ಸಾರ್ವಜನಿಕ ಸನ್ಮಾನ ಡಾ. ಶ್ರೀಧರ್ ವ್ಯಕ್ತಿತ್ವದ ಸೂಚಿ: ಡಾ. ನಿರಂಜನ ವಾನಳ್ಳಿ

KannadaprabhaNewsNetwork |  
Published : Jun 08, 2026, 03:45 AM IST
ಫೋಟೋ: ೭ಪಿಟಿಆರ್- ಅಭಿನಂದನೆ ೧ ಶ್ರೀಧರಾಭಿವಂದನ ಕಾರ್ಯಕ್ರಮವನ್ನು ಡಾ. ನಿರಂಜನ ವಾನಳ್ಳಿ ಉದ್ಘಾಟಿಸಿದರು. ಫೋಟೋ: ೭ಪಿಟಿಆರ್- ಅಭಿನಂದನೆ ೨ಶ್ರೀಧರಾಭಿವಂದನ ಕಾರ್ಯಕ್ರಮದಲ್ಲಿ `ಸಿರಿಗಂಧ' ಕೃತಿ ಲೋಕಾರ್ಪಣೆಗೊಳಿಸಲಾಯಿತು. | Kannada Prabha

ಸಾರಾಂಶ

ಪುತ್ತೂರಿನಲ್ಲಿ ಎಲ್ಲ ಬಗೆಯ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಡಾ. ಎಚ್.ಜಿ. ಶ್ರೀಧರ್ ಅವರು ಒಳ್ಳೆಯದನ್ನು ಮಾಡಿರುವ ಕಾರಣ ಅಭಿನಂದಿಸಲ್ಪಡುತ್ತಿದ್ದಾರೆ. ಸಾರ್ವಜನಿಕರು ಮಾಡುವ ಈ ಸನ್ಮಾನವು ಡಾ. ಶ್ರೀಧರ್ ಅವರ ವ್ಯಕ್ತಿತ್ವದ ಸೂಚಿಯಾಗಿದೆ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯದ ನಿಕಟಪೂರ್ವ ಕುಲಪತಿ ಡಾ. ನಿರಂಜನ ವಾನಳ್ಳಿ ಅಭಿಪ್ರಾಯಪಟ್ಟರು.

ಪುತ್ತೂರು: ಪುತ್ತೂರಿನಲ್ಲಿ ಎಲ್ಲ ಬಗೆಯ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಡಾ. ಎಚ್.ಜಿ. ಶ್ರೀಧರ್ ಅವರು ಒಳ್ಳೆಯದನ್ನು ಮಾಡಿರುವ ಕಾರಣ ಅಭಿನಂದಿಸಲ್ಪಡುತ್ತಿದ್ದಾರೆ. ಸಾರ್ವಜನಿಕರು ಮಾಡುವ ಈ ಸನ್ಮಾನವು ಡಾ. ಶ್ರೀಧರ್ ಅವರ ವ್ಯಕ್ತಿತ್ವದ ಸೂಚಿಯಾಗಿದೆ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯದ ನಿಕಟಪೂರ್ವ ಕುಲಪತಿ ಡಾ. ನಿರಂಜನ ವಾನಳ್ಳಿ ಅಭಿಪ್ರಾಯಪಟ್ಟರು. ಡಾ. ಶ್ರೀಧರ್ ಶಿಷ್ಯವೃಂದ ಹಾಗೂ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ಗಳ ಜಂಟಿ ಆಶ್ರಯದಲ್ಲಿ ಭಾನುವಾರ ಪುತ್ತೂರಿನ ಅನುರಾಗ ವಠಾರದಲ್ಲಿ ನಡೆದ ‘ಶ್ರೀಧರಾಭಿವಂದನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಶ್ರೀಧರ್ ಅವರೊಂದಿಗಿನ ನನ್ನ ಸ್ನೇಹ ಸಂಬಂಧವು ೪ ದಶಕಕ್ಕೂ ಅಧಿಕವಾಗಿದೆ. ನಾವಿಬ್ಬರೂ ಸಮಾನ ಮನಸ್ಕರಾಗಿರುವ ಕಾರಣದಿಂದ ಸುದೀರ್ಘ ಸ್ನೇಹಿತರಾಗಿದ್ದೇವೆ. ನಾನು ಈ ಭಾಗಕ್ಕೆ ಆಗಮಿಸುವ ಸಂದರ್ಭ ಅವರ ಮನೆಯಲ್ಲೇ ಉಳಿದುಕೊಳ್ಳುತ್ತಿದ್ದೆ. ಆದರೆ ಇದೀಗ ಅವರು ತಮ್ಮ ವಾಸ್ತವ್ಯವನ್ನು ಸಾಗರಕ್ಕೆ ಬದಲಾಯಿಸಿರುವ ಕಾರಣ ಈ ಬಾರಿ ಲಾಡ್ಜ್‌ನಲ್ಲಿ ಉಳಿದುಕೊಳ್ಳಬೇಕಾಯಿತು ಎಂದ ಅವರು, ಪುತ್ತೂರಿನಲ್ಲಿ ಕೇವಲ ಕನ್ನಡದ ಮೇಸ್ಟ್ರು ಮಾತ್ರ ಆಗಿರಲಿಲ್ಲ. ಪತ್ರಿಕೋದ್ಯಮ ವಿಭಾಗದಲ್ಲಿಯೂ ಸಾಕಷ್ಟು ಕೆಲಸ ಮಾಡಿ ಸಾಕಷ್ಟು ಪತ್ರಕರ್ತ ಶಿಷ್ಯರನ್ನು ಹೊಂದಿದ್ದಾರೆ. ಅವರ ಆಸಕ್ತಿಯ ಅರಹು ಎಷ್ಟಿದೆಯೆಂದರೆ ಯಕ್ಷಗಾನದ ಪಾತ್ರವನ್ನೂ ಅವರು ಮಾಡಿದ್ದಾರೆ. ಒಳ್ಳೆಯವರನ್ನು ಜನ ಗುರುತಿಸುತ್ತಾರೆ ಎಂಬುದಕ್ಕೆ ಡಾ. ಶ್ರೀಧರ್ ಸಾಕ್ಷಿಯಾಗಿದ್ದಾರೆ ಎಂದರು.

