ಪ್ರಿಯತಮನ ಜತೆ ಜಗಳ:ಪಿಜಿಯಲ್ಲಿನೇಣಿಗೆ ಶರಣಾದ ಬಿಬಿಎ ವಿದ್ಯಾರ್ಥಿನಿ

KannadaprabhaNewsNetwork |  
Published : Oct 19, 2025, 01:00 AM IST
Sana | Kannada Prabha

ಸಾರಾಂಶ

ವೈಯಕ್ತಿಕ ಕಾರಣದ ಹಿನ್ನೆಲೆಯಲ್ಲಿ ಬೇಸರಗೊಂಡು ಖಾಸಗಿ ಕಾಲೇಜಿನ ಎರಡನೇ ವರ್ಷದ ಬಿಬಿಎ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ವೈಯಕ್ತಿಕ ಕಾರಣದ ಹಿನ್ನೆಲೆಯಲ್ಲಿ ಬೇಸರಗೊಂಡು ಖಾಸಗಿ ಕಾಲೇಜಿನ ಎರಡನೇ ವರ್ಷದ ಬಿಬಿಎ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕಾಡುಸೊಣ್ಣಪ್ಪನಹಳ್ಳಿಯ ಗ್ರೀನ್‌ ಗಾರ್ಡನ್ ಲೇಔಟ್‌ನ ಪಿಜಿ ನಿವಾಸಿ ಸನಾ ಪರ್ವಿನ್‌ (19) ಮೃತ ದುರ್ದೈವಿ. ಪಿಜಿಯಲ್ಲಿ ಶುಕ್ರವಾರ ಮಧ್ಯಾಹ್ನ ಸನಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಕೆಲ ಹೊತ್ತಿನ ಬಳಿಕ ಪಿಜಿಗೆ ಮೃತಳ ಸ್ನೇಹಿತೆಯರು ಮರಳಿದಾಗ ಘಟನೆ ಬೆಳಕಿಗೆ ಬಂದಿದೆ.

ಪ್ರೇಮ ಗಲಾಟೆ?

ಕಾಡುಸೊಣ್ಣಪ್ಪನಹಳ್ಳಿ ಸಮೀಪದ ಖಾಸಗಿ ಕಾಲೇಜಿನಲ್ಲಿ ಮಡಿಕೇರಿಯ ಸೋಮವಾರಪೇಟೆ ತಾಲೂಕಿನ ಗರಗಂಡೂರು ಗ್ರಾಮದ ಗುತ್ತಿಗೆದಾರ ಅಬ್ದುಲ್‌ ನಜೀರ್ ಪುತ್ರಿ ಸನಾ ಪರ್ವಿನ್‌ ಓದುತ್ತಿದ್ದಳು. ಅದೇ ಕಾಲೇಜಿನ ಹಳೆಯ ವಿದ್ಯಾರ್ಥಿ ಕೇರಳ ರಾಜ್ಯದ ತ್ರಿಶೂರ್ ಜಿಲ್ಲೆಯ ರಿಫಾಸ್‌ ಜತೆ ಸನಾ ಸ್ನೇಹವಾಗಿತ್ತು. ಈ ಗೆಳೆತನವು ಬಳಿಕ ಪ್ರೇಮವಾಗಿತ್ತು. ಈ ಪ್ರೇಮಿಗಳ ಮಧ್ಯೆ ಸಣ್ಣಪುಟ್ಟ ವಿಚಾರಗಳಿಗೆ ವಿರಸವಾಗಿ ಮುನಿಸುಕೊಳ್ಳುತ್ತಿದ್ದರು. ಅಂತೆಯೇ ಶುಕ್ರವಾರ ಕೂಡ ರಿಫಾಸ್ ಜತೆ ವೈಯಕ್ತಿಕ ವಿಚಾರವಾಗಿ ಸನಾಳಿಗೆ ಜಗಳವಾಗಿದೆ. ಬಳಿಕ ತನ್ನ ಸ್ನೇಹಿತರಿಗೆ ಕಾಲೇಜಿಗೆ ಬರುವುದಿಲ್ಲ ಎಂದು ಹೇಳಿ ಪಿಜಿಯಲ್ಲೇ ಸನಾ ಉಳಿದಿದ್ದಾಳೆ. ಗೆಳತಿಗೆ ಮತ್ತೆ ರಿಫಾಸ್‌ ಕರೆ ಮಾಡಿದ್ದಾನೆ. ಆದರೆ ಆಕೆ ಕರೆ ಸ್ವೀಕರಿಸಿಲ್ಲ, ಇದರಿಂದ ಆತಂಕಗೊಂಡ ರಿಫಾಸ್‌, ಕೂಡಲೇ ತನ್ನ ಸ್ನೇಹಿತರಿಗೆ ಕರೆ ಮಾಡಿ ತಕ್ಷಣವೇ ಸನಾಳ ಪಿಜಿಗೆ ಹೋಗುವಂತೆ ಹೇಳಿದ್ದಾನೆ.

