ಧಾರವಾಡ:
ಮುಂಬೈ ಪ್ರಾಂತ್ಯದ ಸ್ವಾತಂತ್ರ್ಯ ಹೋರಾಟಗಳ ನೇರ ಪ್ರಭಾವಕ್ಕೆ ಒಳಗಾಗಿದ್ದ ಧಾರವಾಡ, ಬೆಳಗಾವಿ ಸೇರಿ ಉತ್ತರ ಕರ್ನಾಟಕದ ಭಾಗದ ಜನರು ನಿರಂತರವಾಗಿ ಚಳವಳಿಗಳಲ್ಲಿ ಭಾಗವಹಿಸಿದ್ದಾರೆ. ಎಲ್ಲ ರೀತಿಯ ಹೋರಾಟಗಳಲ್ಲಿ ಪಾಲ್ಗೊಂಡು ತಮ್ಮ ಕುಟುಂಬ, ಆಸ್ತಿ ಕಳೆದುಕೊಂಡಿದ್ದಾರೆ. ಅನೇಕರು ಬಲಿದಾನವಾಗಿದ್ದಾರೆ. ಈ ಸಂಗತಿಗಳನ್ನು ಮರು ದಾಖಲಿಸಿ, ಪುಸ್ತಕ ರೂಪದಲ್ಲಿ ಪ್ರಕಟಿಸುವ ಅಗತ್ಯವಿದೆ ಎಂದು ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ ಹೇಳಿದರು.ಕರ್ನಾಟಕ ವಿದ್ಯಾವರ್ಧಕ ಸಂಘದ ಆವರಣದಲ್ಲಿ ಜಿಲ್ಲಾಡಳಿತವು ಧಾರವಾಡ ಪ್ರಾದೇಶಿಕ ಪತ್ರಗಾರ ಇಲಾಖೆಯಿಂದ ಸ್ವಾತಂತ್ರ್ಯ ಸಂಭ್ರಮಾಚರಣೆ ನಿಮಿತ್ತ ಆ. 12ರಿಂದ 14ರ ವರೆಗೆ ಆಯೋಜಿಸಿರುವ ಐತಿಹಾಸಿಕ ದಾಖಲೆ ಹಾಗೂ ಛಾಯಾಚಿತ್ರಗಳ ಪ್ರದರ್ಶನವನ್ನು ಸೋಮವಾರ ಉದ್ಘಾಟಿಸಿದ ಅವರು ಮಾತನಾಡಿದರು.
ಸ್ವಾತಂತ್ರ್ಯ ಸಂಗ್ರಾಮದ ಘಟನೆಗಳು, ಐತಿಹಾಸಿಕತೆ ಮೆಲುಕು ಹಾಕುವ ವಿಶಿಷ್ಟ ಪ್ರಯತ್ನವನ್ನು ಜಿಲ್ಲಾಡಳಿತ ಮಾಡಿದೆ. ನಮ್ಮ ಬಗ್ಗೆ ನಾವೇ ಹೆಮ್ಮೆ ಪಡುವ ಅನೇಕ ಸಂಗತಿ ತಿಳಿಸಲು ಪ್ರಯತ್ನ ಮಾಡಿದ ಜಿಲ್ಲಾಧಿಕಾರಿಗಳು ಅಭಿನಂದನಾರ್ಹ ಎಂದರು.ಧಾರವಾಡದ ಅನೇಕ ಹೋರಾಟಗಾರರು ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಅವರ ಕುರಿತು ಹೆಚ್ಚಿನ ಅಧ್ಯಯನದ ಅಗತ್ಯವಿದೆ. ಸಂಶೋಧಕರು ಅಖಂಡ ಧಾರವಾಡ ಜಿಲ್ಲೆಯನ್ನು ಅನುಲಕ್ಷಿಸಿ ಸ್ವಾತಂತ್ರ್ಯ ಸಂಗ್ರಾಮವನ್ನು ಅಧ್ಯಯನ ಮಾಡಿ, ಪುಸ್ತಕ ಪ್ರಕಟಿಸಬೇಕೆಂದರು.
ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ಉಪನ್ಯಾಸ, ವಸ್ತು ಮತ್ತು ಛಾಯಚಿತ್ರ ಪ್ರದರ್ಶನಗಳು ವಿದ್ಯಾರ್ಥಿ, ಯುವಕರಲ್ಲಿ ಜಿಲ್ಲೆಯ ಬಗ್ಗೆ ಅರಿವು, ಸ್ವಾಭಿಮಾನ ಮೂಡಿಸುತ್ತವೆ. ಜಿಲ್ಲಾಡಳಿತದ ಈ ಪ್ರಯತ್ನ ಸ್ತುತ್ಯರ್ಹ. ನರಗುಂದ, ನವಲಗುಂದ, ಹಾವೇರಿ, ಧಾರವಾಡದ ಅನೇಕ ಸ್ಥಳಗಳು ಚಳವಳಿಗೆ ಹೆಸರಾಗಿದ್ದವು. ಮಹಾತ್ಮ ಗಾಂಧೀಜಿ, ನೇತಾಜಿ ಸುಭಾಶ್ಚಂದ್ರ ಬೋಸ್, ಬಾಲಗಂಗಾಧರ ತೀಲಕರಂತ ಅಪ್ರತಿಮ ಮಹಾನ ನಾಯಕರು ಹಳೆಯ ಧಾರವಾಡ ಜಿಲ್ಲೆಗೆ ಭೇಟಿ ನೀಡಿ, ಹೋರಾಟಗಳಲ್ಲಿ ಭಾಗವಹಿಸಿದ್ದನ್ನು ತಿಳಿದು, ನಮ್ಮಲ್ಲಿ ಸ್ವಾಭಿಮಾನದ ಗರ್ವ ಮೂಡುತ್ತದೆ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ದಿವ್ಯಪ್ರಭು, ಮಾಜಿ ಸಂಸದ ಐ.ಜಿ. ಸನದಿ, ಹುಡಾ ಅಧ್ಯಕ್ಷ ಶಾಕೀರ ಸನದಿ, ಇತಿಹಾಸ ತಜ್ಞ ಪ್ರಾಧ್ಯಾಪಕ ಡಾ. ಐ.ಕೆ. ಪತ್ತಾರ, ಗೋವಾ ಪತ್ರಗಾರ ಇಲಾಖೆ ನಿವೃತ್ತ ನಿರ್ದೇಶಕ ಡಾ. ಅರವಿಂದ ಯಾಳಗಿ, ಹಿರಿಯ ಕಲಾವಿದ ಬಿ. ಮಾರುತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೇಕ್ಕೆರಿ, ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಪ್ರಾದೇಶಿಕ ಪತ್ರಗಾರ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಡಾ. ಮಂಜುಳಾ ಯಲಿಗಾರ ಇದ್ದರು.