ್ರವೇಶದ್ವಾರ ಸ್ಥಳಾಂತರ