ಕನ್ನಡಪ್ರಭ ವಾರ್ತೆ ಬೆಂಗಳೂರು
ಚಿಕ್ಕಬಳ್ಳಾಪುರ ನಗರದ ಸದಾಶಿವನಗರ ಬಡಾವಣೆಯ ನಾಗರಿಕ ಸೌಲಭ್ಯ ನಿವೇಶನವನ್ನು ಕಾಂಗ್ರೆಸ್ ಭವನ ಟ್ರಸ್ಟ್‌ಗೆ ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರ (ಸಿಯುಡಿಎ) ನೋಂದಣಿ ಮಾಡಿಕೊಟ್ಟಿರುವುದನ್ನು ರದ್ದುಪಡಿಸುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.ಈ ಕುರಿತು ಬೆಂಗಳೂರಿನ ಕಾವಲ್ ಬೈರಸಂದ್ರದ ಎಂಎಂ ಬಡಾವಣೆ ನಿವಾಸಿ ಬಿ.ಕೃಷ್ಣಮೂರ್ತಿ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯಲ್ಲಿ ರಾಜ್ಯ ನಗರಾಭಿವೃಧ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ, ಸಿಯುಡಿಎ ಆಯುಕ್ತರು, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರು ಮತ್ತು ಕೆಪಿಸಿಸಿಯನ್ನು ಪ್ರತಿವಾದಿ ಮಾಡಲಾಗಿದೆ. ಅರ್ಜಿ ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.
ಅರ್ಜಿದಾರರ ಆಕ್ಷೇಪ:ಚಿಕ್ಕಬಳ್ಳಾಪುರ ತಾಲೂಕಿನ ಅನಕನೂರು ಗ್ರಾಮದಲ್ಲಿ ಸದಾಶಿವನಗರ ಬಡಾವಣೆ ನಿರ್ಮಾಣಕ್ಕೆ ರಸ್ತೆ, ಉದ್ಯಾನ ಮತ್ತು ನಾಗರಿಕ ಸೌಲಭ್ಯ ನಿವೇಶನ ಜಾಗ ಮೀಸಲಿಡಬೇಕೆಂಬ ಷರತ್ತಿನೊಂದಿಗೆ ಪ್ರಾಧಿಕಾರವು 2025ರ ಅ.3ರಂದು ಸಂಭಾವ್ಯ ಅನುಮೋದನೆ ನೀಡಿತ್ತು. 3,404.26 ಚದರ ಮೀಟರ್ ಅನ್ನು ನಾಗರಿಕ ಸೌಲಭ್ಯ ನಿವೇಶನಕ್ಕೆ ಹಾಗೂ 20,467.20 ಚದರ ಮೀಟರ್ ಜಾಗವನ್ನು ಉದ್ಯಾನ, ಮುಕ್ತ ಪ್ರದೇಶಕ್ಕೆ ಪ್ರಾಧಿಕಾರಕ್ಕೆ ಭೂ ಮಾಲೀಕರು ಬಿಟ್ಟುಕೊ ಕ್ರಯ ಮಾಡಿಕೊಟ್ಟಿದ್ದರು.
ಪಾರ್ಕ್, ಸಿಎ ಸೈಟ್ ಮತ್ತು ರಸ್ತೆಗಳಿಗೆ ಮೀಸಲಿಟ್ಟ ಜಾಗವನ್ನು ತನ್ನ ಸುಪರ್ದಿಯಲ್ಲಿಟ್ಟುಕೊಂಡು ಪ್ರಾಧಿಕಾರ ಸದಾಶಿವನಗರ ಬಡಾವಣೆಗೆ 2025ರ ಫೆ.7ರಂದು ಅಂತಿಮ ಅನುಮೋದನೆ ನೀಡಿ ಆದೇಶಿಸಿತ್ತು.ನೋಂದಣಿ ರದ್ದು ಮಾಡಬೇಕು
ಆದರೆ, ಪ್ರಾಧಿಕಾರವು ಸಿಎ ನಿವೇಶನವನ್ನು 2025ರ ಜು.1ರಂದು ಕಾಂಗ್ರೆಸ್ ಭವನ ಟ್ರಸ್ಟ್ ಮಾರಾಟ ಮಾಡಿ ಶುದ್ಧಕ್ರಯ ನೋಂದಣಿ ಮಾಡಿಕೊಟ್ಟಿದೆ. ರಾಜಕೀಯ ಪಕ್ಷದ ಕಚೇರಿಗೆ ಭೂಮಿ ಮಂಜೂರು ಮಾಡಿರುವುದು ಕಾನೂನಿಗೆ ವಿರುದ್ಧವಾಗಿದೆ. ಸಾರ್ವಜನಿಕ ಉದ್ದೇಶಕ್ಕೆ ಮೀಸಲಿಟ್ಟಿರುವ ಜಾಗವನ್ನು ಖಾಸಗಿ ವ್ಯಕ್ತಿಗಳ ಬಳಕೆಗೆ ವರ್ಗಾಯಿಸಿರುವುದು ಅಕ್ರಮ. ಆದ್ದರಿಂದ ಪ್ರಾಧಿಕಾರ ನಾಗರಿಕ ಸೌಲಭ್ಯ ನಿವೇಶನವನ್ನು ಕಾಂಗ್ರೆಸ್ ಭವನ ಟ್ರಸ್ಟ್‌ಗೆ ನೋಂದಣಿ ಮಾಡಿರುವುದನ್ನು ರದ್ದುಪಡಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.