ಆಗ ಮಾಹಿತಿ ಪಡೆದು ಸನಾ ಸ್ನೇಹಿತೆಯರ ಜತೆ ಪಿಜಿ ಬಳಿಗೆ ರಿಫಾನ್ ಸ್ನೇಹಿತರು ಬಂದಿದ್ದಾರೆ. ಅಷ್ಟರಲ್ಲಿ ನೇಣು ಬಿಗಿದುಕೊಂಡು ಸನಾ ಆತ್ಮಹತ್ಯೆ ಮಾಡಿಕೊಂಡಿದ್ದಳು ಎಂದು ಪೊಲೀಸ್ ಮೂಲಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿವೆ.

ಕೇರಳದ ರಿಫಾಸ್ ವಿರುದ್ಧ ಎಫ್‌ಐಆರ್

ತಮ್ಮ ಮಗಳ ಸಾವಿಗೆ ರಿಫಾಸ್‌ ಕಾರಣವಾಗಿದ್ದಾನೆ ಎಂದು ಆರೋಪಿಸಿ ಬಾಗಲೂರು ಠಾಣೆ ಪೊಲೀಸರಿಗೆ ಮೃತಳ ಪೋಷಕರು ದೂರು ನೀಡಿದ್ದಾರೆ. ಅದರನ್ವಯ ಮೃತಳ ಸ್ನೇಹಿತನ ಮೇಲೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಮ್ಮ ಮಗಳು ಸನಾಳಿಗೆ ಪದೇ ಪದೇ ಕರೆ ಹಾಗೂ ಮೆಸೇಜ್ ಮಾಡಿ ರಿಫಾಸ್‌ ಕಿರುಕುಳ ನೀಡುತ್ತಿದ್ದ. ಈ ಬಗ್ಗೆ ನಮಗೆ ಮಗಳು ಹೇಳಿದ್ದಳು. ಈ ವಿಷಯವನ್ನು ಕಾಲೇಜಿನ ಬಿಬಿಎ ವಿಭಾಗದ ಮುಖ್ಯಸ್ಥರಿಗೆ ತಿಳಿಸಿದ್ದೆವು. ಆಗ ರಿಫಾಸ್‌ನನ್ನು ಕರೆಸಿ ಸನಾಳ ತಂಟೆಗೆ ಹೋಗದಂತೆ ಎಚ್‌ಓಡಿ ಎಚ್ಚರಿಕೆ ಕೊಟ್ಟಿದ್ದರು. ಇದಾದ ನಂತರವು ಮಗಳಿಗೆ ಆತನು ಕಿರುಕುಳ ಕೊಡುತ್ತಿದ್ದ. ಈತನ ಹಿಂಸೆ ಸಹಿಸಲಾರದೆ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತಳ ತಂದೆ ನಜೀರ್ ಆರೋಪಿಸಿದ್ದಾರೆ.

PREV

Recommended Stories

ಪಕ್ಷದ ಗೆಲುವಿಗೆ ಕಾರ್ಯಕರ್ತೆಯರು ಶ್ರಮಿಸಿ
ಪ್ರತಿಮೆ ಭಗ್ನಗೊಳಿಸಿದ ಕಿಡಿಗೇಡಿಗಳಿಗೆ ಉಗ್ರ ಶಿಕ್ಷೆ ವಿಧಿಸಿ