ವಾಟ್ಸಪ್ ಯುನಿವರ್ಸಿಟಿ ಕಾರಣದಿಂದಾಗಿ ಈಗ ಯಾರಿಗೂ ಪುಸ್ತಕದ ಸಹವಾಸ ಬೇಡವಾಗಿದೆ. ವಿದ್ಯಾರ್ಥಿಗಳು ಮುದ್ರಿತ ಪುಸ್ತಕ ಮತ್ತು ಸಾಹಿತ್ಯಗಳನ್ನು ಓದಲು ಬಯಸುವುದಿಲ್ಲ. ಓದಿನ ಶತ್ರುತ್ವ ಎಲ್ಲೆಡೆ ನೋಡುತ್ತಿದ್ದೇವೆ. ಇವೆಲ್ಲದರ ನಡುವೆ ಈ ಕಾರ್ಯಕ್ರಮದ ಮೂಲಕ ಪುತ್ತೂರಿನಲ್ಲಿ ಕನ್ನಡದ ತೇರನ್ನು ಮುಂದಕ್ಕೆಳೆಯಲು ಯುವ ಸಮುದಾಯ ಮುಂದಾಗಿರುವುದು ಶ್ಲಾಘನೀಯ. ಸಾಮಾಜಿಕ ಜಾಲತಾಣಗಳಿಂದಾಗಿ ಇದೀಗ ಎಲ್ಲರೂ ಪತ್ರಕರ್ತರೇ ಆಗಿದ್ದಾರೆ. ರಾಜಧಾನಿಯಲ್ಲಿ ಪುಸ್ತಕ ಪ್ರಕಟಗೊಂಡರೆ ಅದೊಂದು ದೊಡ್ಡ ಸುದ್ದಿಯಾಗುತ್ತಿದೆ. ಆದರೆ ಗ್ರಾಮಾಂತರ ಪ್ರದೇಶಗಳಲ್ಲಿ ಪುಸ್ತಕ ಪ್ರಕಟಣೆಯಾದಾಗ ದೊಡ್ಡ ಸುದ್ಧಿ ಆಗುವುದೇ ಇಲ್ಲ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಮುಂಬೈ ವಿಶ್ವವಿದ್ಯಾಲಯದ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಡಾ. ತಾಳ್ತಜೆ ವಸಂತ ಕುಮಾರ್ ಮಾತನಾಡಿ, ಡಾ. ಶ್ರೀಧರ್ ಅವರು ಬೆಳೆಸಿದ ಯುವ ಮನಸ್ಸುಗಳು ಅವರಿಗೆ ಅಭಿನಂದನೆ ಸಲ್ಲಿಸುತ್ತಿರುವುದು ಅವರ ಕಾಯಕ ನಿಷ್ಠೆಗೆ ಸಾಕ್ಷಿಯಾಗಿದೆ. ಅವರ ಕಾದಂಬರಿಗಳು ಹೊಸತನದ ದಾರಿ ತೋರಿಸಿಕೊಟ್ಟಿದೆ ಎಂದರು. ಕಸಾಪ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಮಾತನಾಡಿ, ಡಾ. ಶ್ರೀಧರ್ ಅವರ ಅಭಿವಂದನೆಯು ಭಾವನಾತ್ಮಕ ಕಾರ್ಯಕ್ರಮವಾಗಿದೆ. ೨೧ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದರು. ಆ ಬಳಿಕ ತಾಲೂಕು ಮಟ್ಟದಲ್ಲಿ ಸಾಹಿತ್ಯ ಸಮ್ಮೇಳನ ನಡೆಯದಿರುವ ಕಾರಣ ಇದೀಗ ಅವರಿಗೆ ಬೀಳ್ಕೊಡುಗೆ ಸಾಧ್ಯವಿಲ್ಲ. ಅತ್ಯಧ್ಬುತವಾಗಿರುವ ಕೃತಿಗಳನ್ನು ಬರೆದಿರುವ ಅವರ ಕಾದಂಬರಿಗಳ ಪ್ರತಿ ಪಾತ್ರದಲ್ಲೂ ಅವರು ಪರಕಾಯ ಪ್ರವೇಶ ಮಾಡಿದ್ದಾರೆ. ಕನ್ನಡ ಸಾರಸ್ವತ ಲೋಕಕ್ಕೆ ಅವರ ಕೊಡುಗೆ ಅಪಾರವಾಗಿದೆ. ಕಾಲೇಜಿನ ವಿದ್ಯಾಂಗ ಕುಲಸಚಿವರಾಗಿದ್ದರೂ ತನ್ನ ಸರಳತೆಯನ್ನು ಎಂದಿಗೂ ಅವರು ಮರೆತವರಲ್ಲ. ಪುತ್ತೂರಿನಲ್ಲಿದ್ದು ಸಾಹಿತ್ಯಕ್ಕೆ ಜ್ಞಾನ ಪೀಠ ಪ್ರಶಸ್ತಿ ಪಡೆದಿರುವ ಡಾ. ಕೋಟ ಶಿವರಾಮ ಕಾರಂತರ ಸಾಲಿಗೆ ಇದೀಗ ಡಾ. ಶ್ರೀಧರ್ ಅವರು ಸೇರಿಕೊಂಡಿದ್ದಾರೆ ಎಂದು ಹೇಳಿದರು.

ಪುತ್ತೂರು ಕರ್ನಾಟಕ ಸಂಘದ ಅಧ್ಯಕ್ಷ ಬಿ. ಪುರಂದರ ಭಟ್, ದ.ಕ. ಜಿಲ್ಲಾ ಕಸಾಪ ಗೌರವ ಕೋಶಾಧ್ಯಕ್ಷ ಬಿ. ಐತಪ್ಪ ನಾಯ್ಕ್ ಶುಭ ಹಾರೈಸಿದರು.

ಈ ಸಂದರ್ಭ ಡಾ. ಶ್ರೀಧರ್ ಅವರ ಬಗೆಗಿನ ‘ಸಿರಿಗಂಧ’ ಕೃತಿಯನ್ನು ಲೋಕಾರ್ಪಣೆಗೊಳಿಸಲಾಯಿತು. ಕೃತಿಯ ಸಂಪಾದಕ ರಾಕೇಶ್ ಕಮ್ಮಜೆ ಕೃತಿ ಬಗ್ಗೆ ಮಾತನಾಡಿದರು. ಪತ್ರಕರ್ತ ಶಿವಪ್ರಸಾದ್ ಸ್ವಾಗತಿಸಿದರು. ಅರುಣ್ ಕಿರಿಮಂಜೇಶ್ವರ ವಂದಿಸಿದರು. ಸುಷ್ಮಾ ಸದಾಶಿವ ನಿರೂಪಿಸಿದರು. ಅಪರಾಹ್ನ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಪುತ್ತೂರು ವಿವೇಕಾನಂದ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಡಾ. ಎಚ್. ಮಾಧವ ಭಟ್ ಅಭಿನಂದನಾ ನುಡಿಗಳನ್ನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ಯಾಸ್ ಗೀಸರ್ ಸೋರಿಕೆ: ಪ್ರವಾಸಿ ಯುವತಿ ಸಾವು
ಜಿಲ್ಲೆಯ ಗೌರವ ಹೆಚ್ಚಿಸುವ ಕಾರ್ಯ ಮಾಡುವೆ: ಸಚಿವ ಖಾದರ್